ಬಂಗಾಳ ಪೊಲೀಸ್ ಅಧಿಕಾರಿ ರಾಜೀನಾಮೆ; ಕಾರಣವಾಯ್ತಾ ಮೂವರು BJP ಮುಖಂಡರ ಬಂಧನ?
ಕಳೆದ ವಾರ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದ್ದ ಬಿಜೆಪಿ ರ್ಯಾಲಿಯಲ್ಲಿ ‘ದೇಶದ್ರೋಹಿಗಳ ಮೇಲೆ ಗುಂಡು ಹಾರಿಸಿ’ (ಗೋಲಿ ಮಾರೋ..) ಎಂದು ಘೋಷಣೆ ಕೂಗಿದ ಮೂವರು ಬಿಜೆಪಿ ಮುಖಂಡರನ್ನು ಬಂಧಿಸಲು ಆದೇಶ ನೀಡಿದ್ದ ಉನ್ನತ ಪೊಲೀಸ್ ಅಧಿಕಾರಿ ಹುಮಾಯೂನ್ ಕಬೀರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದ ರೋಡ್ ಶೋನಲ್ಲಿ ಗೋಲಿ ಮಾರೋ ಘೊಷಣೆ ಕೂಗಿದ್ದ ಹೂಗ್ಲಿ ಜಿಲ್ಲೆಯ ಬಿಜೆಪಿ ಯುವ ಮುಖಂಡ ಸುರೇಶ್ ಸಾಹು ಸೇರಿದಂತೆ ಪಕ್ಷದ ಮೂವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಹುಮಾಯೂನ್ ಕಬೀರ್ ಅವರು ರಾಜೀನಾಮೆ ನೀಡಿದ್ದಾರೆ.
ಇನ್ಸ್ಪೆಕ್ಟರ್ ಜನರಲ್-ಶ್ರೇಣಿಯ ಅಧಿಕಾರಿ ಮತ್ತು ಕೋಲ್ಕತಾ ಬಳಿಯ ಚಂದನಗರದ ಪೊಲೀಸ್ ಕಮಿಷನರ್ ಆಗಿರುವ ಹುಮಾಯೂನ್ ಕಬೀರ್ “ವೈಯಕ್ತಿಕ ಕಾರಣಗಳಿಂದ” ಹುದ್ದೆ ತ್ಯಜಿಸಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಆದರೆ, ಪ್ರತ್ಯೇಕ ಮಾಧ್ಯಮ ಸಂವಾದದಲ್ಲಿ, “ನನ್ನ ರಾಜೀನಾಮೆಗೆ ಆ ಮೂವರು ಕಾರಣ. ಆ ಬಗ್ಗೆ ಕೆಲವು ದಿನಗಳ ನಂತರ ವಿವರವಾಗಿ ಹಂಚಿಕೊಳ್ಳುತ್ತೇನೆ. ಮೊದಲು ನಾನು ಸೇವೆಯಿಂದ ಬಿಡುಗಡೆ ಪಡೆದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.
ಕಬೀರ್ ಅವರ ಹಠಾತ್ ರಾಜೀನಾಮೆ ಅವರು ರಾಜಕೀಯಕ್ಕೆ ಪ್ರವೇಶಿಸುವ ಸಾಧ್ಯತೆಯ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಅವರು ಏಪ್ರಿಲ್ 30 ರಂದು ನಿವೃತ್ತರಾಗಬೇಕಿತ್ತು ಮತ್ತು ವಿಸ್ತರಣೆಯನ್ನು ಕೋರಬಹುದಿತ್ತು. ಆದರೆ, ಅವರು ಜನವರಿ 31 ರಂದೇ ಹುದ್ದೆ ತ್ಯಜಿಸಲು ನಿರ್ಧರಿಸಿದ್ದಾರೆ.
ಮುಂಬರುವ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷವು ತನ್ನ ಹೆಂಡತಿಯನ್ನು ಕಣಕ್ಕಿಳಿಸಬೇಕೆಂದು ಅವರು ಬಯಸಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಓಲೈಸಲು ಕಬೀರ್ ಪ್ರಯತ್ನಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.
ಇದನ್ನೂ ಓದಿ: ಸುವೇಂದು ಅಧಿಕಾರಿ ರ್ಯಾಲಿಯಲ್ಲಿ ಗೋಲಿ ಮಾರೋ ಘೋಷಣೆ: ಮೂವರು BJP ಮುಖಂಡರ ಬಂಧನ!

