ವೈದ್ಯ ಡಾ.ಕಫೀಲ್ ಖಾನ್‌ರನ್ನು ರೌಡಿಶೀಟರ್‌ ಪಟ್ಟಿಗೆ ಸೇರಿಸಿದ ಉತ್ತರ ಪ್ರದೇಶ ಸರ್ಕಾರ!

ಉತ್ತರ ಪ್ರದೇಶ ವೈದ್ಯ ಡಾ.ಕಫೀಲ್ ಖಾನ್ ಮತ್ತು ಇತರ 80 ಜನರ ಹೆಸರುಗಳನ್ನು ರೌಡಿಶೀಟರ್‌ಗಳ ಪಟ್ಟಿಗೆ ಗೋರಖ್‌ಪುರ ಜಿಲ್ಲೆಯ ಪೊಲೀಸರು ಸೇರಿಸಿದ್ದು, ಅವರ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾ ಇಡಲಿದ್ದಾರೆ ಎಂದು ತಿಳಿದು ಬಂದಿದೆ.

ಕಫೀಲ್‌ ಖಾನ್‌ ಅವರನ್ನು 2020ರ ಜೂನ್‌ 18 ರಂದು ರೌಡಿ ಶೀಟರ್‌ ಎಂದು ಪಟ್ಟಿಯಲ್ಲಿ ಸೇರಿಸಲಾಗಿದೆ. ಎಸ್‌ಪಿ ಜೋಗೇಂದ್ರ ಕುಮಾರ ಅವರ ನಿರ್ದೇಶನದ ಮೇಲೆ ಕಫೀಲ್ ಖಾನ್‌ ಸೇರಿದಂತೆ 81 ಜನರ ಹೆಸರುಗಳನ್ನು ರೌಡಿ ಶೀಟರ್‌ ಶೀಟರ್‌ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಆಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೊರಖ್‌ಪುರ್ ಜಿಲ್ಲೆಯಲ್ಲಿ ಒಟ್ಟು 1,543 ರೌಡಿಶೀಟರ್‌ಗಳಿದ್ದಾರೆ. ಅವರ ಪಟ್ಟಿಯಲ್ಲಿ ಕಫೀಲ್‌ ಖಾನ್‌ ಕೂಡ ಸೇರಿದ್ದಾರೆ. ಕಳೆದ ಜೂನ್‌ನಲ್ಲಿಯೇ ಅವರನ್ನು ರೌಡಿಶೀಟರ್‌ ಎಂದು ಉಲ್ಲೇಖಿಸಲಾಗಿದ್ದು, ಈಗಷ್ಟೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

‘ಉತ್ತರ ಪ್ರದೇಶ ಸರಕಾರವು ನನ್ನನ್ನು ರೌಡಿ ಶೀಟರ್‌ಗಳ ಪಟ್ಟಿಯಲ್ಲಿ ಸೇರಿಸಿದೆ. ಜೀವನಪರ್ಯಂತ ನನ್ನ ಮೇಲೆ ನಿಗಾಯಿರಿಸುತ್ತಾರಂತೆ. ಅದು ಒಳ್ಳೆಯದೇ. ದಿನದ 24 ಗಂಟೆಯೂ ನನ್ನ ಮೇಲೆ ನಿಗಾಯಿರಿಸಲು ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳನ್ನೂ ಒದಗಿಸಿ. ಇದರಿಂದ ಕನಿಷ್ಠ್ಧ ಸುಳ್ಳು ಪ್ರಕರಣಗಳಿಂದ ನಾನು ತಪ್ಪಿಸಿಕೊಳ್ಳಲು ಸಾಧ್ಯವಾಗಬಹುದು ‘ ಎಂದು ಕಫೀಲ್‌ ಖಾನ್ ಹೇಳಿದ್ದಾರೆ.

ಕ್ರಿಮಿನಲ್‌ಗಳ ಮೇಲೆ ನಿಗಾ ಇಡಲಾಗದ ಸರ್ಕಾರ, ಅಮಾಯಕರ ವಿರುದ್ದ ರೌಡಿ ಶೀಟ್‌ಗಳನ್ನು ದಾಖಲಿಸುತ್ತಿದೆ. ಇದು ಉತ್ತರ ಪ್ರದೇಶದ ಪರಿಸ್ಥಿತಿ ಎಂದು ಅವರು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಅಡಿಗಡ್‌ ಮುಸ್ಲಿಂ ವಿವಿಯಲ್ಲಿ 2019 ಡಿ. 10 ರಂದು ಡಾ ಕಫೀಲ್‌ ಖಾನ್‌ ಅವರು ಭಾಷಣ ಮಾಡಿದ್ದರು. ಅವರ ಭಾಷಣವು ದ್ವೇಷ ಅಥವಾ ಹಿಂಸೆಗೆ ಪ್ರಚೋದನೆ ನೀಡುತ್ತದೆ ಎಂದು 2020ರ ಜನವರಿಯಲ್ಲಿ ಡಾ.ಖಾನ್ ಅವರನ್ನು ಬಂಧಿಸಲಾಗಿತ್ತು.  ಅವರು ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯಡಿ ಪ್ರಕರಣವನ್ನು ದಾಖಲಿಸಲಾಗಿತ್ತು.

ಆದರೆ, ಪ್ರಕರಣದ ವಿಚಾರಣೆ ನಡೆಸಿದ್ದ ಅಲಹಾಬಾದ್‌ ಹೈಕೋರ್ಟ್‌, ಕಫೀಲ್‌ ಖಾನ್‌ ಅವರನ್ನು ಎನ್‌ಎಸ್‌ಎ ಅಡಿಯಲ್ಲಿ ಬಂಧನವನ್ನು 2020ರ ಸೆಪ್ಟೆಂಬರ್‌ 1ರಂದು ರದ್ದುಗೊಳಿಸಿ, ಬಿಡುಗಡೆಗೊಳಿಸಿತ್ತು.

Read Also: ದೆಹಲಿ ಗಡಿಯಲ್ಲಿ ಪೊಲೀಸರಿಂದ ಪತ್ರಕರ್ತರ ಮೇಲೆ ಹಲ್ಲೆ; ಇಬ್ಬರ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights