ರೈತರ ಪರ ಟ್ವೀಟ್ ಮಾಡಿದ ಗ್ರೇಟಾ ಥನ್‌ಬರ್ಗ್ ವಿರುದ್ಧ ಎಫ್‌ಐಆರ್!

ರೈತರ ಪ್ರತಿಭಟನೆ ಕುರಿತು ಟ್ವೀಟ್ ಮಾಡಿದ ಬೆನ್ನಲ್ಲೆ ದೆಹಲಿ ಪೊಲೀಸರು ಗ್ರೇಟಾ ಥನ್‌ಬರ್ಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಭಾರತದಲ್ಲಿ ರೈತರ ಪ್ರತಿಭಟನೆ ಕುರಿತು ಇತ್ತೀಚೆಗೆ ಮಾಡಿದ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಹದಿಹರೆಯದ ಹವಾಮಾನ ಬದಲಾವಣೆ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪಾಪ್ ಐಕಾನ್ ರಿಹಾನ್ನಾ ಭಾರತದಲ್ಲಿ ಪ್ರತಿಭಟನೆಗಳತ್ತ ಗಮನ ಸೆಳೆದ ಕೂಡಲೇ ಗ್ರೇಟಾ ಥನ್‌ಬರ್ಗ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ರೈತರ ಆಂದೋಲನಕ್ಕೆ ಒಗ್ಗಟ್ಟಾಗಿ ನಿಲ್ಲುತ್ತೇವೆಂದು ಪೋಸ್ಟ್ ಮಾಡಿದ್ದಾರೆ.

ಮಂಗಳವಾರ ರಾತ್ರಿ ಗ್ರೇಟಾ ಥನ್‌ಬರ್ಗ್ “ನಾವು ಭಾರತದಲ್ಲಿ ಫಾರ್ಮರ್ಸ್‌ಪ್ರೊಟೆಸ್ಟ್‌ನೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ” ಎಂದು ಬರೆದಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತು ದೆಹಲಿ ಗಡಿಯ ಸುತ್ತ ಅಂತರ್ಜಾಲವನ್ನು ಹೇಗೆ ಸ್ಥಗಿತಗೊಳಿಸಲಾಗಿದೆ ಎಂಬುದರ ಕುರಿತು ಸಿಎನ್‌ಎನ್ ಲೇಖನವನ್ನು ಹಂಚಿಕೊಂಡಿದ್ದಾರೆ. ಅವರ ಟ್ವೀಟ್ ರಿಹಾನ್ನಾ ಅವರ ವಿಷಯದ ನಂತರ ಜಾಗತಿಕ ಗಮನವನ್ನು ಸೆಳೆಯಿತು.

ಗ್ರೇಟಾ ಥನ್ಬರ್ಗ್ ವಿರುದ್ಧ ದೆಹಲಿ ಪೊಲೀಸರು ಸೆಕ್ಷನ್ 153 ಎ (ಧರ್ಮ, ಜನಾಂಗದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತದೆ) ಮತ್ತು ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಆರೋಪದಡಿ ಎಫ್ಐಆರ್ ದಾಖಲಿಸಿದ್ದಾರೆ.

ಕೆಲವು ಪಟ್ಟಭದ್ರ ಗುಂಪುಗಳು ಅಂತರರಾಷ್ಟ್ರೀಯ ಬೆಂಬಲವನ್ನು ಪಡೆಯುತ್ತಿರುವುದು “ದುರದೃಷ್ಟಕರ” ಎಂದು ವಿದೇಶಾಂಗ ಸಚಿವಾಲಯ ಬುಧವಾರ ಹೇಳಿತ್ತು. ಜೊತೆಗೆ ಸೆಲೆಬ್ರಿಟಿಗಳು ಈ ವಿಷಯದ ಬಗ್ಗೆ ಹೇಳಿಕೆ ತಡೆಯುವಂತೆ ಸೂಚಿಸಿದೆ.

ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಪೋಸ್ಟ್ ಮಾಡಿದ ವಿವರವಾದ ಹೇಳಿಕೆಯಲ್ಲಿ, “ಇಂತಹ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಮುಂದಾಗುವ ಮೊದಲು, ಸತ್ಯಗಳನ್ನು ಕಂಡುಹಿಡಿಯಬೇಕೆಂದು ನಾವು ಒತ್ತಾಯಿಸುತ್ತೇವೆ. ಕೈಯಲ್ಲಿರುವ ಸಮಸ್ಯೆಗಳ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಹೊಂದಿರಬೇಕು” ಎಂದಿದ್ದಾರೆ.

ಈಗಾಗಗಲೇ ಸೆಲೆಬ್ರಿಟಿಗಳಾದ ಅಕ್ಷಯ್ ಕುಮಾರ್, ಅಜಯ್ ದೇವ್‌ಗನ್, ಕರಣ್ ಜೋಹರ್ ಮತ್ತು ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights