ಉತ್ತರಾಖಂಡ ರಾಜ್ಯಕ್ಕೆ ಒಂದು ದಿನದ ಮುಖ್ಯಮಂತ್ರಿಯಾಗಲಿದ್ದಾರೆ ಸೃಷ್ಟಿ ಗೋಸ್ವಾಮಿ!

ಉತ್ತರಾಖಂಡ ರಾಜ್ಯಕ್ಕೆ ಹರಿದ್ವಾರ ಮೂಲದ ಸೃಷ್ಟಿ ಗೋಸ್ವಾಮಿ ಹೆಣ್ಣು ಮಕ್ಕಳ ರಾಷ್ಟ್ರೀಯ ದಿನವಾದ ಜನವರಿ 24 ರಂದು ಒಂದು ದಿನದ ಮುಖ್ಯಮಂತ್ರಿಯಾಗಲಿದ್ದಾರೆ.

‘ಇದು ನಿಜವೇ ಎಂದು ನಾನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ನಾನು ಅದರಲ್ಲೇ ತುಂಬಾ ಮುಳುಗಿಹೋಗಿದ್ದೇನೆ. ಆದರೆ ಅದೇ ವೇಳೆ, ಜನರ ಕಲ್ಯಾಣಕ್ಕಾಗಿ ಯುವಜನರು ಆಡಳಿತದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂಬುದನ್ನು ಸಾಬೀತುಪಡಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ಸೃಷ್ಟಿ ಗೋಸ್ವಾಮಿ (19) ಹೇಳಿದ್ದಾರೆ.

ಮೂರನೇ ವರ್ಷದ ಬಿಎಸ್‌ಸಿ ಪದವಿ ವಿದ್ಯಾರ್ಥಿನಿಯಾಗಿರುವ ಗೋಸ್ವಾಮಿ, ರಾಜ್ಯದ ಬೇಸಿಗೆ ರಾಜಧಾನಿಯಾದ ಗೈರ್‌ಸೈನ್‌ನಿಂದ ಆಡಳಿತ ನಡೆಸಲಿದ್ದು, ರಾಜ್ಯ ಸರ್ಕಾರವು ನಡೆಸುವ ವಿವಿಧ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ.

ಅಂದು ಅಟಲ್ ಆಯುಷ್ಮಾನ್ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಪ್ರವಾಸೋದ್ಯಮ ಇಲಾಖೆಯ ಹೋಂಸ್ಟೇ ಯೋಜನೆ ಮತ್ತು ಇತರ ಅಭಿವೃದ್ಧಿ ಯೋಜನೆಗಳನ್ನು ಅವರು ಪರಿಶೀಲಿಸಲಿದ್ದಾರೆ.

ಅವರು ಸಿಎಂ ಆಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುವ ಮೊದಲು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ವಿವರವಾದ ಮಾಹಿತಿಯನ್ನು ನೀಡುತ್ತಾರೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

‘ಈ ಬಗ್ಗೆ ಈಗಾಗಲೇ ಗೈರ್‌ಸೈನ್‌ನಲ್ಲಿರುವ ರಾಜ್ಯ ವಿಧಾನಸಭಾ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸೃಷ್ಟಿ ಗೋಸ್ವಾಮಿ ನಮ್ಮೊಂದಿಗೆ ಸ್ವಲ್ಪ ಸಮಯದವರೆಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಸಾಮರ್ಥ್ಯಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ’ ಎಂದು ರಾಜ್ಯದ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷೆ ಉಷಾ ನೇಗಿ ಹೇಳಿದರು.

ಗೋಸ್ವಾಮಿ ಅವರು 2018 ರಿಂದ ಬಾಲ ವಿಧಾನಸಭೆಯ (ಮಕ್ಕಳ ರಾಜ್ಯ ವಿಧಾನಸಭೆ) ಮುಖ್ಯಮಂತ್ರಿ ಆಗಿದ್ದಾರೆ.

Read Also: ಪ್ರಧಾನಿಗಾಗಲೇ – ಸುಪ್ರೀಂ ಕೋರ್ಟ್‌ಗಾಗಲೀ ರೈತರ ಟ್ರಾಕ್ಟರ್ ಪರೇಡ್ ತಡೆಯಲು ಸಾಧ್ಯವಿಲ್ಲ: ರೈತ ಮುಖಂಡ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights