ತಂದೆಯ ಬಂಧನಕ್ಕೆ ವಿರೋಧ; ಸರ್ಕಾರದ ಬೈಸಿಕಲ್‌ ಬೇಡವೆಂದ BJP ಮುಖಂಡನ ಮಗಳು!

ಸ್ಥಳೀಯ ಬಿಜೆಪಿ ಮುಖಂಡನಾಗಿರುವ ತನ್ನ ತಂದೆಯನ್ನು ಬಂಧಿಸಿರುವುದನ್ನು ವಿರೋಧಿಸಿ 10 ನೇ ತರಗತಿ ಬಾಲಕಿ ರಾಜ್ಯ ಸರ್ಕಾರದಿಂದ ಉಚಿತ ಸೈಕಲ್ ಪಡೆಯಲು ನಿರಾಕರಿಸಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ರಾಂಪುರಹತ್ ಉಪವಿಭಾಗದ ಕುಸುಮಿ ಪ್ರೌಥ ಶಾಲೆಯ ಮೌತ್ರಿಶಾ ಡೇ ಎಂಬ ವಿದ್ಯಾರ್ಥಿನಿ ಸಂಸ್ಥೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಸುಳ್ಳು ಪ್ರಕರಣಗಳಲ್ಲಿ ತನ್ನ ತಂದೆಯನ್ನು ಬಂಧಿಸಲಾಗಿರುವುದರಿಂದ ನಾನು ಸರ್ಕಾರದಿಂದ ನೀಡಲಾಗುವ ಸೈಕಲ್ ಸ್ವೀಕರಿಸುವುದಿಲ್ಲ ಎಂದು ಹೇಳಿರುವುದಾಗಿ ಆ ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

“ಸಾಬುಜ್ ಸತಿ ಯೋಜನೆಯಡಿ ಬೈಸಿಕಲ್‌ಗಳನ್ನು ಶುಕ್ರವಾರ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ವಿದ್ಯಾರ್ಥಿನಿ ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾಳೆ. ನಾವು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಮತ್ತು ಸೈಕಲ್ ಅನ್ನು ಹಿಂದಿರುಗಿಸಿದ್ದೇವೆ” ಎಂದು ಶಾಲೆಯ ಮುಖ್ಯೋಪಾಧ್ಯಾಯ ಶ್ರೀಕಾಂತ ಮೊಂಡಾಲ್ ತಿಳಿಸಿದ್ದಾರೆ.

ಸಬುಜ್ ಸತಿ (ಹಸಿರು ಸಹವರ್ತಿ) ಯೋಜನೆಯಡಿ ಸರ್ಕಾರಿ, ಅನುದಾನಿತ ಶಾಲೆಗಳು ಮತ್ತು ರಾಜ್ಯದ ಮದರಸಾಗಳಲ್ಲಿ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2015 ರಲ್ಲಿ ಪ್ರಾರಂಭಿಸಿದರು.

2020 ರ ಸೆಪ್ಟೆಂಬರ್ 17 ರಂದು ಪೊಲೀಸರು ಆಕೆಯ ತಂದೆಯನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿದ್ದು, ಬಂಧಿಸಿದ್ದಾರೆ ಎಂದು ಶಾಲಾ ಬಾಲಕಿ ಆರೋಪಿಸಿದ್ದಾಳೆ.

“ನನ್ನ ತಂದೆ ಪೊಲೀಸ್ ಕಸ್ಟಡಿ ಮತ್ತು ನ್ಯಾಯಾಂಗ ಬಂಧನದಲ್ಲಿದ್ದಾಗ ನಾವು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು” ಎಂದು ಆಕೆ ಹೇಳಿದ್ದಾಳೆ.

“ಕಳೆದ ವರ್ಷ ಸುಳ್ಳು ಆರೋಪಗಳ ಆಧಾರದ ಮೇಲೆ ಪೊಲೀಸರು ತನ್ನ ವಿರುದ್ಧ ಒಂದರ ನಂತರ ಒಂದರಂತೆ ಪ್ರಕರಣ ದಾಖಲಿಸಿದ್ದಾರೆ. ನಾನು 35 ದಿನಗಳ ಕಾಲ ಪೊಲೀಸ್ ಕಸ್ಟಡಿ ಮತ್ತು ಜೈಲು ಕಸ್ಟಡಿಯಲ್ಲಿ ಕಳೆಯಬೇಕಾಯಿತು. ಈಗ ನಾನು ಜಾಮೀನಿನ ಮೇಲೆ ಹೊರಗಿದ್ದೇನೆ” ಎಂದು ಬಿಜೆಪಿಯ ಮಯೂರೇಶ್ವರ- 2ನೇ ಬ್ಲಾಕ್ ಅಧ್ಯಕ್ಷರಾದ ಆಕೆಯ ತಂದೆ ಸುಶಾಂತ ಡೇ ಹೇಳಿದ್ದಾರೆ.

ಬೈಸಿಕಲ್ ಸ್ವೀಕರಿಸದೇ ಇರುವ ನಿರ್ಧಾರವನ್ನು ತಮ್ಮ ಮಗಳೇ ತೆಗೆದುಕೊಂಡಿರುವುದಾಗಿ ಅವರು ಹೇಳಿದರು.

ಏಪ್ರಿಲ್, ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಾಲಕಿ ತನ್ನ ತಂದೆಯ ಪ್ರಚೋದನೆಯ ಮೇರೆಗೆ ಬೈಸಿಕಲ್ ಸ್ವೀಕರಿಸಲಿಲ್ಲ ಎಂದು ಆಡಳಿತಾರೂರಿ ತೃಣಮೂಲ ಕಾಂಗ್ರೆಸ್‌ಮ ಸ್ಥಳೀಯ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಂಗಾಳ ಪೊಲೀಸ್‌ ಅಧಿಕಾರಿ ರಾಜೀನಾಮೆ; ಕಾರಣವಾಯ್ತಾ ಮೂವರು BJP ಮುಖಂಡರ ಬಂಧನ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights