ಮದುವೆಯಾಗಿ ಕೆಲವೇ ದಿನಕ್ಕೆ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಆತ್ಮಹತ್ಯಗೆ ಯತ್ನ!
ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಲಾರ ನಗರದ ಕುರುಬರ ಪೇಟೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಸದ್ಯ ಚೈತ್ರಾ ಅವರು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮದುವೆ ವಿಚಾರವಾಗಿ ವಿವಾದದ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಹೌದು.. ಚೈತ್ರಾ ಅವರು ಮಾರ್ಚ್ 28ರಂದು ಮದುವೆಯಾಗಿದ್ದರು, ಅಂದೇ ಸಂಜೆ ಈ ಜೋಡಿ ಕೋಲಾರ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಏನಾಯ್ತು? ಇಲ್ಲಿದೆ ಮಾಹಿತಿ..
ನಾಗಾರ್ಜುನ್ ಜೊತೆ ಚೈತ್ರಾ ಮದುವೆ
ಮಾರ್ಚ್ 28ರಂದು ಬೆಂಗಳೂರಿನ ಬ್ಯಾಟರಾಯನಪುರ ಗಣಪತಿ ದೇಗುಲದಲ್ಲಿ ಚೈತ್ರಾ ಕೋಟೂರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ಭಾಗವಹಿಸಿದ್ದ ಚೈತ್ರಾ ಕೋಟೂರ್ ಭಾಗವಹಿಸಿ, ಉಳಿದ ಸ್ಪರ್ಧಿಗಳಿಗೆ ಉತ್ತಮ ಸ್ಪರ್ಧೆ ನೀಡಿದ್ದರು. ಮಂಡ್ಯ ಮೂಲದ ನಾಗಾರ್ಜುನ್ ಜೊತೆಗೆ ಚೈತ್ರಾ ಮದುವೆ ನಡೆದಿತ್ತು.
ನಡೆದ ಘಟನೆ ಏನು?
ನಾಗಾರ್ಜುನ್‌ರಿಗೆ ಚೈತ್ರಾ ಜೊತೆ ಮದುವೆಯಾಗುವುದು ಇಷ್ಟವಿರಲಿಲ್ಲ. ಸಂಘಟನೆಗಳ ಜೊತೆಗೂಡಿ ಬಲವಂತವಾಗಿ ನಾಗಾರ್ಜುನ್‌ರನ್ನು ಕೂಡಿ ಹಾಕಿ ದೇಗುಲದಲ್ಲಿ ಮದುವೆ ನಡೆದಿದೆ. ಸಂಘಟನೆಗಳ ಬೆದರಿಕೆಗೆ ಬಗ್ಗಿದ ನಾಗಾರ್ಜುನ್ ಬಲವಂತವಾಗಿ ಚೈತ್ರಾರಿಗೆ ತಾಳಿ ಕಟ್ಟಿದ್ದರು. ನಾಗಾರ್ಜುನ್ ಸೇರಿ ಮನೆಯವರಿಗೆ ಚೈತ್ರಾ ಜೊತೆ ಮದುವೆ ಇಷ್ಟವಿರಲಿಲ್ಲ ಎನ್ನಲಾಗಿದೆ.
ಚೈತ್ರಾ ಹಾಗೂ ನಾಗಾರ್ಜುನ್ ಹೇಳಿದ್ದೇನು?
ನಾಗಾರ್ಜುನ್ ಕುಟುಂಬದವರು ಕೋಲಾರದ ಕುರುಬರಪೇಟೆಯ ಚೈತ್ರಾ ಮನೆಗೆ ಬಂದು ತಗಾದೆ ತೆಗೆದಿದ್ದಾರೆ. ನಾಗಾರ್ಜುನ್ ಕುಟುಂಬಸ್ಥರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚೈತ್ರಾ ಕೋಟೂರ್, ನಾಗಾರ್ಜುನ್ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಚೈತ್ರಾ ಜೊತೆ ಮದುವೆ ಇಷ್ಟವಿಲ್ಲ ಅಂತ ನಾಗಾರ್ಜುನ್ ಪಟ್ಟು ಹಿಡಿದಿದ್ದಾರೆ, ನನಗೆ ನಾಗಾರ್ಜುನ್ ಇಷ್ಟ, ಅವನ ಜೊತೆ ಹೋಗುವೆ ಅಂತ ಚೈತ್ರಾ ಬಿಗಿಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಆದರೆ ಈ ಬಗ್ಗೆ ಚೈತ್ರಾ ಕೋಟೂರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿಲ್ಲ.

