ಫ್ಯಾಕ್ಟ್‌ಚೆಕ್ : ಹಿಂದೂ ಕುಟುಂಬದ ಮೇಲೆ ಮುಸ್ಲಿಮರಿಂದ ಹಲ್ಲೆಎಂದು ಸುಳ್ಳು ಸಂದೇಶ ಹಂಚಿಕೆ

ಅಲ್ವಾರ್ ನಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ದೊಣ್ಣೆಯಿಂದ ಹೊಡೆಯುತ್ತಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

Fact Check: ಅಲ್ವಾರ್ ನಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ದೊಣ್ಣೆಯಿಂದ ಹೊಡೆದರು ಎಂದ ವೀಡಿಯೋ ಹಿಂದಿನ ಸತ್ಯಾಂಶ ಏನು?

“ಈ ವೀಡಿಯೋವನ್ನು ಆದಷ್ಟು ಬೇಗ ಎಲ್ಲಾ ಗ್ರೂಪ್‌ಗಳಲ್ಲಿ ಪೋಸ್ಟ್ ಮಾಡಿ ರಾಜಸ್ಥಾನ ಬಿಜೆಪಿ ಸರ್ಕಾರ ಬುಲ್ಜಡೋಜರ್ ಅನ್ನು ಇಂದೇ ತಿರುಗಿಸಬೇಕು. ಅಲ್ವಾರ್‌ನಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ದೊಣ್ಣೆಯಿಂದ ಹೊಡೆಯುತ್ತಿದ್ದಾರೆ” ಎಂಬ ಸಂದೇಶದೊಂದಿಗೆ ವಿಡಿಯೋವನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಲ್ಲದೆ  ಟ್ರಾವೆಲ್‌ ಬ್ಲಾಗ್ಸ್ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಇದೇ ರೀತಿಯ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಅಪ್‌ಲೋಡ್‌ ಮಾಡಲಾಗಿದೆ.

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜನವರಿ 28, 2024ರ ಬಾತ್ ಆಜ್‌ ಕಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೋವೊಂದು ಲಭ್ಯವಾಗಿದೆ.

ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋಗೆ ನೀಡಿದ ಶೀರ್ಷಿಕೆಯಲ್ಲಿ “ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕಟುಂಬಗಳ ನಡುವೆ ದೊಣ್ಣೆ ಕಾಳಗ” ಎಂದು ಹೇಳಲಾಗಿದೆ. ಇದರ ಆಧಾರದಲ್ಲಿ ಮತ್ತಷ್ಟು ಸರ್ಚ್ ಮಾಡಿದಾಗ ಕೆಲವು ವರದಿಗಳು ಲಭ್ಯವಾಗಿವೆ.

ದೈನಿಕ್ ಬಾಸ್ಕರ್‌ನಲ್ಲಿ 19 ಜನವರಿ 2024  ಪ್ರಕಟವಾಗ ವರದಿಯ ಪ್ರಕಾರ ಜನವರಿ 18 ರಂದು ಥಾನಗಾಜಿ ಪೊಲೀಸ್ ಠಾಣೆ ಪ್ರದೇಶದ ಬಿಹಾರಿಸರ್ ರಸ್ತೆಯ ದುಹಾರ್ ಚೌಗಾನ್ನಲ್ಲಿ ಪ್ರಕರಣ ನಡೆದಿದೆ. ಹಳೆಯ ಮನೆಯ ಮಾಲೀಕತ್ವದ ಬಗ್ಗೆ ರೋಹಿತಾಶ್ ಅವರ ಕುಟುಂಬ ಸದಸ್ಯರು ಮತ್ತು ಅವರ ಪರಿಚಯಸ್ಥರಾದ ಬಾದಾಮಿ ದೇವಿ ಕುಟುಂಬದ ನಡುವೆ ಜಗಳವಾಗಿತ್ತು. ಜಗಳದ ಸಮಯದಲ್ಲಿ, ಬಾದಾಮಿ ದೇವಿ ಕಡೆಯ ಜನರು ರೋಹಿತಾಶ್ ಅವರ ಕುಟುಂಬ ಸದಸ್ಯರ ಮೇಲೆ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ನ್ಯೂಸ್‌ ಚೆಕ್ಕರ್ ಫ್ಯಾಕ್ಟ್‌ಚೆಕ್ ವರದಿಯನ್ನು ಪ್ರಕಟಿಸಿದೆ.

ದಾಳಿಯ ಸಮಯದಲ್ಲಿ, ಇನ್ನೊಂದು ಬದಿಯ ಯುವಕರು 70 ವರ್ಷದ ರಾಮ್ ಸ್ವರೂಪ್ ಅವರ ಮೇಲೂ ಕೋಲುಗಳಿಂದ ಹಲ್ಲೆ ನಡೆಸಿದರು. ಈ ದಾಳಿಯಲ್ಲಿ ರೋಹಿತಾಶ್, ಕೃಪಾ ದೇವಿ, ಮಿಸ್ರಿ ದೇವಿ, ಬಿರ್ಮಾ ಶರ್ಮಾ, ಟೇಕ್ಚಂದ್ ಸೇರಿದಂತೆ 8 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಐವರನ್ನು ಜೈಪುರಕ್ಕೆ ಕಳುಹಿಸಲಾಗಿದೆ ಎಂಬ ಪೊಲೀಸ್ ಅಧಿಕಾರಿ ರಾಜೇಶ್ ಮೀನಾ ಅವರ ಹೇಳಿಕೆಯೂ ವರದಿಯಲ್ಲಿದೆ. ಮನೆಯ ಮಾಲೀಕತ್ವದ ಬಗ್ಗೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಎರಡು ಕುಟುಂಬದ ಏಳು ಜನರನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.

Fact Check: ಅಲ್ವಾರ್ ನಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ದೊಣ್ಣೆಯಿಂದ ಹೊಡೆದರು ಎಂದ ವೀಡಿಯೋ ಹಿಂದಿನ ಸತ್ಯಾಂಶ ಏನು?

ಈ ಪ್ರಕರಣಕ್ಕೆ ಸಂಬಂಧಿಸಿದ ವರದಿಯು ಜನವರಿ 19, 2024ರಂದು ಹಿಂದೂಸ್ತಾನ್ ವೆಬ್ಸೈಟ್ನಲ್ಲಿಯೂ ಕಂಡುಬಂದಿದೆ. ಥಾನಗಾಜಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಎರಡು ಕುಟುಂಬಗಳ ನಡುವಿನ ಮನೆ ವಿವಾದದಲ್ಲಿ ಸುಮಾರು 12 ಜನರು ಗಾಯಗೊಂಡಿದ್ದಾರೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ. ಅವರಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು, ಜೈಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದೆ.

ಇದೇ ಘಟನೆಗೆ ಸಂಬಂಧಿಸಿದಂತೆ ಅಲ್ವಾರ್ ಪೊಲೀಸರ ಎಕ್ಸ್ ಖಾತೆಯಲ್ಲಿ ಜನವರಿ 27, 2024 ರಂದು ಬಳಕೆದಾರರೊಬ್ಬರಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅಲ್ವಾರ್ ಪೊಲೀಸರು, “ಈ ವೀಡಿಯೋ ಹಳೆಯದು ಮತ್ತು ಎರಡೂ ಕಡೆಯವರು ಒಂದೇ ಕುಟುಂಬಕ್ಕೆ ಸೇರಿದ್ದು ಹಿಂದೂ ಸಮುದಾಯದವರು ಎಂದು ಸ್ಪಷ್ಟನೆ ನೀಡಿದ್ದಾರೆ. ಸೆಕ್ಷನ್ 151 ಸಿಆರ್ ಪಿಸಿ ಅಡಿಯಲ್ಲಿ ಎರಡೂ ಕಡೆಯ 7 ಜನರನ್ನು ಬಂಧಿಸಲಾಗಿದೆ. ಈ ಸಂಬಂಧ ಎರಡೂ ಕುಟುಂಬದವರು ದೂರು ದಾಖಲಿಸಿವೆ ಎಂದು ಹೇಳಿದೆ.

ಮಾಧ್ಯಮಗಳಿಗೆ ಅಲ್ವಾರ್ ಪೊಲೀಸರ್ ಮಾಹಿತಿ ನೀಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆಯನ್ನು ಸುಳ್ಳು ನಿರೂಪಣೆಯೊಂದಿಗೆ ಕೋಮು ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗುತ್ತಿದೆ.“ಇದರಲ್ಲಿ ಯಾವುದೇ ಮುಸ್ಲಿಂ ವ್ಯಕ್ತಿ ಭಾಗಿಯಾಗಿಲ್ಲ. ವಾಸ್ತವವಾಗಿ, ಇದು ಎರಡು ಹಿಂದೂ ಕುಟುಂಬಗಳ ನಡುವಿನ ಗಲಾಟೆಯಾಗಿದ್ದು, ಬಾದಾಮಿ ದೇವಿ ಎಂಬ ಕುಟುಂಬದ ಸದಸ್ಯರು ತಮ್ಮ ಪರಿಚಯಸ್ಥರಾದ ರೋಹಿತಾಶ್ ಶರ್ಮಾ ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೀಡಿಯೋದಲ್ಲಿ, ತುಳಸಿ ಶರ್ಮಾ, ಸತೀಶ್ ಶರ್ಮಾ, ಜಿತೇಂದ್ರ ಶರ್ಮಾ ಎಂಬ ಮೂವರು ಯುವಕರು ವೃದ್ಧನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಮರು ಹಿಂದೂ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದು ಅವರ ಮನೆಯ ಮೇಲೆ ಬುಲ್ಡೋಜರ್  ನುಗ್ಗಿಸಿ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ಘಟನೆ ಎರಡು ಹಿಂದೂ ಕುಟುಂಬಗಳ ನಡುವೆ ನಡೆದಿದ್ದು ಯಾವುದೇ ಮುಸ್ಲಿಂ ವ್ಯಕ್ತಿಗಳು ಭಾಗಿಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಿರಲಿಲ್ಲವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights