ತಾಯಿಗೆ ಆಕ್ಸಿಜನ್‌ ಕೇಳಿದ್ದಕ್ಕೆ ಏಟು ತಿನ್ನುತ್ತಿ ಎಂದು ಗದರಿದ ಕೇಂದ್ರ ಸಚಿವ; ವಿಡಿಯೋ ವೈರಲ್‌

ತಮ್ಮ ಅನಾರೋಗ್ಯ ಪೀಡಿತ ತಾಯಿಗೆ ಆಮ್ಲಜನಕ ಸಿಲಿಂಡರ್ ಅಗತ್ಯವಿದೆ. ಆಕೆಗೆ ಆಕ್ಸಿಜನ್‌ ಕೊಡಿ ಎಂದು ಗಟ್ಟಿಯಾಗಿ ಕೇಳಿದ ವ್ಯಕ್ತಿಯೊಬ್ಬರಿಗೆ “ನಿನಗೆ ಏಟುಗಳು ಬೀಳುತ್ತವೆ’ ಎಂದು ಕೇಂದ್ರ ಸಂಸ್ಕೃತಿ ಸಚಿವ ಗದರಿರುವ ಘಟನೆ ಮಧ್ಯಪ್ರದೇಶದ ದಾಮೋಹ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿದ್ದು, ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಆಸ್ಪತ್ರೆಯಿಂದ ಆಮ್ಲಜನಕ ಸಿಲಿಂಡರ್‌ಗಳನ್ನು ಲೂಟಿ ಮಾಡಿದ ಘಟನೆ ನಡೆದ ಎರಡು ದಿನಗಳ ನಂತರ ದಮೋಹ್‌ನ ಸಂಸದರಾಗಿರುವ ಪ್ರಹ್ಲಾದ್‌‌ ಪಟೇಲ್ ಅಲ್ಲಿನ ಜಿಲ್ಲಾ ಆಸ್ಪತ್ರೆಯನ್ನು ಪರಿಶೀಲಿಸುತ್ತಿದ್ದರು. ಈ ವೇಳೆ, “ಕೊರೊನಾ ರೋಗಿಯಾಗಿರುವ ತನ್ನ ತಾಯಿಗೆ ಆಮ್ಲಜನಕ ಸಿಲಿಂಡರ್ ಅಗತ್ಯವಿದೆ. ಆಕೆಗೆ 36 ಗಂಟೆಗಳ ನಂತರ ಆಕ್ಸಿಜನ್‌ ನೀಡುವುದಾಗಿ ಹೇಳಲಾಗಿತ್ತು, ಆದರೆ ಇನ್ನೂ ಒದಗಿಸಲಾಗಿಲ್ಲ” ಎಂದು ಕೊರೊನಾ ರೋಗಿಯ ಮಗ ಸಚಿವ ಪ್ರಹ್ಲಾದ್‌ ಪಟೇಲ್ ಎದುರು ಮಾತನಾಡಿದ್ದಾರೆ. ಆತನ ಮನವಿಗೆ ಸ್ಪಂದಿಸಬೇಕಾದ ಸಚಿವ, ನನಗೆ ಬೆರಳು ಮಾಡಿ ಮಾತನಾಡುತ್ತೀಯಾ, ಬೆರಳನ್ನು ಕೆಳಗಿಳಿಸು, ಈ ರೀತಿ ಮಾತನಾಡಿದರೆ ಎರಡೇಟು ತಿನ್ನುತ್ತಿ. (ಐಸಾ ಬೊಲೆಗಾ ತು ದೊ ಖಾಯೇಗಾ)” ಎಂದು ಹೇಳಿದ್ದಾರೆ.

ಆದರೆ ಸಂತ್ರಸ್ತ ವ್ಯಕ್ತಿಯೂ ಅಷ್ಟಕ್ಕೆ ನಿಲ್ಲಿಸದೆ, ತಾನು ಏಟು ತಿನ್ನಲು ಸಿದ್ದನಾಗಿರುವುದಾಗಿ ಹೇಳಿದ್ದು, ತನ್ನ ತಾಯಿ ಆಗಲೇ ಹೊಡೆತಗಳನ್ನು ತಿನ್ನುತ್ತಿದ್ದಾರೆ ಎಂದು ಉತ್ತರಿಸಿದ್ದಾರೆ.

ನಂತರ ಘಟನೆಯನ್ನು ವಿಡಿಯೊ ಮಾಡಲಾಗುತ್ತಿದೆ ಎಂದು ಅರಿತುಕೊಂಡ ಪ್ರಹ್ಲಾದ್‌‌ ಪಟೇಲ್ ಆ ವ್ಯಕ್ತಿಗೆ, “ಶಾಂತನಾಗು, ನಿನಗೆ ಆಮ್ಲಜನಕ ನೀಡಲು ನಿರಾಕರಿಸುತ್ತಿದ್ದಾರೆಯೆ” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಸಾಹಯಕತೆಯಿಂದ ಉತ್ತರಿಸಿದ ಸಂತ್ರಸ್ತ ವ್ಯಕ್ತಿಯು, “ಹೌದು ನನಗೆ ಆಮ್ಲಜನಕ ನಿರಾಕರಿಸಲಾಗಿದೆ” ಎಂದು ಹೇಳಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಮುಖ್ಯ ವಕ್ತಾರ ಕೆ.ಕೆ. ಮಿಶ್ರಾ, “ದಾಮೋಹ್‌‌ನಲ್ಲಿ ಮತದಾನಕ್ಕೂ ಮೊದಲು ಎಲ್ಲಾ ಸೋಂಕಿತರನ್ನು ಮಂತ್ರಿಗಳ ಕಾರಿನಲ್ಲಿ ಭೋಪಾಲ್‌ ಮತ್ತು ಜಬಲ್‌ಪುರ ಆಸ್ಪತ್ರೆಗಳಲ್ಲಿ ಭರ್ತಿ ಮಾಡುತ್ತಿದ್ದರು. ಈಗ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿಯನ್ನು ಉಳಿಸಲು ಆಮ್ಲಜನಕಕ್ಕಾಗಿ ಮನವಿ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರಿಗೆ ಕಪಾಳ ಮೋಕ್ಷ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ!. ಅವರ ಕೆಲಸ ಮುಗಿದಿದೆ” ಎಂದು ಹೇಳಿದ್ದಾರೆ.

ಮಂಗಳವಾರ ರಾತ್ರಿ, ದಾಮೋಹ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಕುಟುಂಬ ಸದಸ್ಯರು ಬಲವಂತವಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಕಸಿದುಕೊಂಡ ಘಟನೆ ನಡೆದಿತ್ತು. ನಂತರ ಪರಿಸ್ಥಿತಿಯನ್ನು ಹತೋಟಿಗೆ ತರಲು ಆಸ್ಪತ್ರೆ ಆಡಳಿತ ಮಂಡಳಿಯು ಪೊಲೀಸರನ್ನು ಕರೆಯಬೇಕಾಗಿ ಬಂದಿತ್ತು.

ಇದನ್ನೂ ಓದಿ: CPI-M ನಾಯಕ ಯೆಚೂರಿ ಮಗನ ಸಾವನ್ನು ವಿಕೃತವಾಗಿ ಸಂಭ್ರಮಿಸಿದ ಬಿಹಾರ BJP ಉಪಾಧ್ಯಕ್ಷ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights