ವಿವಾಹದಲ್ಲೂ ಕೃಷಿ ಕಾಯ್ದೆಗಳಿಗೆ ವಿರೋಧ; ವಿಭಿನ್ನವಾಗಿ ಮದುವೆಯಾದ ಜೋಡಿಗಳು!
ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟಕ್ಕೆ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಹರಿಯಾಣದ ಹಲವಾರು ಹಳ್ಳಿಗಳಲ್ಲಿ ಬಿಜೆಪಿ ನಾಯಕರಿಗೆ ಪ್ರವೇಶವನ್ನು ನಿಷೇಧಿಸಿದ್ದು, ಹಲವಾರು ಮಹಾಪಂಚಾಯತ್‌ಗಳು ನಡೆಯುತ್ತಿವೆ. ಈ ನಡುವೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ವಿವಾಹವಾದ ಕೆಲವು ನವ ಜೋಡಿಗಳು ರೈತ ಹೋರಾಟವನ್ನು ಬೆಂಬಲಿಸಿ, ವಿಭಿನ್ನ ರೀತಿಯಲ್ಲಿ ವಿವಾಹವಾಗಿದ್ದು, ತಮ್ಮ ಮದುವೆಯ ದಿನ ಕೃಷಿ ಕಾಯ್ದೆಗಳಿಗೆ ವಿರೋಧವನ್ನು ದಾಖಲಿಸಿದ್ದಾರೆ.
ಕೆಲವು ಜೋಡಿಗಳು ತಮ್ಮ ಮದುವೆ ಆಮಂತ್ರಣ ಪತ್ರಗಳಲ್ಲಿ ಕೂಡಾ ಕೃಷಿ ವಿರೋಧಿ ಕಾನೂನನ್ನು ವಿರೋಧಿಸುವ ಘೋಷಣೆಗಳನ್ನು ಬರೆಸುತ್ತಿದ್ದಾರೆ. ರೈತ ಹೋರಾಟದ ಘೋಷಣೆಗಳನ್ನು ಮುದ್ರಿಸುತ್ತಿದ್ದಾರೆ. ಈ ಹಿಂದೆ ಮದುವೆ ಆಮಂತ್ರಣ ಪತ್ರಗಳಲ್ಲಿ ಜಾತಿ ಸೂಚಕ, ಧರ್ಮಸೂಚಕ ಚಿನ್ನೆಗಳು ಅಥವಾ ಚಿತ್ರಗಳನ್ನು ಮಾತ್ರ ಮುದ್ರಿಸಲು ಹೇಳುತ್ತಿದ್ದ ಗ್ರಾಹಕರು ಇತ್ತೀಚೆಗೆ ಭಗತ್ ಸಿಂಗ್, ಅಂಬೇಡ್ಕರ್, ಸಾವಿತ್ರಿ ಬಾಯಿ ಮುಂತಾದ ಮಹಾಪುರುಷರ ಚಿತ್ರಗಳನ್ನು ಮುದ್ರಿಸಲು ಬೇಡಿಕೆ ಇಡುತ್ತಿದ್ದಾರೆ!

”ಚಿತ್ರದಲ್ಲಿ ಕಾಣುವ ಮದುಮಗನ ಹೆಸರು ಜಗದೀಪ್ ಸಿಂಗ್ (30 ವರ್ಷ). ತಂದೆ ನಿವೃತ್ತ ಸೈನಿಕರು. ತನ್ನ ಮದುವೆಯ ದಿಬ್ಬಣ ಹೋಗುವಾಗ ಬರ್ನಾಲಾ ಎಂಬಲ್ಲಿ ಕಳೆದ 101 ದಿನಗಳಿಂದ ಚಳುವಳಿ ನಡೆಸುತ್ತಿರುವ ರೈತರು ಆತನ ಕಣ್ಣಿಗೆ ಬಿದ್ದರು. ತಕ್ಷಣ ದಿಬ್ಬಣ ನಿಲ್ಲಿಸಿದ ಮದುಮಗ ಜಗದೀಪ್ ದಿಬ್ಬಣದವರ ಸಮೇತ ರೈತರ ಜೊತೆ ಒಂದು ಗಂಟೆ ಕುಳಿತು ಅವರಿಗೆ ತನ್ನ ಬೆಂಬಲ ಘೋಷಿಸಿ, ಮದುವೆ ಹಾಲ್ ಕಡೆ ನಡೆದರು. ಹೋಗುವ ಮುನ್ನ ‘ಇದನ್ನು ಕೇಳಿ ಕಮಲ್ ಪ್ರೀತ್ (ಮದುಮಗಳು) ನನ್ನನ್ನು ಇನ್ನೂ ಹೆಚ್ಚು ಪ್ರೀತಿಸುತ್ತಾಳೆ’ ಎಂದು ಹೇಳಲು ಜಗದೀಪ್ ಮರೆಯಲಿಲ್ಲ” ಎಂದು ತಾನು ಕಂಡ ಘಟನೆಯ ಬಗ್ಗೆ ಪ್ರೊ. ಪುರುಷೋತ್ತಮ ಬಿಳಿಮಲೆಯವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದರು.
ಇದನ್ನೂ ಓದಿ: ರೈತ ಹೋರಾಟವನ್ನು ಬೆಂಬಲಿಸಿದ ಮಹಾತ್ಮ ಗಾಂಧಿ ಮೊಮ್ಮಗಳು; ಕೃಷಿ ಕಾಯ್ದೆ ಬಗ್ಗೆ ಅವರು ಹೇಳಿದ್ದೇನು?

ರಾಜಸ್ಥಾನ, ಪಂಜಾಬ್, ಹರಿಯಾಣದಲ್ಲಿ ದಂಪತಿಗಳು ರೈತರ ಚಳುವಳಿ ಘೋಷಣೆಗಳನ್ನು ಮುದ್ರಿಸಿ ಹಾಡುತ್ತಿದ್ದಾರೆ. ಹಲವು ನವ ದಂಪತಿಗಳು ತಮ್ಮ ಮದುವೆ ಊಟವನ್ನು ರೈತ ಹೋರಾಟಗಾರರಿಗೆ ಹಂಚಿಕೊಳ್ಳುತ್ತಿದ್ದಾರೆ. ಪಂಜಾಬಿ ಮದುವೆಗಳಲ್ಲಿ ಹಾಡು ಹಾಡುವ ನೋರಾ ಝೋರಾ ಗಿಡ್ಡಾ ಗುಂಪಿನ ಪ್ರಕಾರ, (ದೆಲ್ಲಿನೂ ಚಲಿಯೆ, ಜಾಕೆ ಮೋದಿನು ಘೆರಿಯೆ, ಹೇ ಸಮಾಲೋ) “ದೆಹಲಿಗೆ ಹೊರಡೋಣ, ಮೋದಿಯನ್ನು ಮುತ್ತಿಗೆ ಹಾಕೋಣಾ” ಎಂಬ ಹಾಡು ಜನಪ್ರಿಯವಾಗಿದೆ. ಜನರು ಮದುವೆಗಳಲ್ಲೂ ಈ ಹಾಡನ್ನೂ ಸಾಮೂಹಿಕವಾಗಿ ಹಾಡುತ್ತಿದ್ದಾರೆ.

ಕೇಂದ್ರ ಸರ್ಕಾರ ಇದುವರೆಗೂ ತಾನು ಜಾರಿಗೆ ತಂದಿರುವ ಕೃಷಿ ಕಾನೂನನ್ನು ಸಮರ್ಥಿಸುತ್ತಲೆ ಬಂದಿದೆ. ತೀರಾ ಇತ್ತೀಚೆಗೆ ಪ್ರಧಾನಿ ಮೋದಿ ಲೋಕಸಭೆಯಲ್ಲಿ ನಮ್ಮ ಸರ್ಕಾರ ರೈತರ ಪರವಾಗಿದೆ ಎಂದು ಹೇಳಿದ್ದಾರೆ. ಆದರೆ ಜನರು ವಿಭಿನ್ನವಾಗಿ ತಮ್ಮ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವರ್ಷದ ಸಿಎಎ ವಿರುದ್ದದ ಹೋರಾಟದಲ್ಲಿ ಕೇರಳ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ನವದಂಪತಿಗಳು “ಸಿಎಎ ಬೇಡ” ಎಂಬ ಘೋಷಣೆಗಳಿರುವ ಕಾರ್ಡ್‌ಗಳನ್ನು ಹಿಡಿದು ನಡೆಯುತ್ತಿರುವ, ಹೋರಾಟದಲ್ಲಿ ತಾವೂ ಭಾಗಿಯಾಗಿ ಬೆಂಬಲ ನೀಡುತ್ತಿದ್ದದ್ದು ವರದಿಯಾಗಿತ್ತು. ಅದರಂತೆ ಈ ವರ್ಷವು ಕೃಷಿ ಕಾನೂನನ್ನು ವಿರೋಧಿಸಿ ಇಂತಹದೆ ಘಟನೆಗಳು ವರದಿಯಾಗಿದೆ.
ಇದನ್ನೂ ಓದಿ: ನೇಪಾಳ-ಶ್ರೀಲಂಕಾದಲ್ಲಿಯೂ BJP ಸರ್ಕಾರ ರಚಿಸಲು ಅಮಿತ್ ಶಾ ಯೋಜಿಸಿದ್ದಾರೆ: ತ್ರಿಪುರ ಸಿಎಂ

