ರೈತ ಹೋರಾಟದಲ್ಲಿ ಕಿಸಾನ್‌ ಪ್ರೀಮಿಯರ್‌ ಲೀಗ್‌; ಯುವಜನರ ನಡುವೆ ಶೂಟಿಂಗ್‌ ಬಾಲ್‌ ಸ್ಪರ್ಧೆ!

ದೆಹಲಿ ಗಡಿಯಲ್ಲಿ ರೈತ ಹೋರಾಟಕ್ಕೆ ನಾಲ್ಕು ತಿಂಗಳು ಕಳೆದಿವೆ. ಬೇಸಿಗೆಯ ಬೇಗೆಯಿಂದ ರಕ್ಷಿಸಿಕೊಳ್ಳಲು ರೈತರು ಮನೆಗಳನ್ನೇ ಕಟ್ಟಿದ್ದಾರೆ. ಪ್ರತಿಭಟನೆಯಲ್ಲಿ ಉತ್ಸಾಹವನ್ನು ತುಂಬಲು ಹಲವು ಕಾರ್ಯಕ್ರಮಗಳನ್ನು ರೈತರು ಮಾಡುತ್ತಿದ್ದಾರೆ. ಇದೀಗ ಯುವಜನರು ಬೇಸರವನ್ನು ಕಳೆಯಲು ಶೂಟಿಂಗ್‌ ಬಾಲ್‌ ಪಂದ್ಯವನ್ನು ನಡೆಸುತ್ತಿದ್ದಾರೆ.

ಏಪ್ರಿಲ್ 2 ಮತ್ತು 3 ರಂದು ಸಿಂಘು ಗಡಿಯಲ್ಲಿ ಕಿಸಾನ್ ಪ್ರೀಮಿಯರ್‌ ಲೀಗ್ ಆಯೋಜನೆಗೊಂಡಿದೆ. ಅಮೆರಿಕನ್ ಸಿಖ್ ಸಂಘಟನೆ ನ್ಯಾಷನಲ್ ಶೂಟಿಂಗ್ ಬಾಲ್ ಚಾಂಪಿಯನ್‌ಶಿಪ್ ಆಯೋಜನೆ ಮಾಡಿದೆ. ಪ್ರತಿಭಟನಾ ಸ್ಥಳ ಸಿಂಘು ಗಡಿಯ ಪಾರ್ಕರ್‌ ಮಾಲ್ ಬಳಿ ಪಂದ್ಯಗಳು ನಡೆಯಲಿವೆ.

ಈ ಕುರಿತು ದೆಹಲಿಯ ಗಡಿಗಳಲ್ಲಿ ಕಳೆದ ನಾಲ್ಕು ತಿಂಗಳಿನಿಂದ ರೈತರ ಪ್ರತಿಭಟನೆಯ ಇಂಚಿಂಚು ಮಾಹಿತಿ ನೀಡುತ್ತಿರುವ ಸಂದೀಪ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಕಿಸಾನ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಬಹುಮಾನ ಒಂದು ಲಕ್ಷ ರೂಪಾಯಿ ಮತ್ತು ಟ್ರೋಫಿ, ಎರಡನೇ ಬಹುಮಾನ 70,000 ರೂಪಾಯಿ ಜೊತೆಗೆ ಟ್ರೋಪಿ ಮತ್ತು ಮೂರನೇ, ನಾಲ್ಕನೇ ಬಹುಮಾನವಾಗಿ ಟ್ರೋಪಿ ಜೊತೆಗೆ 21,000 ರೂಪಾಯಿಗಳನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಬೇಸಿಗೆ ಕಾವು; ದೆಹಲಿ ಗಡಿಯಲ್ಲಿ ಇಟ್ಟಿಗೆ ಮನೆಗಳನ್ನು ನಿರ್ಮಿಸುತ್ತಿದ್ದಾರೆ ರೈತರು!

ಎಲ್ಲಾ ಗಡಿಗಳಲ್ಲಿ ಜಿಮ್, ಕ್ರೀಡಾ ಸೌಲಭ್ಯಗಳಿರುವುದು ತಿಳಿದಿರುವ ವಿಷಯವೆ. ಸಂಜೆಯ ವೇಳೆ ಗಡಿಗಳಲ್ಲಿ ಯುವಜನತೆ ಒಂದೆಡೆ ಸೇರಿ ಆಟಗಳನ್ನು ಆಡುತ್ತಾರೆ. ಕಬ್ಬಡ್ಡಿ, ಫುಟ್‌ಬಾಲ್, ವಾಲಿಬಾಲ್ ಸೇರಿದಂತೆ ಹಲವು ಆಟಗಳಲ್ಲಿ ತೊಡಗಿಸಿಕೊಳ್ಳತ್ತಾರೆ. ಇವರುಗಳನ್ನು ಪ್ರೋತ್ಸಾಹಿಸಲು ಈ ಪಂದ್ಯಾವಳಿ ಆಯೋಜಿಸಲಾಗಿದೆ ಎನ್ನಲಾಗಿದೆ.

ಈ ಹಿಂದೆ ಸಿಂಘು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಉತ್ತೇಜನ ನೀಡುವ ಸಲುವಾಗಿ, ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ದೆಹಲಿಯ 12 ಬಾಲಕಿಯರ ತಂಡಗಳು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ನೂರಾರು ಕಿಲೋಮೀಟರ್ ದೂರಗಳಿಂದ ಬಂದು ಸಿಂಗು ಗಡಿಯಲ್ಲಿ ಕಬ್ಬಡಿ ಆಡಿ ರೈತರಿಗೆ ಬೆಂಬಲ ಸೂಚಿಸಿದ್ದರು.

ಒಟ್ಟಾರೆ, ಗಡಿಗಳನ್ನೇ ಮನೆಗಳನ್ನಾಗಿಸಿಕೊಂಡಿರುವ ರೈತರು ಹಲವು ಕಾರ್ಯಕ್ರಮಗಳ ಮೂಲಕ ತಮ್ಮಲ್ಲಿನ ಪ್ರತಿಭಟನಾ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಒಕ್ಕೂಟ ಸರ್ಕಾರ, ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳುವವರೆಗೂ ಗಡಿಗಳಿಂದ ವಾಪಸ್ ಆಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡುತ್ತಿದ್ದಾರೆ.

ಇದನ್ನೂ ಓದಿ: ರೈತರನ್ನು ಅಪರಾಧಿಗಳಂತೆ ನೋಡಬೇಡಿ: ಪ್ರಧಾನಿ ಮೋದಿಗೆ ಮೆಘಾಲಯ ರಾಜ್ಯಪಾಲರ ಮನವಿ!

Spread the love

Leave a Reply

Your email address will not be published. Required fields are marked *