ಗುಜರಾತ್‌ನಲ್ಲಿ BJP ಕೋಟೆ ಭೇದಿಸಿದ AAP; ದೇಶಕ್ಕೆ ಪರ್ಯಾಯ ಶಕ್ತಿ ಎಂದು ವಿಜಯೋತ್ಸವ ಆಚರಣೆ!

ಗುಜರಾತ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಆಮ್‌ ಆದ್ಮಿ ಪಕ್ಷವು ಸೂರತ್‌ ಮಹಾನಗರ ಪಾಲಿಕೆಯಲ್ಲಿ 27 ಸ್ಥಾನಗಳನ್ನು ಗೆದ್ದುಕೊಂಡಿದೆ. ಮೋದಿ ಮತ್ತು ಅಮಿತ್‌ ಶಾ ಅವರ ತವರು ರಾಜ್ಯವಾದ ಗುಜರಾತ್‌ ಬಿಜೆಪಿಯ ಭದ್ರಕೋಟಿಯಾಗಿದ್ದು, ಮೊದಲ ಪ್ರಯತ್ನದಲ್ಲೇ ಬಿಜೆಪಿಗೆ ಸವಾಲೊಡ್ಡಿ ಎಎಪಿ ಗೆಲುವು ಸಾಧಿಸಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಎಎಪಿ ಕಾರ್ಯಕರ್ತರು ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಿಸಿದ್ದು, ಸೂರತ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಗುಜರಾತ್‌ನಲ್ಲಿ ಎಎಪಿ ಅಮೋಘ ಪದಾರ್ಪಣೆ ಮಾಡಿದೆ. ರಾಷ್ಟ್ರ ರಾಜಕಾರಣದಲ್ಲಿ ಪರ್ಯಾಯ ಶಕ್ತಿಯಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷ ಹೊರಹೊಮ್ಮಿದೆ ಎಂದು ಕರ್ನಾಟಕ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೋದಿ- ಅಮಿತ್ ಷಾ ನೆಲದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಹೆಜ್ಜೆಯಿಟ್ಟಿರುವ ಆಮ್ ಆದ್ಮಿ ಪಕ್ಷದ ಈ ಅಮೋಘ ಗೆಲುವು ರಾಷ್ಟ್ರ ರಾಜಕಾರಣವನ್ನೇ ಬದಲಾಯಿಸಲಿದೆ. ಗುಜರಾತಿನ ಉಸ್ತುವಾರಿಗಳಾಗಿದ್ದ ರೋಮಿ ಭಾಟಿ ಅವರೇ ನಮ್ಮ ಕರ್ನಾಟಕದ ಉಸ್ತುವಾರಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಕರ್ನಾಟಕದಲ್ಲೂ ನೆಲೆಯೂರಲಿದ್ದೇವ. ಮುಂಬರುವ ಜಿಲ್ಲಾ ಪಂಚಾಯತಿ, ಬಿಬಿಎಂಪಿ ಚುನಾವಣೆಯಲ್ಲಿ ಖಾತೆ ತೆರೆಯಲಿದ್ದೇವೆ ಎಂದು ಅವರು ಭರವಸೆಯ ಮಾತನಾಡಿದ್ದಾರೆ.

ಕರ್ನಾಟಕ ಉಸ್ತುವಾರಿ ರೋಮಿ ಭಾಟಿ ಮಾತನಾಡಿ, ದೆಹಲಿ, ಪಂಜಾಬಿಗೆ ಮಾತ್ರ ಸೀಮಿತವಾಗಿದ್ದ ನಮ್ಮ ಪಕ್ಷ, ಇಂದು ಹರಿಯಾಣ, ಜಾರ್ಕಂಡ್, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗೋವಾ, ಈಗ ಗುಜರಾತ್ ಮುಂದೆ ಕರ್ನಾಟಕ ಅಲ್ಲದೇ ಇಡೀ ದೇಶದ ಚುಕ್ಕಾಣಿ ಹಿಡಿಯುವುದರಲ್ಲಿ ಸಂದೇಹವಿಲ್ಲ ಎಂದರು.

ವಿಜಯೋತ್ಸವದಲ್ಲಿ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, ಉಪಾಧ್ಯಕ್ಷ ಸುರೇಶ್ ರಾಥೋಡ್, ಬಿ.ಟಿ.ನಾಗಣ್ಣ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ, ಮಾಧ್ಯಮ ಸಹ ಸಂಚಾಲಕರಾದ ವಿಜಯ್ ಶರ್ಮ, ಶಾಂತಲಾ ದಾಮ್ಲೆ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಹಿರಿಯ ಮುಖಂಡರಾದ ಗೋಪಾಲ್ ರೆಡ್ಡಿ, ಹರಿಹರನ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ: ಗುಜರಾತ್‌ ಚುನಾವಣೆ: 576 ಸ್ಥಾನಗಳಲ್ಲಿ 483 ಗೆದ್ದ BJP; ಕಾಂಗ್ರೆಸ್‌ ನಾಯಕರ ಸರಣಿ ರಾಜೀನಾಮೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights