ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್?; ಆರೋಗ್ಯ ಸಚಿವ ಸುಧಾಕರ್‌ ಸ್ಪಷ್ಟನೆ!

ದೇಶದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿದೆ. ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಸೆಮಿ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸೆಮಿ ಲಾಕ್‌ಡೌನ್‌ ಅಥವಾ ಲಾಕ್‌ಡೌನ್‌ ಜಾರಿಯಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಲಾಕ್‌ಡೌನ್‌ ಗೊಂದಲಗಳಿಗೆ ಆರೋಗ್ಯ ಸಚಿವ ಸುಧಾಕರ್‌ ತೆರೆ ಎಳೆದಿದ್ದು, ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್‌ಡೌನ್‌ ಜಾರಿ ಮಾಡುವ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ 10 ದಿನಗಳಿಂದ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಶನಿವಾರ ಒಂದೇ ದಿನ ದೇಶದಲ್ಲಿ 43,000 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಹಲವು ಭಾಗಗಳಲ್ಲಿ ಮತ್ತೆ ಕೊರೊನಾ ಹಾಗೂ ಲಾಕ್‌ಡೌನ್‌ ಭೀತಿ ಶುರುವಾಗಿದೆ. ಮತ್ತೆ ಹೆಚ್ಚಾಗುತ್ತಿರುವ ಕೊರೊನಾವನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ, ನಿಯಂತ್ರಣ ಕಷ್ಟ ಎಂದು ತಾಂತ್ರಿಕ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ತಜ್ಞರ ವರದಿಯ ಆಧಾರದ ಮೇಲೆ, ರಾಜ್ಯದಲ್ಲಿ ಮತ್ತೆ ಸೆಮಿ ಲಾಕ್ ಡೌನ್, ಲಾಕ್ ಡೌನ್ ಜಾರಿಯಾಗಲಿದೆ ಎನ್ನುವ ಚರ್ಚೆ ಆರಂಭವಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ರಾಜ್ಯ ರಾಜಧಾನಿಯಲ್ಲಿ ಕೊರೊನಾ ಎರಡನೇ ಅಲೆ ಆರಂಭಗೊಂಡಿದೆ. ಇಂತಹ ಕೊರೋನಾ ನಿಯಂತ್ರಣವನ್ನು ಕಠಿಣ ಕಾನೂನಿನ ಮೂಲಕ ನಿಯಂತ್ರಣಕ್ಕೆ ತರಲಾಗುತ್ತದೆ. ಆದರೆ, ಲಾಕ್‌ಡೌನ್‌ ಅಥವಾ ಸೆಮಿ ಲಾಕ್‌ಡೌನ್‌ ಜಾರಿ ಮಾಡುವ ಯಾವುದೇ ಚಿಂತನೆ ಇಲ್ಲ ಎಂದು ಹೇಳಿದ್ದಾರೆ.

ಲಾಕ್‌ಡೌನ್‌  ಬದಲಾಗಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಗುತ್ತಿದೆ. ಸಭೆ, ಸಮಾರಂಭಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರ ಕಾಪಾಡದೇ ಕಾರ್ಯಕ್ರಮಗಳನ್ನು ಆಯೋಜಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಮಾಸ್ಕ್ ಹಾಕದಿದ್ದರೇ 250 ದಂಡ ವಿಧಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಒಂದೇ ದಿನ 43,000ಕ್ಕೂ ಹೆಚ್ಚು ಕೊರೊನಾ ಕೇಸ್ : ಹೆಚ್ಚಿದ ಆತಂಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights