ಬಂಗಾಳದಲ್ಲಿ BJP ಎರಡಂಕಿ ದಾಟಲ್ಲ; ಗೆದ್ದರೆ ಟ್ವಿಟರ್‌ಗೆ ಗುಡ್‌-ಬೈ; ಪುನರುಚ್ಚರಿಸಿದ ಪ್ರಶಾಂತ್ ಕಿಶೋರ್

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದರೆ ಟ್ವಿಟರ್‌ ಬಳಸುವುದನ್ನು ಬಿಡುತ್ತೇವೆ ಎಂದು ಹೇಳಿದ್ದ ಬಂಗಾಳ ರಾಜಕೀಯ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ನೆನಪಿಸಿದ್ದಾರೆ. ಚುನಾವಣಾ ಆಯೋಗವು ಶುಕ್ರವಾರ ಪಂಚರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ಬೆನ್ನಲ್ಲೇ, ಮತ್ತೊಮ್ಮೆ ಟ್ವೀಟ್‌ ಮಾಡಿರುವ ಪ್ರಶಾಂತ್, “ನನ್ನ ಕೊನೆಯ ಟ್ವೀಟ್‌ನಲ್ಲಿ ಹೇಳಿದ್ದನ್ನು ಮಾಡಲು ಮೇ ೨ರವರೆಗೆ ಕಾಯಿರಿ” ಎಂದು ಹೇಳಿದ್ದಾರೆ.

ತಮ್ಮ ಕಳೆದ ಟ್ವೀಟ್‌ನಲ್ಲಿ, ಬಿಜೆಪಿಯು ಬಂಗಾಳದಲ್ಲಿ ಎರಡಂಕಿಯನ್ನು ದಾಟುವುದಿಲ್ಲ. ಒಂದು ವೇಳೆ ಎರಡಂಕಿ ದಾಟಿದರೆ ತಾವು ಟ್ವಿಟರ್‌ ಬಳಕೆನ್ನು ನಿಲ್ಲಿಸುತ್ತೇವೆ ಎಂದು ಪ್ರಶಾಂತ್ ಕಿಶೋರ್‍ ಹೇಳಿದ್ದರು.

ಈ ಕುರಿತು ಮತ್ತೊಮ್ಮೆ ಟ್ವೀಟ್ ಮಾಡಿರುವ ಪ್ರಶಾಂತ್, “ಪ್ರಜಾಪ್ರಭುತ್ವದ ಉಳಿವಿಗಾಗಿ ಭಾರತದಲ್ಲಿ ನಡೆಯುತ್ತಿರುವ ಪ್ರಮುಖ ಕದನಗಳಲ್ಲಿ ಒಂದು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದೆ. ಇಲ್ಲಿನ ಜನರು ಸರಿಯಾದುದನ್ನು ಆಯ್ಕೆ ಮಾಡುವ ಮೂಲಕ ತಮ್ಮ ಸ್ಪಷ್ಟ ಸಂದೇಶವನ್ನು ತಿಳಿಸಲು ಸಜ್ಜಾಗಿದ್ದಾರೆ. ಪಶ್ಚಿಮ ಬಂಗಾಳ ತನ್ನ ಸ್ವಂತ ಮಗಳನ್ನು ಬಯಸುತ್ತಿದೆ. ನನ್ನ ಕೊನೆಯ ಟ್ವೀಟ್‌ನಲ್ಲಿ ಹೇಳಿದ್ದನ್ನು ಮಾಡಲು ಮೇ ೨ರವರೆಗೆ ಕಾಯಿರಿ” ಎಂದು ಬರೆದುಕೊಂಡಿದ್ದಾರೆ.

ಭಾರೀ ಕುತೂಹಲ ಹುಟ್ಟಿಸಿರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಬಿಜೆಪಿ ಹಠ ತೊಟ್ಟಿದೆ. ಇದಕ್ಕೆ ಮಾಧ್ಯಮಗಳು ಸಾಕಷ್ಟು ಹೈಪ್ ನೀಡಿದರೆ, ಹಲವಾರು ಟಿಎಂಸಿ ಮುಖಂಡರು ಒಬ್ಬೊಬ್ಬರಾಗಿ ಬಿಜೆಪಿ ಸೇರುತ್ತಿದ್ದಾರೆ. ಇಷ್ಟೆಲ್ಲದರ ನಡುವೆಯೂ ಬಿಜೆಪಿ ಅಲ್ಲಿ ಎರಡಂಕಿ ದಾಟಲು ಹೆಣಗಾಡುತ್ತಿದೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದರು.

ಡಿಸಂಬರ್ ೨೧ರಂದು ಟ್ವೀಟ್ ಮಾಡಿದ್ದ ಅವರು “ಮಾಧ್ಯಮಗಳ ಭಾರೀ ಪ್ರಚಾರದ ನಡುವೆಯೂ ವಾಸ್ತವದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ಸ್ಥಾನ ಮುಟ್ಟಲು ಹೆಣಗಾಡುತ್ತಿದೆ. ಒಂದು ವೇಳೆ ಅವರು ಈ ಚುನಾವಣೆಯಲ್ಲಿ ಉತ್ತಮ ಪ್ರರ‍್ಶನ ನೀಡಿದ್ದೇ ಆದಲ್ಲಿ ನಾನು ಟ್ವಿಟರ್‌ ಅನ್ನು ತ್ಯಜಿಸುತ್ತೇನೆ. ಬರೆದಿಟ್ಟುಕೊಳ್ಳಿ” ಎಂದು ಸವಾಲು ಹಾಕಿದ್ದರು.

ಈ ಟ್ವೀಟ್‌ ಅನ್ನು ಸೇವ್ ಮಾಡಿಕೊಳ್ಳಿ. ಒಂದು ವೇಳೆ ನನ್ನ ಊಹೆಗಿಂತ ಬಿಜೆಪಿ ಹೆಚ್ಚಿನ ಸಾಧನೆ ಮಾಡಿದರೆ ನಾನು ಈ ಕ್ಷೇತ್ರ ತ್ಯಜಿಸುತ್ತೇನೆ ಎಂದು ಪ್ರಶಾಂತ್ ಕಿಶೋರ್ ಘೋಷಿಸಿದ್ದರು.

ಪ್ರಶಾಂತ್ ಕಿಶೋರ್ ಭಾರತದ ರಾಜಕೀಯ ಚತುರ ಎಂದು ಹೆಸರು ಪಡೆದವರು. ೨೦೧೩ ರಲ್ಲಿ ನರೇಂದ್ರ ಮೋದಿ ಪರವಾಗಿ ಕೆಲಸ ಮಾಡಿದ್ದ ಅವರು ನಂತರ ಬಿಜೆಪಿಯಿಂದ ದೂರವಾಗಿದ್ದಾರೆ. ಆಂದ್ರದಲ್ಲಿ ಜಗನ್ ಪರ ಮತ್ತು ದೆಹಲಿಯಲ್ಲಿ ಕೇಜ್ರಿವಾಲ್ ಪರ ಸೇರಿದಂತೆ ಹಲವು ಯಶಸ್ವಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಸದ್ಯಕ್ಕೆ ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾರ‍್ಜಿಯವರ ತೃಣಮೂಲ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ತಮಿಳುನಾಡು ಚುನಾವಣೆಯಲ್ಲಿಯೂ ಸಹ ಡಿಎಂಕೆ ಪರವಾಗಿ ಕೆಲಸ ಮಾಡುತ್ತಿದ್ದಾರೆ.

ಜೆಡಿಯು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಕಿಶೋರ್ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಿಎಎ ಎನ್‌ಆರ್‌ಸಿ ಪರ ಮತ ಹಾಕಿದನ್ನು ಖಂಡಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಹಾರದ ಯುವಜನರಿಗೆ ಉದ್ಯೋಗ ನೀಡುವುದರ ಪರ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ BJP ಎರಡಂಕಿ ಸ್ಥಾನ ಗೆಲ್ಲುವುದಿಲ್ಲ; ಗೆದ್ದರೆ ರಾಜಕೀಯ ತೊರೆಯುವೆ: ಪ್ರಶಾಂತ್ ಕಿಶೋರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights