ಬೆಂಗಳೂರಿನ ಭೂ ಮಾಫಿಯಾವನ್ನು ತಡೆಯಲು ನನಗೂ ಅಸಾಧ್ಯ: ಸಚಿವ ಅಶೋಕ್‌

ಬೆಂಗಳೂರಿನಲ್ಲಿ ಸರ್ಕಾರಿ ಆಸ್ತಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿರುವ ಭೂ ಮಾಫಿಯಾವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮತ್ತು ಕಂದಾಯ ಸಚಿವರಾಗಿ ತಮಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಸಾಧ್ಯವಿಲ್ಲ ಎಂದು ಸಚಿವ ಆರ್‌. ಅಶೋಕ್‌ ವಿಧಾನಸಭೆಯ ಕಲಾಪದ ವೇಳೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕಂದಾಯ ಇಲಾಖೆಯಲ್ಲಿರುವ ಅಧಿಕಾರಿಗಳು ಸರ್ಕಾರಿ ಭೂಮಿಯನ್ನು ಬಿಲ್ಡರ್‌ಗಳ ಜೊತೆ ಸೇರಿ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಲು ಸಹಾಯ ಮಾಡುತ್ತಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ದಿಮೆದಾರರದೊಂದಿಗೆ ಒಪ್ಪಂದ ಮಾಡಿಕೊಳ್ಳುವ ನಿರ್ಲಜ್ಜ ಭ್ರಷ್ಟ ಅಧಿಕಾರಿಗಳ ವಿರುದ್ಧ ದಂಡನಾತ್ಮಕ ಕ್ರಮವೂ ಕಾರ್ಯನಿರ್ವಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಅಧಿಕಾರಿಗಳನ್ನು ಅಮಾನತು ಮಾಡಿದರೆ, ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುತ್ತಾರೆ. ಬೆಂಗಳೂರಿನಿಂದ ಬೇರೆ ಊರಿಗೆ ವರ್ಗಾವಣೆ ಮಾಡಿದರೆ, ತಕ್ಷಣವೇ ಕೆಎಟಿಗೆ ಹೋಗಿ ತಡೆಯಾಜ್ಞೆ ತಂದು ಅಲ್ಲೇ ಬಂದು ಕೂರುತ್ತಾರೆ. ವಿರೋಧ ಪಕ್ಷದಲ್ಲಿ ಇದ್ದಾಗ ನಾವು ಈ ಅಕ್ರಮಗಳ ಬಗ್ಗೆ ಪ್ರಸ್ತಾಪಿಸಿದ್ದೇವೆ. ಈಗ ಕೈಕಟ್ಟಿದ ಹಾಗೆ ಆಗಿದೆ ಎಂದು ಅವರು ಹೇಳಿದ್ದಾರೆ.

ಆನೆಕಲ್ ತಾಲ್ಲೂಕು ಸಮೀಪದ ಹುಲಿಮಂಗಲ ಗ್ರಾಮದಲ್ಲಿ ದಾಖಲೆಗಳಿಲ್ಲದೆ ಲೇಔಟ್ ಅಭಿವೃದ್ಧಿ ಪಡಿಸಲಾಗಿದೆಮತ್ತು 41 ಸೈಟ್ ಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿಶೇಖರ್ ಗಮನ ಸೆಳೆಯುವ ವಿಚಾರ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಅಶೋಕ್‌, ಈ ವಿಚಾರದಲ್ಲಿ ತಮ್ಮ ಕೈಗಳನ್ನು ಕಟ್ಟಿಹಾಕಲಾಗಿದೆ. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಯಾವುದೇ ಕ್ರಮವು ಕಾರ್ಯನಿರ್ವಹಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಕೆ.ಆರ್.ಪುರಂನಲ್ಲಿ 160 ಕೋಟಿ ಮೌಲ್ಯದ ಸರ್ಕಾರಿ ಜಮೀನಿನಲ್ಲಿ ಬಿಲ್ಡರ್ ಒಬ್ಬರು ಬಹುಮಹಡಿ ಅಪಾರ್ಟ್ ಮೆಂಟ್ ನಿರ್ಮಿಸಿದ್ದಾರೆ. ಕಂಪನಿಯು ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. ಅದರ ಬಗ್ಗೆ ನಮ್ಮ ಗಮನಕ್ಕೆ ಬಂದಾಗ, ಅದರಲ್ಲಿ ಭಾಗಿಯಾಗಿದ್ದ ಅಲ್ಲಿನ ಅಧಿಕಾರಿಯನ್ನು ನಾನು ಅಮಾನತು ಮಾಡಿದ್ದೆ. ಆದರೆ ನಾಲ್ಕು ಗಂಟೆಗಳಲ್ಲಿ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಹೋಗಿ ಮತ್ತೆ ತಮ್ಮ ಕುರ್ಚಿಗಳಲ್ಲಿ ಕುಳಿತಿದ್ದಾರೆ. ನಾನು ಅವರನ್ನು ತುಮಕೂರಿಗೆ ವರ್ಗಾಯಿಸಲು ಆದೇಶಿಸಿದೆ. ಆದರೆ ಅವರು ಕೆಲವೇ ದಿನಗಳಲ್ಲಿ ಮತ್ತೆ ಅದೇ ಸ್ಥಾನಕ್ಕೆ ಮರಳಿದ್ದಾರೆ ಎಂದು ಸಚಿವ ಅಶೋಕ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಬಂಗಳದಲ್ಲಿ ಎಲ್ಲಡೆ ಬಾಂಬ್‌ ಫ್ಯಾಕ್ಟರಿಗಳಿವೆ; ಬಯಲಾಯ್ತು ಅಮಿತ್‌ ಶಾ ಸುಳ್ಳುಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights