ಆಂಧ್ರಪ್ರದೇಶದ ಬಸ್ ಅಪಘಾತದಲ್ಲಿ 14 ಮಂದಿ ಸಾವು : 4 ಮಕ್ಕಳು ಅಪಾಯದಿಂದ ಪಾರು!
ಆಂಧ್ರಪ್ರದೇಶದ ಕರ್ನೂಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಮತ್ತು ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಯಾತ್ರಾ ಪ್ರವಾಸದಲ್ಲಿದ್ದ ಮಗು ಸೇರಿದಂತೆ 14 ಜನರು ಸಾವನ್ನಪ್ಪಿದ್ದಾರೆ.
ಚಿತ್ತೂರು ಜಿಲ್ಲೆಯ ಮದನಪಲ್ಲೆಯಿಂದ ರಾಜಸ್ಥಾನದ ಅಜ್ಮೀರ್ಗೆ 18 ಜನರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಅತಿ ವೇಗದಲ್ಲಿ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಡಿವೈಡರ್ ಮೇಲೆ ಬಿದ್ದು ರಸ್ತೆಯ ಇನ್ನೊಂದು ಬದಿಯಲ್ಲಿ ಎದುರು ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ರಾಜ್ಯದ ಕರ್ನೂಲ್ ಜಿಲ್ಲೆಯ ವೆಲ್ದುರ್ತಿ ಮಂಡಲದ ಹಳ್ಳಿಯೊಂದರ ಬಳಿ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಕೇವಲ ನಾಲ್ಕು ಮಕ್ಕಳು ಬದುಕುಳಿದಿದ್ದು ಅವರಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಆಧಾರ್ ಕಾರ್ಡ್ಗಳು ಮತ್ತು ಫೋನ್ ಸಂಖ್ಯೆಗಳ ಆಧಾರದ ಮೇಲೆ ಪೊಲೀಸರು ಮಕ್ಕಳ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.
ಅಪಘಾತದ ತೀವ್ರತೆಗೆ ವಾಹನದಲ್ಲಿ ಸಿಲುಕಿ ಹಾಕಿಕೊಂಡ ಶವಗಳನ್ನು ಯಂತ್ರಗಳನ್ನು ಬಳಸಿ ಹೊರತೆಗೆಯಬೇಕಾಯಿತು.
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಪರಿಹಾರ ಕಾರ್ಯ ಮತ್ತು ವೈದ್ಯಕೀಯ ಸಹಾಯವನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಅವರು ಹಾರೈಸಿದ್ದಾರೆ.
ಚಾಲಕ ನಿದ್ದೆಗೆ ಜಾರಿದನೇ ಅಥವಾ ಟೈರ್ ಸ್ಫೋಟಗೊಂಡು ವಾಹನ ನಿಯಂತ್ರಣ ತಪ್ಪಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

