ಮೋದಿಯವರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ವಹಿಸಿದರೆ BJPಗರು ಒಪ್ಪುವರೇ?: ಹೆಚ್‌ಡಿಕೆ

ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ಪಕ್ಷವು ಬೆಳಗಾವಿ ವಿಚಾರದಲ್ಲಿ ಪದೇ ಪದೇ ವಿವಾದವನ್ನು ಎಚ್ಚಿಸುತ್ತಲೇ ಇದೆ. ಈ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಮೋದಿಯವರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ವಹಿಸಿದರೆ BJPಗರು ಒಪ್ಪುವರೇ? ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಮರಾಠಿಗರ ಮೇಲೆ ಹಲ್ಲೆ ನಡಯುತ್ತಿದೆ. ಹಾಗಾಗಿ ಮಹಾರಾಷ್ಟ್ರದ ಎಲ್ಲಾ ಪಕ್ಷಗಳ ನಿಯೋಗ ಬೆಳಗಾವಿಗೆ ಭೇಟಿ ನೀಡಬೇಕು ಎಂದು ಶಿವಸೇನಾ ಮುಖಂಡ ಸಂಜಯ್‌ ರಾವತ್‌ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್‌ ಮಾಡಿರುವ ಹೆಚ್‌ಡಿಕೆ, ಗಡಿ ವಿಚಾರದಲ್ಲಿ ಮಹಾಜನ ಆಯೋಗದ ವರದಿಯೇ ಅಂತಿಮ. ಮಹಾರಾಷ್ಟ್ರದ ಹಠದಿಂದಲೇ ರಚಿಸಲಾದ ಮಹಾಜನ ಆಯೋಗವು ಬೆಳಗಾವಿ ಕರ್ನಾಟಕದ್ದು ಎಂದು ಸ್ಪಷ್ಟವಾಗಿ ಹೇಳಿದೆ. ಈ ವಿಚಾರವಾಗಿ‌ ಮಹಾರಾಷ್ಟ್ರ ಮತ್ತೊಮ್ಮೆ ನಡೆಸುತ್ತಿರುವ ಕಾನೂನು ಹೋರಾಟ ವ್ಯರ್ಥವಾಗಲಿದೆ. ಅಲ್ಲಿ ವರೆಗೆ ವಿಸ್ತರಾಣಾವಾದದ ಮಾತುಗಳನ್ನು ನೆರೆಯ ರಾಜ್ಯ ನಿಲ್ಲಿಸುವುದು ಒಳಿತು ಎಂದಿದ್ದಾರೆ.

ಗಡಿ ವಿವಾದದಲ್ಲಿ ಪ್ರಧಾನಿ ಮೋದಿ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಲಕ್ಷ್ಮಣ ಸವದಿ ಬಯಸಿದ್ದಾರೆ. ಈ ವಿವಾದದಲ್ಲಿ ಯಾರ ಮಧ್ಯಸ್ಥಿತಿಕೆಯೂ ಬೇಡ. ಪ್ರಧಾನಿ ಮಧ್ಯಸ್ಥಿಕೆ ಮಾಡಿದರೆ ಮಹಾರಾಷ್ಟ್ರ ಬಿಜೆಪಿಯು ಅವರ ಮೇಲೆ ಪ್ರಭಾವ ಬೀರದೇ ಇರದೇ? ಮಧ್ಯಸ್ಥಿಕೆಯಲ್ಲಿ ಮೋದಿಯವರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ವಹಿಸಿದರೆ ಬಿಜೆಪಿಗರು ಒಪ್ಪುವರೇ? ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಕಳೆದೆಂಟು ದಿನಗಳಿಂದ ಮರಾಠಿಗರ ಮೇಲೆ ಹಲ್ಲೆ ನಡೆಯುತ್ತಿರುವುದಾಗಿಯೂ, ಅಲ್ಲಿಗೆ ಸರ್ವಪಕ್ಷಗಳ ನಿಯೋಗ ತೆರಳಬೇಕಾಗಿಯೂ ಶಿವಸೇನೆಯ ನಾಯಕರೊಬ್ಬ ಹೇಳಿದ್ದಾರೆ. ಪದೇ ಪದೆ ಗಡಿ, ಭಾಷೆ ವಿವಾದ ಕೆಣಕುತ್ತಿರುವ ಶಿವಸೇನೆ ನಡೆ ಖಂಡನೀಯ. ಸರ್ಕಾರದ ವಿರುದ್ಧ ಜನರಿಗೆ ಇರುವ ಅಸಮಾಧಾನ ಮರೆಮಾಚಲು ಶಿವಸೇನೆ ಈ ಕೆಣಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಕನ್ನಡ ಪರ ಹೋರಾಟಗಾರರು ಕನ್ನಡ ಧ್ವಜ ಸ್ಥಾಪಿಸಿರುವುದನ್ನು ಶಿವಸೇನೆ ಅಪರಾಧವೆಂಬಂತೆ ನೋಡುತ್ತಿದೆ. ಅಲ್ಲಿಂದಾಚೆಗೆ ಮಹಾರಾಷ್ಟ್ರ ಪ್ರೇರಿತ ಭಾಷೆ, ಗಡಿ ವಿವಾದ ಮುನ್ನೆಲೆಗೆ ಬಂದಿದೆ. ಅಸಲಿಗೆ ಬೆಳಗಾವಿ ನಮ್ಮದು. ಇಲ್ಲಿ ಕನ್ನಡ ಧ್ವಜ ಹಾರಿಸುವುದು ನಮ್ಮ ಹಕ್ಕು. ಇದನ್ನು ಪ್ರಶ್ನಿಸಲು ಮಹಾರಾಷ್ಟ್ರಕ್ಕೆ ಯಾವ ಹಕ್ಕೂ ಇಲ್ಲ ಎಂದಿದ್ದಾರೆ.

ಬೆಳಗಾವಿಯಲ್ಲಿ ಅಕ್ರಮವಾಗಿ ವಿಧಾನಸೌಧ ನಿರ್ಮಿಸಿ 2ನೇ ರಾಜಧಾನಿ ಮಾಡಲಾಗಿದೆ ಎಂದು ಮಹಾರಾಷ್ಟ್ರ ವಾದಿಸಿದೆ. ಬೆಳಗಾವಿ ವಿಚಾರದಲ್ಲಿನ ಮಹಾರಾಷ್ಟ್ರ ಖ್ಯಾತೆ ಗಮನಿಸಿಯೇ ನನ್ನ ಅವಧಿಯಲ್ಲಿ ಅದನ್ನು ನಿರ್ಮಿಸಲಾಯಿತು, ಕಲಾಪವನ್ನೂ ನಡೆಸಲಾಯಿತು. ಸುವರ್ಣ ವಿಧಾನಸೌಧವು ಮಹಾರಾಷ್ಟ್ರ ವಿಸ್ತರಣಾವಾದದ ವಿರುದ್ಧದ ಕನ್ನಡಿಗರ ಸಾರ್ವಭೌಮತ್ವದ ಸಂಕೇತ ಎಂದಿದ್ದಾರೆ.

ಇದನ್ನೂ ಓದಿ: ಗಡಿ ವಿವಾದ: ಬೆಳಗಾವಿಗೆ ಮಹಾರಾಷ್ಟ್ರದ ಸರ್ವಪಕ್ಷಗಳು ಭೇಟಿ ನೀಡಲು ಶಿವಸೇನಾ ಕರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights