ನಿಲ್ಲದ ದೇವದಾಸಿ ಪದ್ದತಿ; ದೇವದಾಸಿಯಾಗಲು ನಿರಾಕರಿಸಿ ದೂರು ನೀಡಿದ ಯುವತಿ ರಕ್ಷಣೆ!

ಹೆಣ್ಣು ಮಕ್ಕಳನ್ನು ಕಾಡುತ್ತಿದ್ದ, ಲೈಂಗಿಕ ಹಿಂಸೆಗೆ ದೂಡುತ್ತಿದ್ದ ದೇವದಾಸಿ ಪದ್ದತಿ ಕಾನೂನು ಪ್ರಕ್ರಾರ ರದ್ದಾಗಿದ್ದರೂ ಸಹ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಈಗಲೂ ಜಾರಿಯಲ್ಲಿದೆ. 19 ವರ್ಷದ ಯುವತಿಯನ್ನು ಈ ಅನಿಷ್ಟ ಪದ್ದತಿಗೆ ದೂಡಲು ಆಕೆಯ ಪೊಷಕರು ಸಿದ್ದತೆ ನಡೆಸಿದ್ದು, ಯುವತಿ ತಮ್ಮ ಮನೆಯಿಂದ ತಪ್ಪಿಸಿಕೊಂಡು ಹೋಗಿ ಪೊಲೀಸರಿಗೆ ದೂರು ನೀಡಿದ್ದಾಳೆ.

ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ದೇವದಾಸಿ ನಿರ್ಮೂಲಾನ ಕೇಂದ್ರ  ಅಧಿಕಾರಿಗಳು ಆ ಬಾಲಕಿಯನ್ನು ರಕ್ಷಿಸಿ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸಂತ್ರಸ್ತ ಯುವತಿ ನೆರೆಮನೆಯ ಹುಡುಗನನ್ನು ಪ್ರೀತಿಸುತ್ತಿದ್ದರು. ಆದರೆ, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದ ಪೋಷಕರು, ಆಕೆ ಮದುವೆಯಾದರೆ, ಅವರ ಆಸ್ತಿ ಆಕೆ ಮತ್ತು ಅಕೆಗೆ ಗಂಡನ ಪಾಲಾಗುತ್ತದೆ ಎಂದು ಯುವತಿಯ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಆಕೆಯ ವಿವಾಹವನ್ನು ತಪ್ಪಿಸಲು ಆಕೆಯನ್ನು ದೇವದಾಸಿಯನ್ನಾಗಿ ಮಾಡಲು ಮುಂದಾಗಿದ್ದರು. ತನ್ನ ಕುಟುಂಬದವರ ಸಂಚು ತಿಳಿದ ಯುವತಿ ಅಲ್ಲಿಂದ ತಪ್ಪಿಸಿಕೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾಳೆ.

“ಯುವತಿಯ ತಾಯಿಯೂ ಕೂಡ ಮಾಜಿ ದೇವದಾಸಿಯಾಗಿದ್ದು, ತನ್ನ ಮಗಳನ್ನು ಅದೇ ಕೆಲಸಕ್ಕೆ ತಳ್ಳಲು ಮುಂದಾಗಿದ್ದರು. ಈ ಪದ್ದತಿಯ ಮೂಲಕ ಯುವತಿಯರನ್ನು ದೇವತೆಗಳ ಹೆಸರಿನಲ್ಲಿ ಲೈಂಗಿಕ ಗುಲಾಮಗಿರಿಗೆ ದೂಡಲಾಗುತ್ತದೆ. ಸಂತ್ರಸ್ತ ಯುವತಿ ದೂರು ನೀಡಿದ ನಂತರ ನಾವು ಅವರ ಕುಟುಂಬದವರನ್ನು ವಿಚಾರಣೆ ನಡೆಸಿದ್ದೇವೆ. ಈಗ ಅವರು ಆಕೆಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಲು ಒಪ್ಪಿದ್ದಾರೆ ಎಂದು‌ ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತೆ ಸ್ವತಃ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣವನ್ನು ಸುಲಭವಾಗಿ ಬಗೆಹರಿಸಲಾಯಿತು. ಯುವತಿಯ ಮದುವೆಗೂ ಮುನ್ನ ಆಕೆಯನ್ನು ಕೆಲವು ದಿನಗಳು ಸರ್ಕಾರಿ ಸೌಲಭ್ಯದಲ್ಲಿ ಮತ್ತು ಕೆಲ ದಿನಗಳು ಸ್ನೇಹಿತೆಯ ಮನೆಯಲ್ಲಿ ಇರಿಸಲಾಗಿದೆ. ಆಕೆಯ ಪೋಷಕರು ತಮ್ಮ ಮನಸ್ಸನ್ನು ಬದಲಾಯಿಸುವುದಿಲ್ಲ ಎಂದು ಪೊಲೀಸರಿಗೆ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಳ್ಳಾರಿ ಮತ್ತು ಹೊಸದಾಗಿ ರೂಪುಗೊಂಡ ವಿಜಯನಗರ ಜಿಲ್ಲೆಗಳಲ್ಲಿ ದೇವದಾಸಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಆಡಳಿತ ಮಂಡಳಿಗಳು ತೀವ್ರ ಪ್ರಯತ್ನ ಮಾಡುತ್ತಿವೆ. ಈ ಎರಡೂ ಜಿಲ್ಲೆಗಳಲ್ಲಿ 10,000 ನೋಂದಾಯಿತ ದೇವದಾಸಿಗಳು ಇದ್ದು, ಪ್ರಸ್ತುತ ಸರ್ಕಾರದ ಪುನರ್ವಸತಿ ಯೋಜನೆಗೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರ ಅವರಿಗೆ ಮಾಸಿಕ 1,500 ರೂ. ನೀಡುತ್ತಿದೆ. ಆದರೆ ಇನ್ನು ಮುಂದೆ ಒಬ್ಬರೂ ಸಹ ದೇವದಾಸಿಗಳಾಗದಂತೆ ತಡೆಯುವ ಸವಾಲು ನಮ್ಮ ಮುಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ರಾಹುಲ್‌ಗಾಂಧಿ‌ ಬಳಿ ಸರ್ಕಾರದ ವಿರುದ್ದ ಮಹಿಳೆ ಆರೋಪ; ನಮ್ಮನ್ನು ಹೊಗಳಿದ್ದಾರೆಂದು ಅನುವಾದಿಸಿದ ಪುದುಚೇರಿ ಸಿಎಂ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights