ಬಿಹಾರ ಚುನಾವಣೆ: BJPಗೆ ಸಹಾಯ ಮಾಡಿದ್ದೇವೆ ಎಂದು ಬಹಿರಂಗವಾಗಿ ಒಪ್ಪಿಕೊಂಡ LJP
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಿರುವುದಾಗಿ ಎಲ್‌ಜೆಪಿ ಒಪ್ಪಿಕೊಂಡಿದೆ. ಈ ಕುರಿತು ಜೆಡಿಯುಗೆ ಬಹಿರಂಗ ಪತ್ರ ಬರೆದಿರುವ ಎಲ್‌ಜೆಪಿ, ತಾವು ಬಿಜೆಪಿಗೆ ಸಹಾಯ ಮಾಡಿದ್ದೇವೆ ಎಂದು ಇದೇ ಮೊದಲ ಬಾರಿಗೆ ಹೇಳಿದೆ.
ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷವು ಬುಧವಾರ ಜೆಡಿಯು ರಾಷ್ಟ್ರೀಯ ಕಾರ್ಯದರ್ಶಿ ಕೆ.ಸಿ ತ್ಯಾಗಿ ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ ಈ ಹೇಳಿಕೆ ನೀಡಿದೆ. ಚುನಾವಣೆಯಲ್ಲಿ ಜೆಡಿಯು ಕಳಪೆ ಪ್ರದರ್ಶನ ನೀಡಿದ್ದು, ಈ ವಿಚಾರವಾಗಿ ನಿತೀಶ್ ಕುಮಾರ್ ಅವರನ್ನು ಎಲ್‌ಜೆಪಿ ದೂಷಿಸಿದೆ.
ಎಲ್‌ಜೆಪಿಯೊಂದಿಗೆ ಸೀಟು ಹಂಚಿಕೆ ಬಗ್ಗೆ ನಿತೀಶ್ ಕುಮಾರ್ “ಧೋರಣೆಯ” ನಿಲುವನ್ನು ತೆಗೆದುಕೊಂಡರು. ಹೆಚ್ಚಿನ ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ದುರಾಸೆ ಹೊಂದಿದ್ದಕ್ಕಾಗಿ ಜೆಡಿಯು ಸೋತಿಗೆ ಎಂದು ಎಲ್‌ಜೆಪಿಯ ಬಿಹಾರ ಸಂಸದೀಯ ಮಂಡಳಿ ಅಧ್ಯಕ್ಷ ರಾಜು ತಿವಾರಿ ಆರೋಪಿಸಿದ್ದಾರೆ.
ನಿತೀಶ್ ಕುಮಾರ್ ದೊಡ್ಡಣ್ಣನಾಗಿ ಆಳ್ವಿಕೆ ನಡೆಸಲು ಬಯಸಿದ್ದು, ಎಲ್‌ಜೆಪಿಗೆ ಕೇವಲ 15 ಸ್ಥಾನಗಳನ್ನು ನೀಡಬೇಕೆಂಬ ಉದ್ದೇಶ ಹೊಂದಿತ್ತು ಎಂದು ತಿವಾರಿ ಆರೋಪಿಸಿದ್ದಾರೆ. “ಎಲ್‌ಜೆಪಿ ಮತ್ತು ಬಿಜೆಪಿ ನಡುವೆ ಯಾವುದೇ ವಿವಾದಗಳಿಲ್ಲ” ಎಂದೂ ತಿವಾರಿ ಪತ್ರದಲ್ಲಿ ಬರೆದಿದ್ದಾರೆ.
“ಎಲ್‌ಜೆಪಿ ಯಾವಾಗಲೂ ಜೆಡಿ(ಯು) ಜೊತೆ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಹೊಂದಿದೆ. ಅದಕ್ಕಾಗಿಯೇ, ಎಲ್‌ಜೆಪಿ ಈ ಹಿಂದೆ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿರಲಿಲ್ಲ. ಆದರೆ ಬಿಜೆಪಿಯಿಂದಾಗಿ, ಎನ್‌ಡಿಎಯಲ್ಲಿ ಜೆಡಿಯುಗೆ ಬೆಂಬಲ ನೀಡಲು ಎಲ್‌ಜೆಪಿ ಮುಂದಾಗಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ಎಲ್‌ಜೆಪಿಗೆ ಹಾನಿ ಉಂಟುಮಾಡಲು ಜೆಡಿಯು ಪ್ರಯತ್ನಿಸಿತು ”ಎಂದು ತಿವಾರಿ ಆರೋಪಿಸಿದ್ದಾರೆ.
ತಿವಾರಿ ಅವರ ಪತ್ರದಲ್ಲಿ, ಅಸೆಂಬ್ಲಿ ಚುನಾವಣೆಯಲ್ಲಿ 110 ಕ್ಷೇತ್ರಗಳ ಪೈಕಿ 104 ಸ್ಥಾನಗಳಲ್ಲಿ ಬಿಜೆಪಿಗೆ ಸಹಾಯ ಮಾಡಿದೆ. ಉಳಿದ ಆರು ಸ್ಥಾನಗಳಲ್ಲಿ ಅವರು ಸ್ನೇಹಪರ ಹೋರಾಟವನ್ನು ಮಾಡಿದ್ದೇವೆ ಎಂದು ತಿವಾರಿ ಪತ್ರದಲ್ಲಿ ಹೇಳಿದ್ದಾರೆ.
ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಚಿರಾಗ್ ಪಾಸ್ವಾನ್ ಅವರು ನಿತೀಶ್ ಕುಮಾರ್ ಅವರ ಮೇಲೆ ಯಾವುದೇ ವೈಯಕ್ತಿಕ ದಾಳಿ ಮಾಡಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ರಾಮ್ ವಿಲಾಸ್ ಪಾಸ್ವಾನ್ ಅವರ ಅನಾರೋಗ್ಯದ ಅನಗತ್ಯ ಲಾಭವನ್ನು ಪಡೆಯಲು ನಿತೀಶ್ ಕುಮಾರ್ ಪ್ರಯತ್ನಿಸುತ್ತಿದ್ದಾರೆ ಎಂದು ಎಲ್‌ಜೆಪಿ ಪತ್ರದ ಮೂಲಕ ಆರೋಪಿಸಿದೆ.
ಇದನ್ನೂ ಓದಿ: ದೆಹಲಿ MCD ಉಪಚುನಾವಣೆ: BJPಯ ಭ್ರಷ್ಟಾಚಾರವೇ AAPಗೆ ಅಸ್ತ್ರ; 15 ವರ್ಷಗಳ ನಂತರ ಅಧಿಕಾರ ಕಳೆದುಕೊಳ್ಳುತ್ತಾ ಬಿಜೆಪಿ