ರೈತ ಹೋರಾಟ: ಕೃಷಿ ಕಾಯ್ದೆಗಳನ್ನು ಒಂದೂವರೆ ವ‍ರ್ಷ ತಡೆಹಿಡಿಯಲು ಕೇಂದ್ರ ನಿರ್ಧಾರ!

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಮೂರು ಹೊಸ “ಕೃಷಿ ಕಾಯ್ದೆಗಳ ಅನುಷ್ಠಾನವನ್ನು ಒಂದೂವರೆ ವರ್ಷ ತಡೆಹಿಡಿಯಲಾಗುವುದು” ಎಂದು ಸರ್ಕಾರ ಹೇಳಿರುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.

ಜನವರಿ 20ರಂದು ನಡೆದ ಹೋರಾಟ ನಿರತ ರೈತರು ಮತ್ತು ಸರ್ಕಾರದ ನಡುವಿನ 10ನೇ ಮಾತುಕತೆಯಲ್ಲಿ ಸರ್ಕಾರ ಈ ಬಗ್ಗೆ ಹೇಳಿರುವುದಾಗಿ ರೈತರು ತಿಳಿಸಿದ್ದಾರೆ.

ಈ ಕುರಿತು ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ ಅವರ ಹೇಳಿಕೆಯನ್ನು ವರದಿ ಮಾಡಿರುವ ಎಎನ್‌ಐ, “ಒಂದೂವರೆ ವರ್ಷದವರೆಗೆ ಕಾನೂನುಗಳ ಅನುಷ್ಠಾನವನ್ನು ಸ್ಥಗಿತಗೊಳಿಸಲಾಗುವುದು ಎಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಲು ಕೇಂದ್ರ ಸರ್ಕಾರ ಸಿದ್ಧವಾಗಿರುವುದಾಗಿ ಹೇಳಿದೆ” ಎಂದು ವರದಿ ಮಾಡಿದೆ.

“ಕನಿಷ್ಟ ಬೆಂಬಲ ಬೆಲೆ ಮತ್ತು ಕೃಷಿ ಕಾನೂನುಗಳ ಬಗ್ಗೆ ಸಮಿತಿಯನ್ನು ರಚಿಸಲಾಗುವುದು. ಜೊತೆಗೆ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ನಾವು ನಾಳೆ ಸಭೆ ನಡೆಸಿ, ಈ ಪ್ರಸ್ತಾಪದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಹನ್ನನ್ ಮೊಲ್ಲಾ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಿಕ್ಕಟ್ಟಿನ ಕುರಿತು ಕೇಂದ್ರ ಸರ್ಕಾರ ಮತ್ತು ರೈತರ ನಡುವೆ 9 ಸುತ್ತಿನ ಮಾತುಕತೆಗಳು ನಡೆದಿದ್ದು, ಎಲ್ಲವೂ ವಿಫಲವಾಗಿವೆ. ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೆಕು ಎಂದು ರೈತರು ಒತ್ತಾಯಿಸುತ್ತಿದ್ದರೆ, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ.

ಇದನ್ನೂ ಓದಿ: ‘ಗಣರಾಜ್ಯೋತ್ಸವ ಆಚರಿಸದ ಮದರಸಾಗಳನ್ನು ಮುಚ್ಚಲು ಯೋಗಿ ಸರ್ಕಾರ ಆದೇಶ’ ಹೀಗೊಂದು ಸಂದೇಶ ವೈರಲ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights