ಫ್ಯಾಕ್ಟ್‌ಚೆಕ್: ಮಹಾತ್ಮ ಗಾಂಧಿಯೊಂದಿಗೆ ಮಾತನಾಡಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿಲ್ಲ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದಾರೆ ಎನ್ನುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೋದಲ್ಲಿ, ರಾಹುಲ್‌ ಗಾಂಧಿ ಮಹಾತ್ಮ ಗಾಂಧಿಯವರೊಂದಿಗೆ ಒಂದು ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದೆ, ಆದರೂ ನನಗೆ ಅವರ ವಿಚಾರಗಳಲ್ಲಿ ಸಹಮತವಿತ್ತು ಎಂದು ಹೇಳಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ರಾಹುಲ್ ಅವರ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದು, ಗಾಂಧಿಯವರೊಂದಿಗೆ ಸಂವಹನ ನಡೆಸಲು ಹೇಗೆ ಸಾಧ್ಯ, ದೇಶದ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವ ಪಕ್ಷವನ್ನು ದೇವರೇ ಕಾಪಾಡಬೇಕು ಎಂದು ವ್ಯಂಗ್ಯದೊಂದಿಗೆ ಟೀಕೆಯನ್ನು ಮಾಡಿದ್ದಾರೆ. ಹಾಗಿದ್ದರೆ ರಾಹುಲ್ ಗಾಂಧಿಯ ಹೇಳಿಕೆ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊ ಪೋಸ್ಟ್‌ಗೆ ಸಂಬಂಧಿಸಿದಂತೆ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, 26 ಫೆಬ್ರವರಿ 2022 ರಂದು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊ ಲಭ್ಯವಾಗಿದೆ. ವೀಡಿಯೊದಲ್ಲಿ, ರಾಹುಲ್ ಗಾಂಧಿಯವರು ಮಹಾತ್ಮ ಗಾಂಧಿಯವರ ಕುರಿತು ತಮ್ಮ ಮುತ್ತಜ್ಜ ಜವಾಹರಲಾಲ್ ನೆಹರು ಬರೆದ ಪತ್ರವನ್ನು ಉಲ್ಲೇಖಿಸುವುದನ್ನು ಕಾಣಬಹುದು.

ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ವಿಡಿಯೊವನ್ನು ಎಡಿಟ್ ಮಾಡಲಾಗಿದೆ ಎಂದು ಕಂಡುಕೊಂಡಿದ್ದೇವೆ. ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಮಹಾತ್ಮ ಗಾಂಧಿಯವರೊಂದಿಗಿನ ಭಿನ್ನಾಭಿಪ್ರಾಯದ ಕುರಿತು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಬರೆದ ಪತ್ರವನ್ನು ರಾಹುಲ್ ಗಾಂಧಿ ಉಲ್ಲೇಖಿಸುತ್ತಿರುವುದನ್ನು ದೀರ್ಘ ವೀಡಿಯೊ ತೋರಿಸುತ್ತದೆ. ವೀಡಿಯೊವನ್ನು ದ್ವಾರಕದಲ್ಲಿ ಚಿತ್ರೀಕರಣ ಮಾಡಲಾಗಿದೆ ಮತ್ತು 26 ಫೆಬ್ರವರಿ 2022 ರಂದು ಕಾಂಗ್ರೆಸ್‌ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಅದನ್ನು ಅಪ್‌ಲೋಡ್ ಮಾಡಲಾಗಿದೆ.

ನೆಹರೂ ಅವರ ಪತ್ರದ ಕುರಿತು ಮಾತನಾಡಿರುವ ರಾಹುಲ್, ನೆಹರೂ ಅವರು ಬರೆದ ಪತ್ರದಲ್ಲಿ – ಗಾಂಧಿಜೀ ಮತ್ತು ನಾನು ನಿರ್ದಿಷ್ಟ ವಿಷಯದ ಬಗ್ಗೆ ಚರ್ಚಿಸಿದ್ದೇವೆ. ನನ್ನ ತಾರ್ಕಿಕ ಚಿಂತನೆಯು ಗಾಂಧೀಜಿಯವರಿಗೆ ತಪ್ಪೆಂದು, ನನಗೆ ನಾನು ಸರಿ ಎಂದು ವಾದ ಮಾಡುತ್ತಿದ್ದೇವೆ. ಆದರೆ, ವಾಸ್ತವವಾಗಿ ನನಗೆ ಗೊತ್ತಿತ್ತು ಅವರೇ ಸರಿ ಮತ್ತು ನಾನು ತಪ್ಪು” ಎಂದು ನೆಹರು ಮಾತುಗಳನ್ನು ಉಲ್ಲೇಖಿಸಿ ರಾಹುಲ್ ಮಾತನಾಡಿರುವ ವಿಡಿಯೊ ಎಂದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 26 ಫೆಬ್ರವರಿ 2022ರಲ್ಲಿ ನಡೆದ  ಕಾಂಗ್ರೆಸ್‌ನ ಚಿಂತನ ಶಿಬಿರದಲ್ಲಿ ಶೀಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ ತಮ್ಮ ಮುತ್ತಜ ಪಂಡಿತ್ ಜವಾಹರ್‌ಲಾಲ್ ನೆಹರು ಮತ್ತು ಮಹಾತ್ಮ ಗಾಂಧಿಯವರು ಪರಸ್ಪರ ಹೊಂದಿದ್ದ ಭಿನ್ನ ಅಭಿಪ್ರಾಯಗಳನ್ನು ಮೀರಿ ಅವರ ನಡುವೆ ಕಾಪಾಡಿಕೊಂಡಿದ್ದ ಸಂಬಂಧದ ಬಗ್ಗೆ ಮಾತನಾಡಿರುವುದು ಸ್ಪಷ್ಟವಾಗಿದೆ. ಆದರೆ ಈ ವಿಡಿಯೋವನ್ನು ಎಡಿಟ್ ಮಾಡಿ ರಾಹುಲ್ ಗಾಂಧಿಯು ಮಹಾತ್ಮ ಗಾಂಧಿಯವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿರುವಂತೆ ಮಾಡಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೋ ರಾಜಸ್ತಾನದ ದಲಿತ ವಿದ್ಯಾರ್ಥಿಯ ಸಾವಿನ ಘಟನೆಗೆ ಸಂಬಂಧಿಸಿದ್ದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights