ಸಾಹುಕಾರನ ಪರವಾಗಿ ರಾಜ್ಯ ಸರ್ಕಾರ : ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಆಪ್ ಪ್ರತಿಭಟನೆ!

ಕಳಂಕಿತ ರಮೇಶ್ ಜಾರಕಿಹೊಳಿ ಪರವಾಗಿ ಕೆಲಸ ಮಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ಮಾಡಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ ಮಾಡಿದರು.

ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಹೊರಬಿದ್ದ ನಂತರ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯ ವಿರುದ್ದ ಹಾಗೂ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಬಿಜೆಪಿ ಸರ್ಕಾರ ಎಲ್ಲೆಲ್ಲಿ ಅಧಿಕಾರದಲ್ಲಿ ಇರುತ್ತದೆಯೋ ಅಲ್ಲೆಲ್ಲಾ ಮಹಿಳೆಯರಿಗೆ ಅಸುರಕ್ಷತಾ ಭಾವನೆ ಇದ್ದೇ ಇರುತ್ತದೆ. ರಾಜ್ಯದ ಪ್ರಭಾವಿ ವ್ಯಕ್ತಿಯೊಬ್ಬರಿಂದ ಮಹಿಳೆಗೆ ಆಗಿರುವ ಅನ್ಯಾಯದ ವಿರುದ್ದ ಕೇಂದ್ರ ಮಹಿಳಾ ಆಯೋಗ ಈ ವಿಚಾರವಾಗಿ ದನಿ ಎತ್ತಿದ್ದರೂ ರಾಜ್ಯ ಮಹಿಳಾ ಆಯೋಗ ಏನು ಮಾಡುತ್ತಿದೆ, ಇನ್ನು ಬದುಕಿದೆಯೇ? ಎಂದು ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಪ್ರಶ್ನಿಸಿದ್ದಾರೆ.

‘ಪ್ರಕರಣವನ್ನು ಸಂಪೂರ್ಣ ಮುಚ್ಚಿಹಾಕಲು, ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸಲು ಬಿಜೆಪಿ ರಾಜ್ಯ ಸರ್ಕಾರ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಈ ಕೂಡಲೇ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿ ಬಂಧಿಸುವ ಮೂಲಕ ವಿಚಾರಣೆಯನ್ನು ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಕ್ಷವು ರಾಜ್ಯದ ಮೂರೂವರೆ ಕೋಟಿ ಮಹಿಳೆಯರ ಪರವಾಗಿ ಒಕ್ಕೊರಲಿನಿಂದ ಆಗ್ರಹಿಸುತ್ತದೆ’ ಎಂದರು.

ದೇಶದಲ್ಲಿನ ಮಹಿಳೆಯರ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳಗಳಂತಹ ಶೋಷಣೆಗಳಿಂದ ತಪ್ಪಿಸಲು ಕಠಿಣವಾದ ನಿರ್ಭಯಾ ಕಾನೂನು ರಚಿಸಿದ ಶ್ರೇಯ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಗೆ ಸಲ್ಲುತ್ತದೆ.ಈ ಮೂಲಕ ಕರ್ನಾಟಕ ರಾಜ್ಯದ ಮಹಿಳೆಯರು ಸುರಕ್ಷತೆಯಿಂದ ಇರಬಹುದಾದಂತಹ ವಾತಾವರಣ ಇದುವರೆವಿಗೂ ನಿರ್ಮಾಣಗೊಂಡಿತ್ತು.

ಆದರೆ ಇದೀಗ ರಾಜ್ಯ ಸರ್ಕಾರದ ಪ್ರಭಾವಿ ಮಂತ್ರಿಯಾಗಿದ್ದ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣದ ನಂತರ ಈ ಸಲ ಭಾವನೆ ಮಹಿಳೆಯರಲ್ಲಿ ಇಲ್ಲದಾಗಿರುವುದು ಅತ್ಯಂತ ಆತಂಕಕಾರಿ ಸಂಗತಿ. ನಿರ್ಭಯಾ ಕಾನೂನಿನ ಅನ್ವಯ ಸಂತ್ರಸ್ತೆಯ ಯಾವುದೇ ತರನಾದ ಗುರುತನ್ನು ಬಹಿರಂಗಗೊಳಿಸುವಂತಿಲ್ಲ ಆದರೆ ರಾಜ್ಯ ಸರ್ಕಾರವೇ ಮುಂದೆ ನಿಂತು ಈ ಕೆಲಸ ಮಾಡಿದೆ. ಅಲ್ಲದೇ ಸಂತ್ರಸ್ತೆಯ ವಿರುದ್ದವೇ ತನಿಖೆ ನಡೆಸುತ್ತಿರುವುದು ಅತ್ಯಂತ ಶೋಚನೀಯ ಸಂಗತಿ ಎಂದು ನುಡಿದರು.

ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಮಾತನಾಡಿ,
ಸಿಡಿಯ ಅಸಲಿ ಸತ್ಯವನ್ನ ಪರಿಶೀಲಿಸಿ ಪ್ರಮಾಣೀಕರಿಸಬಹುದಾದ ಅಧಿಕಾರವನ್ನು ಹೊಂದಿರುವುದು ಕೇವಲ ನ್ಯಾಯಾಲಯಗಳು ಮಾತ್ರ. ಆದರೆ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸದೆ ನ್ಯಾಯಾಲಯದ ಕಣ್ಣಿಗೂ ಮಣ್ಣೆರಚಲಾಗುತ್ತಿದೆ. ಆರೋಪಿ ಶಾಸಕ ರಮೇಶ್ ಜಾರಕಿಹೊಳಿ ಅವರ ಮೂಗಿನ ನೇರಕ್ಕೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಗೆ ಬೇಕಾದಂತೆ ವಿಚಾರಣೆ ನಡೆಸುತ್ತಿರುವ ಸರ್ಕಾರದ ಕೃತ್ಯ ಅತ್ಯಂತ ಹೇಯವಾದ ಕೆಲಸ. ಈಗಾಗಲೇ ಅತ್ಯಂತ ಪ್ರಮುಖ ಸಾಕ್ಷ್ಯಗಳು ನಾಶವಾಗಿರುವ ಸಾಧ್ಯತೆ ಇದ್ದು, ರಮೇಶ್ ಪರವಾಗಿ ಸಂದರ್ಭಗಳನ್ನು ಸೃಷ್ಟಿಸಲಾಗುತ್ತಿದೆ.

ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ಆಗಬೇಕೆಂದರೆ ಈ ಕೂಡಲೇ ಹೈಕೋರ್ಟಿನ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ಸದಂ, ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights