ಸುಗ್ಗಿಯ ಕಾಲ: ಹಳ್ಳಿಗೆ ಹೊರಟ ಟ್ರಾಲಿಗಳು; ದೆಹಲಿ ಗಡಿಯಲ್ಲಿ ತಲೆ ಎತ್ತಿವೆ ಗುಡಿಸಲುಗಳು!

ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ದ ದೆಹಲಿ ಗಡಿಯಲ್ಲಿ ರೈತರ ಹೋರಾಟ 130 ದಿನಗಳನ್ನು ಪೂರೈಸಿವೆ. ಇದೀಗ ಸುಗ್ಗಿಯ ಕಾಲ ಸಮೀಸುತ್ತಿದ್ದು, ಟ್ರಾಕ್ಟರ್‌-ಟ್ರಾಲಿಗಳು ಹಳ್ಳಿಗಳಿಗೆ ಮರಳುತ್ತಿವೆ. ಹೀಗಾಗಿ ರೈತರು ದೆಹಲಿ ಗಡಿಯಲ್ಲಿ ಗುಡಿಸಲುಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಟ್ರಾಲಿಗಳು ನಿಂತಿದ್ದ ಜಾಗದಲ್ಲಿ ಇದೀಗ ಗುಡಿಸಲುಗಳು ತಲೆ ಎತ್ತುತ್ತಿವೆ.

ತಣ್ಣಗೆ ಕೊರೆಯುವ ದೆಹಲಿಯ ಚಳಿಯಿಂದ ರಕ್ಷಣೆ ಪಡೆಯಲು ರೈತರು ಟ್ಯ್ರಾಲಿಗಳನ್ನು ಆಶ್ರಯಿಸಿದ್ದರು. ವರ್ಷವಿಡೀ ಬೆಳೆ ಬೆಳೆಯುವ ಪಂಜಾಬಿನ ರೈತರಿಗೀಗ ಸುಗ್ಗಿಯ ಸಮಯ. ಬಿತ್ತನೆ ಮುಗಿಸಿ ಟ್ರ್ಯಾಲಿಗಳೊಂದಿಗೆ ಬಂದಿದ್ದ ರೈತರು ಈಗ ಸುಗ್ಗಿ ಮಾಡಲು ಕೆಲವು ಟ್ರ್ಯಾಲಿಗಳನ್ನು ಹಳ್ಳಿಗೆ ಕಳುಹಿಸುತ್ತಿದ್ದಾರೆ.

ಮನೆಗಳಾಂತಾಗಿದ್ದ ಟ್ಯ್ರಾಲಿಗಳ ಜಾಗದಲ್ಲಿ ಈಗ ರೈತರು ಬಿದಿರಿನ, ಹುಲ್ಲಿನ ಶೆಡ್‌ಗಳನ್ನು ನಿರ್ಮಿಸುತ್ತಿದ್ದಾರೆ. ಸುಡುವ ಬಿಸಿಲಿನಿಂದ ಕಾಪಾಡಲು ಈ ಶೆಡ್‌ಗಳು ಸಹಕಾರಿಯಾಗಿವೆ. ಈ ಬೇಸಿಗೆ ಕಾಲಕ್ಕೆ ಟ್ಯ್ರಾಲಿಗಳಿಗಿಂತ ಈ ಶೆಡ್‌ಗಳೇ ಹೆಚ್ಚು ತಂಪಾಗಿರುತ್ತವೆ. ಪ್ರಸ್ತುತ ನಿರ್ಮಿಸಿರುವ ಶೆಡ್‌ಗಳಲ್ಲಿ ಕೂಲರ್‌ಗಳನ್ನು ಬಳಸಲಾಗುಗವುದು ಎಂದು ರೈತರು ತಿಳಿಸಿದ್ದಾರೆ.

ಪಂಜಾಬ್‌ನ ರೂಪರ್‌ ಜಿಲ್ಲೆಯ ಬೆಹ್ರಾಂಪುರ ಗ್ರಾಮದ ರೈತರು ಸಿಂಘು ಗಡಿಯಲ್ಲಿ ಎರಡು ವಾರದ ಹಿಂದೆಯೇ ಒಣಹುಲ್ಲಿನ ಚಾವಣಿ, ಹೂಕುಂಡಗಳು, ಕರ್ಟನ್‌ಗಳು ಹಾಗೂ ಭಗತ್‌ಸಿಂಗ್‌ನ ಫೋಟೊ ಇರುವ ಗುಡಿಸಲನ್ನು ನಿರ್ಮಿಸಿದ್ದಾರೆ. ಈ ಕುರಿತು ಮಾತನಾಡಿದ ಅದೇ ಗ್ರಾಮದ ಗುರ್ಮೀತ್‌ ಸಿಂಗ್‌, ‘ನಾವು ತಂದಿದ್ದರಲ್ಲಿ ಎರಡು ಟ್ರ್ಯಾಲಿಗಳನ್ನು ಸುಗ್ಗಿಗಾಗಿ ಹಳ್ಳಿಗೆ ಕಳಿಸಿದ್ದೇವೆ. ಈಗ ನಿರ್ಮಿಸಿರುವ ಗುಡಿಸಲು ತಣ್ಣಗಿದ್ದು, ಕಬ್ಬಿಣ ಮತ್ತು ಟಾರ್ಪಲಿನ್‌ನಿಂದ ಉಂಟಾಗುತ್ತಿದ್ದ ಹಬೆ ಈಗಿಲ್ಲ’ ಎಂದರು.

‘ಸುಗ್ಗಿಯ ಕಾರಣದಿಂದ ಗಡಿಗಳಲ್ಲಿರುವವರ ಸಂಖ್ಯೆ ಕಡಿಮೆಯಿದ್ದು, ಸುಗ್ಗಿಯ ನಂತರ ರೈತರೆಲ್ಲರೂ ಟ್ಯ್ರಾಲಿಗಳೊಂದಿಗೆ ಮತ್ತೆ ಸೇರಲಿದ್ದಾರೆ. ಪ್ರಸ್ತುತ ಪಂಜಾಬಿನ ಪ್ರತಿ ಗ್ರಾಮದಿಂದ 10 ಜನ ರೈತರು ಪ್ರತಿಭಟನೆಯಲ್ಲಿದ್ದಾರೆ ’ 

– ರಾಜ್ವಿಂದರ್‌ ಸಿಂಗ್‌ , ಜತನ ಗ್ರಾಮ,ಲೂಧಿಯಾನ ಜಿಲ್ಲೆ, ಪಂಜಾಬ್

‘ಪ್ರತಿಭಟನೆ ಆರಂಭದಿಂದಲೂ ಹಳ್ಳಿಗೆ 20-30 ಜನ ರೈತರು ಈ ಹೋರಾಟಕ್ಕೆ ಬಂದು ಒಂದು ವಾರದಿಂದ ಹತ್ತು ದಿನಗಳವರೆಗೆ ಇಲ್ಲಿಗೆ ಬಂದಿರುತ್ತಿದ್ದರು. ನಾವು ಇದೇ ನೀತಿಯನ್ನು ಅನುಸರಿಸಿಕೊಂಡು ಬಂದಿದ್ದೇವೆ. ಈಗ ಸುಗ್ಗಿಯ ಕಾರಣದಿಂದ ಜನರ ಸಂಖ್ಯೆ ಕಡಿಮೆ ಇದೆ ಅಷ್ಟೆ. ಕೃಷಿ ಕಾಯ್ದೆಗಳು ರದ್ದಾಗುವವರೆಗೂ ಈ ಹೋರಾಟ ನಿಲ್ಲಿಸುವ ಮಾತೇ ಇಲ್ಲ’ ಎಂದರು.

ರಾಜ್ವಿಂದರ್‌ ಸೇರಿದಂತೆ ಮೂರು ಜನರು ರೈತ ಹೋರಾಟ ಶುರುವಾದಂದಿನಿಂದ ಗಡಿಗಳಲ್ಲಿಯೇ ಇದ್ದು ಹೋರಾಟದ ಆಗು-ಹೋಗುಗಳನ್ನು ನೋಡಿಕೊಳ್ಳುತ್ತಿರುವುದರಿಂದ ಅವರ ಹೊಲದ ಸುಗ್ಗಿಯನ್ನು ಗ್ರಾಮದ ರೈತರೇ ನೋಡಿಕೊಳ್ಳುವುದಾಗಿ ಗ್ರಾಮದ ಸರ್‌ಪಂಚ್‌ ತಿಳಿಸಿದ್ದಾರೆ ಎಂದರು.

ಇದನ್ನೂ ಓದಿ: ರೈತ ಹೋರಾಟಕ್ಕೆ ಬೇಸಿಗೆ ಕಾವು; ದೆಹಲಿ ಗಡಿಯಲ್ಲಿ ಇಟ್ಟಿಗೆ ಮನೆಗಳನ್ನು ನಿರ್ಮಿಸುತ್ತಿದ್ದಾರೆ ರೈತರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights