ದೆಹಲಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆ – ಅರವಿಂದ್ ಕೇಜ್ರಿವಾಲ್ ಘೋಷಣೆ
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಾಗ ದೆಹಲಿ 18 ಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
“ದೆಹಲಿ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆಗಳನ್ನು ನೀಡಲು ನಿರ್ಧರಿಸಿದೆ. ಇಂದು ನಾವು 1.34 ಕೋಟಿ ಲಸಿಕೆಗಳನ್ನು ಖರೀದಿಸಲು ಅನುಮೋದನೆ ನೀಡಿದ್ದೇವೆ. ಶೀಘ್ರದಲ್ಲೇ ಅದನ್ನು ಖರೀದಿಸಲಾಗುವುದು ಮತ್ತು ಜನರಿಗೆ ಬೇಗನೆ ನೀಡಲಾಗುತ್ತದೆ” ಎಂದು ಕೇಜ್ರಿವಾಲ್ ಘೋಷಿಸಿದ್ದಾರೆ.
ಇದು ದೆಹಲಿ ಸರ್ಕಾರ ನಡೆಸುವ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಖಾಸಗಿ ಆಸ್ಪತ್ರೆಗಳಿಗೆ ಹೋಗುವವರು ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ಲಸಿಕೆ ತಯಾರಕರು ರಾಜ್ಯ ಸರ್ಕಾರಗಳಿಗೆ ಬೆಲೆಗಳನ್ನು ತಗ್ಗಿಸುವಂತೆ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
“ಲಸಿಕೆ ತಯಾರಕರು ಡೋಸ್‌ಗೆ 150 ರೂ. ಬೆಲೆಯಂತೆ ನೀಡಬೇಕು ಎಂದು ನಾನು ಮನವಿ ಮಾಡುತ್ತೇನೆ. ಲಾಭ ಗಳಿಸಲು ನಿಮಗೆ ಸಂಪೂರ್ಣ ಜೀವಿತಾವಧಿ ಇದೆ. ಸಾಂಕ್ರಾಮಿಕ ರೋಗ ಉಂಟಾದಾಗ ಅದನ್ನು ಮಾಡಲು ಇದು ಸಮಯವಲ್ಲ. ನಾನು ಕೇಂದ್ರ ಸರ್ಕಾರವನ್ನು ಲಸಿಕೆಗಳ ಬೆಲೆಗಳನ್ನು ಕಡಿಮೆ ಮಾಡಿ ಎಂದು ಮನವಿ ಮಾಡುತ್ತೇನೆ “ಎಂದು ಅವರು ಹೇಳಿದರು.
“ರಾಜ್ಯ ಸರ್ಕಾರಗಳಿಗೆ ಡೋಸೇಜ್‌ಗೆ 400 ರೂ, ಎರಡನೇ ಡೋಸ್‌ಗೆ 600 ದರವನ್ನು ನೀಡುವುದಾಗಿ ಹೇಳುತ್ತಾರೆ. ಇವೆರಡೂ ಒಂದು ಡೋಸ್‌ಗೆ 150 ದರದಲ್ಲಿ ನೀಡುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು”ಎಂದು ಮುಖ್ಯಮಂತ್ರಿ ಹೇಳಿದರು.
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಅನ್ನು ರಾಜ್ಯ ಸರ್ಕಾರಗಳಿಗೆ ಡೋಸ್‌ಗೆ 400 ಮತ್ತು 600 ರೂ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುವುದಾಗಿ ಹೇಳಿದೆ. ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ರಾಜ್ಯಗಳಿಗೆ 600 ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ವೆಚ್ಚವಾಗಲಿದೆ ಎಂದು ಕಂಪನಿ ನಿನ್ನೆ ತಿಳಿಸಿದೆ.
ಹೀಗಾಗಿ ಉಚಿತವಾಗಿ ರಾಜ್ಯಗಳಿಗೆ ಲಸಿಕೆಗಳನ್ನು ನೀಡಲು ಕೇಂದ್ರವನ್ನು ಒತ್ತಾಯಿಸಲಾಗುತ್ತಿದೆ.