‘ಸಿಡಿ ಗ್ಯಾಂಗ್‌’ನ ಗುಟ್ಟು ಯಾರಿಗೆಲ್ಲಾ ಗೊತ್ತು?! ಜಾರಕಿಹೊಳಿಯನ್ನು ಟ್ರ್ಯಾಪ್‌ ಮಾಡಿದವರಾರು?

ಈ ನ್ಯೂಸ್ ಚಾನಲ್ ಗಳು ಪದೇಪದೇ ಹೇಳುತ್ತಿರುವ ‘ಸಿಡಿ ಗ್ಯಾಂಗ್’ ಯಾವುದು ಗೊತ್ತೆ? ಇದರದ್ದೊಂದು ರೋಮಾಂಚಕ ಇತಿಹಾಸವಿದೆ. ಈ ಗ್ಯಾಂಗ್ ಆಕಾಶದಿಂದ ಉದುರಿದ್ದೇನೂ ಅಲ್ಲ, ಶೂನ್ಯದಿಂದ ಉದ್ಭವಿಸಿದ್ದೂ ಅಲ್ಲ. ಅದು ಇದೇ ನ್ಯೂಸ್ ಚಾನಲ್ ಗಳ ಸೃಷ್ಟಿ. ಅವುಗಳ ಅನೈತಿಕ ಜರ್ನಲಿಸಂನ ಕೂಸು. ಬಂಧನಕ್ಕೊಳಗಾಗಿರುವುದು ಇವರದೇ ಒಳಮನೆಯ ಪತ್ರಕರ್ತರು!

ಕರ್ನಾಟಕದಲ್ಲಿ ಒಂದಾದ ಮೇಲೊಂದರಂತೆ ನ್ಯೂಸ್ ಚಾನಲ್ ಗಳು ಆರಂಭವಾದಾಗ ವಿಪರೀತ ಸ್ಪರ್ಧೆಯೂ ಆರಂಭವಾಯಿತು. ಕರ್ನಾಟಕದ ಮಟ್ಟಿಗೆ ಕನ್ನಡ ನ್ಯೂಸ್ ಚಾನಲ್ ಲಾಭದಾಯಕ ಉದ್ಯಮವಲ್ಲ. ಎಂಟರ್ಟೈನ್ಮೆಂಟ್ ಚಾನಲ್ ಗಳಿಗೆ ಇರುವಷ್ಟು ಜಿಆರ್ ಪಿ ನ್ಯೂಸ್ ಚಾನಲ್ ಗಳಿಗೆ ಇರುವುದಿಲ್ಲ. ಜಾಹೀರಾತುಗಳನ್ನು ನಂಬಿಕೊಂಡು ಚಾನಲ್ ನಡೆಸುವುದು ಕಷ್ಟ. ಇಂಥ ಸಂದರ್ಭದಲ್ಲಿ ದಾರಿ ತಪ್ಪಿ ನಿಂತಿದ್ದು ಇದೇ ಸ್ಟಿಂಗ್ ಆಪರೇಷನ್ ಟೀಮ್ ಗಳು.

ದೇಶದ ಮಟ್ಟದಲ್ಲಿ ತೆಹಲ್ಕಾ ಹಲವು ಸ್ಟಿಂಗ್ ಆಪರೇಷನ್ ಗಳನ್ನು ಮಾಡಿ ಹೆಸರು ಮಾಡಿದಾಗ ನ್ಯೂಸ್ ಚಾನಲ್ ಗಳೂ ಸ್ಟಿಂಗ್ ಮಾಡುವ ಕೆಲಸ ಶುರು ಮಾಡಿದವು. ಎಲ್ಲ ನ್ಯೂಸ್ ಚಾನಲ್ ಗಳಲ್ಲೂ ಕ್ರೈಂ, ರಾಜಕಾರಣ, ಸಿನಿಮಾ ಹೀಗೆ ಬೇರೆಬೇರೆ ವಿಷಯಗಳಿಗೆ ಪ್ರತ್ಯೇಕ ವರದಿಗಾರರ ತಂಡಗಳಿರುತ್ತವೆ. ಇದಕ್ಕೆ ಹೊಸದಾಗಿ ಸೇರಿಕೊಂಡಿದ್ದು ಸ್ಟಿಂಗ್ ಆಪರೇಷನ್ ತಂಡಗಳು.

ಹಾಗೆ ನೋಡಿದರೆ ನ್ಯೂಸ್ ಚಾನಲ್ ಗಳು ಸ್ಟಿಂಗ್ ಮಾಡುವುದು ಅಪರಾಧವೂ ಅಲ್ಲ, ಅನೈತಿಕವೂ ಅಲ್ಲ. ಆದರೆ ಅದರದ್ದೇ ಆದ ಚೌಕಟ್ಟುಗಳು ಇರಬೇಕು. ಅದನ್ನು ದಾಟಿದಾಗ ಎಕ್ಟಾರ್ಷನ್ (ಸುಲಿಗೆ), ವಂಚನೆ, ಹಫ್ತಾ ವಸೂಲಿ, ಬ್ಲಾಕ್ ಮೇಲಿಂಗ್ ಶುರುವಾಗಿಬಿಡುತ್ತದೆ.

ಕರ್ನಾಟಕದಲ್ಲಿ ಮೊದಲು ಸ್ಟಿಂಗ್ ಆಪರೇಷನ್ ಶುರು ಮಾಡಿದ್ದು ಟಿವಿ9, ನನಗೆ ನೆನಪಿದ್ದಂತೆ ಝಳಕಿ ಚೆಕ್ ಪೋಸ್ಟ್ ನಲ್ಲಿ ನಡೆಯುತ್ತಿದ್ದ ದಂಧೆಗಳ ಕುರಿತು. ಅದು ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಇದೇ ರೀತಿಯ ಹಲವು ಸ್ಟಿಂಗ್ ಆಪರೇಷನ್ ಗಳು ಕಾನೂನುಬಾಹಿರ ದಂಧೆಗಳು, ಭ್ರಷ್ಟಾಚಾರಗಳನ್ನು ಬಯಲಿಗೆಳೆದು ಸೈ ಎನಿಸಿಕೊಂಡವು. ಬರಬರುತ್ತ ರಾಯರ ಕುದುರೆ ಕತ್ತೆಯಾಯಿತು. ಕನ್ನಡ ನ್ಯೂಸ್ ಚಾನಲ್ ಗಳ ಸ್ಟಿಂಗ್ ಆಪರೇಷನ್ ಟೀಂಗಳು ಲಕ್ಷ್ಮಣ ರೇಖೆ ದಾಟಿದವು. ಸ್ಟಿಂಗ್ ಮಾಡುವ ಹುಡುಗರು ನೋಡನೋಡುತ್ತಿದ್ದಂತೆ ನಟೋರಿಟಿ ಬೆಳೆಸಿಕೊಂಡರು. ಬ್ಲಾಕ್ ಮೇಲ್ ಗೆ ಇಳಿದು ಚಾನಲ್ ಗಳಿಗೆ ಹಣ ಕೊಡತೊಡಗಿದರು. ಚಾನಲ್ ನಡೆಸಲು ಒದ್ದಾಡುತ್ತಿದ್ದ ಮಾಲೀಕರಿಗೆ ಹೊಸ ಆದಾಯದ ಮೂಲ ಸಿಕ್ಕಿತು. ಇವರಿಗೆ ‘ಫ್ರೀ ಹ್ಯಾಂಡ್’ ಕೂಡ ಸಿಕ್ಕಿಬಿಟ್ಟಿತು.

ನಿಮಗೆ ನೆನಪಿರಬಹುದು. ನಕಲಿ ಪಾಸ್ ಪೋರ್ಟ್ ದಂಧೆಗೆ ಸಂಬಂಧಿಸಿದಂತೆ ನ್ಯೂಸ್ ಚಾನಲ್ ಒಂದು ಸ್ಟಿಂಗ್ ಆಪರೇಷನ್ ನಡೆಸಿತು. ಅದು ಪ್ರಸಾರವಾಗುವ ಮೊದಲೇ ಅದರ ಮಾಹಿತಿಯನ್ನು ದಂಧೆಕೋರರಿಗೆ ನೀಡಿದ್ದು ಅದೇ ಚಾನಲ್ ನಿರೂಪಕ! ಕೊನೆಗೆ ಪೊಲೀಸರು ಪತ್ರಕರ್ತನನ್ನೇ ಬಂಧಿಸಿ ಜೈಲಿಗಟ್ಟಿದರು. ಚಾನಲ್ ಆತನನ್ನು ಕಿತ್ತುಹಾಕಿ ಕೈ ತೊಳೆದುಕೊಂಡಿತು. ಮತ್ತೊಂದು ಚಾನಲ್ ನ ನಂ.2 ಪೊಜಿಷನ್ ನಲ್ಲಿ ಇದ್ದಾತ ಇದೇ ಬಗೆಯ ಎಕ್ಟಾರ್ಷನ್ ಕೇಸಿನಲ್ಲಿ ಸಿಕ್ಕುಬಿದ್ದ, ಚಾನಲ್ ಇವನಿಗೂ ನಮಗೂ ಸಂಬಂಧವಿಲ್ಲ ಎಂದು ಉದ್ದನೆ ಹೇಳಿಕೆ ನೋಡಿ ಡಿಸೋನ್ ಮಾಡಿಕೊಂಡಿತು. ಇಂಥ ಬಿಡಿಬಿಡಿಯಾದ ಪ್ರಕರಣಗಳು ಹಲವಾರು ನಡೆದುಹೋದವು. ಸ್ಟಿಂಗ್ ಟೀಂಗಳ ನಟೋರಿಟಿಗೆ ಬೆದರಿದ ಕೆಲವು ನ್ಯೂಸ್ ಚಾನಲ್ ಗಳು ಆ ವಿಭಾಗವನ್ನೇ ಮುಚ್ಚಿಬಿಟ್ಟವು.

ಇದನ್ನೂ ಓದಿ: ಸಾಹುಕಾರ್ ಕೇಸ್ : ತಲೆಮರಿಸಿಕೊಂಡ ಇಬ್ಬರು ‘ಸಿಡಿ’ಗೇಡಿಗಳಿಗಾಗಿ ತಲಾಶ್…

ಜಾರಕಿಹೊಳಿ ಕೇಸಿನಲ್ಲಿ ಬಂಧಿತರಾಗಿರುವುದು ಇಬ್ಬರು ಪತ್ರಕರ್ತರು. ಇವರಿಬ್ಬರು ಮತ್ತು ಇನ್ನೂ ಕೆಲವರು ಬಸ್ ಮಾಲೀಕರೊಬ್ಬರ ಚಾನಲ್ ನಲ್ಲಿ ಸ್ಟಿಂಗ್ ಆಪರೇಷನ್ ಟೀಂ ನಲ್ಲಿದ್ದವರು. ನಂತರದ ದಿನಗಳಲ್ಲಿ ಎಲ್ಲರೂ ಬೇರೆ ಬೇರೆ ಚಾನಲ್ ಗಳಿಗೆ ಚೆದುರಿ ಹೋದರು. ಆದರೆ ಟೀಂ ಮಾತ್ರ ಹಾಗೇ ಇತ್ತು. ಜಾರಕಿಹೊಳಿಯನ್ನು ಸ್ಟಿಂಗ್ ಮಾಡಿ ಕೆಡವಿಕೊಳ್ಳುವ ಸುಪಾರಿ ಪಡೆದುಕೊಂಡಿದ್ದು ಇದೇ ಟೀಂ. ಈ ಆಪರೇಷನ್ ಗೆ ಅವರು ಕೆಲಸ ಮಾಡುವ ಸಂಸ್ಥೆಗಳ ಬೆಂಬಲವಿರಲಿಲ್ಲ. In fact ಇದು ಅವರ ಖಾಸಗಿ ಪ್ರಾಜೆಕ್ಟ್ ಆಗಿತ್ತು.

ಮೊದಲು ಒಂದು ನಕಲಿ ಕಂಪೆನಿ ಸೃಷ್ಟಿಸಿ, ಟೆಂಡರ್ ಒಂದರಲ್ಲಿ ಭಾಗವಹಿಸಿ ಲಂಚ ಕೊಟ್ಟು ಜಾರಕಿಹೊಳಿಯನ್ನು ಟ್ರಾಪ್ ಮಾಡುವ ಪ್ರಯತ್ನ ಮಾಡಲಾಯಿತು. ಆದರೆ ಅದು ಫಲಕಾರಿಯಾಗಲಿಲ್ಲ. ಜಾರಕಿಹೊಳಿ ಬಲೆಗೆ ಬೀಳಲಿಲ್ಲ. ಆಮೇಲೆ ಆತನ ಕಚ್ಚೆಹರುಕುತನದ ವೀಕ್ನೆಸ್ ಅರಿತಿದ್ದ ತಂಡ, ಹನಿಟ್ರಾಪ್ ಮಾಡಿತು. ನಂತರ ನಡೆದಿದ್ದೆಲ್ಲ ಇತಿಹಾಸ‌.

ಕರ್ನಾಟಕದ ಮಟ್ಟಿಗೆ ಈ ಹನಿಟ್ರಾಪ್ ಅತ್ಯಂತ ಪ್ರೊಫೆಷನಲ್ ಆಗಿತ್ತು. ದುಬಾರಿ ಹಿಡನ್ ಕ್ಯಾಮೆರಾಗಳನ್ನು ಬಳಸಲಾಗಿತ್ತು. ಮೊಬೈಲ್ ಚಾರ್ಜರ್ ನಲ್ಲಿ ಕ್ಯಾಮೆರಾ ಇಡಲಾಗಿತ್ತು ಎಂಬ ಮಾಹಿತಿ ಇದೆ. ವಿಡಿಯೋದಲ್ಲಿ ಇರುವುದು ಯಾರು ಎಂಬುದು ಬಹಳ ಸ್ಪಷ್ಟವಾಗಿ ಗೊತ್ತಾಗಬೇಕು, ಅನುಮಾನಕ್ಕೆ ಎಡೆ ಇರಬಾರದು ಎಂದು ಈ ಮಟ್ಟಿಗಿನ ಪ್ರೊಫೆಷನಲಿಸಂ ಬಳಸಲಾಗಿತ್ತು.

ಹಾಗೆ ನೋಡಿದರೆ ದಿನೇಶ್ ಕಲ್ಲಳ್ಳಿ ಕೊನೆಯ ಹಂತದಲ್ಲಿ ಬಳಕೆಯಾದ ಪಾನ್ ಅಷ್ಟೆ. ಬಹುಶಃ ಈ ಸೆಕ್ಸ್ ಸ್ಕ್ಯಾಂಡಲ್ ನ ಇಂಟೆನ್ಸಿಟಿ ಕಲ್ಲಳ್ಳಿಗೆ ಅರ್ಥವಾಗುವಷ್ಟರಲ್ಲಿ ತಡವಾಗಿತ್ತು. ಇದು ತನ್ನ ಬುಡಕ್ಕೆ ಬಂತು ಎಂದು ಅರ್ಥವಾಗುತ್ತಿದ್ದಂತೆ ದೂರು ಕೊಟ್ಟ ಸ್ಪೀಡಿನಲ್ಲೇ ಅವರು ವಾಪಾಸೂ ತೆಗೆದುಕೊಂಡರು.

ಕೇಸೇ ಇಲ್ಲದಿದ್ದರೂ SIT ತನಿಖೆ ಆರಂಭಿಸಿತು. ಇಬ್ಬರು ಪತ್ರಕರ್ತರನ್ನು ಬಂಧಿಸಲಾಯಿತು. ಆಮೇಲೆ ಜಾರಕಿಹೊಳಿ ಬಂದು ದೂರು ಕೊಟ್ಟರು. ಅಲ್ಲಿಗೆ ಕೇಸು ಒನ್ ಸೈಡೆಡ್ ಆಗಿಹೋಯಿತು. ಜಾರಕಿಹೊಳಿಗೆ ಅನ್ಯಾಯ ಆಗಿದೆ, ಅನ್ಯಾಯ ಮಾಡಿದವರೆಲ್ಲ ಕೇಸಿನಲ್ಲಿ ಸಿಕ್ಕಿಬೀಳಬೇಕು, ಇದು ಒನ್ ಲೈನ್ ಅಜೆಂಡಾ. ಕೊನೆಗೆ ಜಾರಕಿಹೊಳಿ ಕ್ಲೀನ್ ಚಿಟ್ ಪಡೆದು ಮತ್ತೆ ಸಂಪುಟ ಸೇರಿಕೊಳ್ಳಬೇಕು, ಇದು ಪಕ್ಕಾ ರಾಜಕೀಯ ತೀರ್ಮಾನ. ಈಗ ಆ ಹುಡುಗಿಯೂ ಮಾತಾಡಿದ್ದಾಳೆ. ನನಗೆ ರಕ್ಷಣೆ ಬೇಕು ಅಂತಿದ್ದಾಳೆ.‌ ಇವತ್ತು ಆಕೆಯನ್ನು‌ ವಿಚಾರಣೆಗೆ ಕರೆದೊಯ್ಯಬಹುದು, ಬಂಧನವೂ ಆಗಬಹುದು. ಆಕೆಯೇ ಬಂದು ದೂರು ಕೊಟ್ಟರೆ ಅದೂ ಕೂಡ ಎಫ್ ಐ ಆರ್ ಆಗಬೇಕಾಗುತ್ತದೆ. ಜಾರಕಿಹೊಳಿ ವಿರುದ್ಧ ತನಿಖೆ ನಡೆಯಬೇಕಾಗುತ್ತದೆ. ಇದೆಲ್ಲ ಒಂದು ಹಂತದ ವಿದ್ಯಮಾನಗಳು.

ಆದರೆ ನಿಜಕ್ಕೂ ತಮಾಶೆ ಎಂದರೆ ತಮ್ಮದೇ ಭಾಗವಾದ, ಕರುಳುಬಳ್ಳಿಯಾದ ಸ್ಟಿಂಗ್ ಆಪರೇಷನ್ ಟೀಂಗಳನ್ನು ನ್ಯೂಸ್ ಚಾನಲ್ ಗಳು ‘ಸಿಡಿ ಗ್ಯಾಂಗ್’ ಎಂದು ಕರೆಯುತ್ತಿವೆ!

– ದಿನೇಶ್‌ ಕುಮಾರ್ ದಿನೂ


ಇದನ್ನೂ ಓದಿ: ಸಿಡಿ ಶೂರರ ಬೇಟೆ : ತಲೆಮರಿಸಿಕೊಂಡ ಪತ್ರಕರ್ತನೇ ಸಿಡಿ ‘ಕಿಂಗ್’ಪಿನ್ನಾ..?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights