16 ಸಂಘಟನೆಗಳನ್ನು ನಿಷೇಧಿಸಿದ ತೆಲಂಗಾಣ ಸರ್ಕಾರ; ಪ್ರಜಾಪ್ರಭುತ್ವದ ದಮನ ಎಂದ PFI

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾವೋವಾದಿ (ಸಿಪಿಐ-ಮಾವೋವಾದಿ)ಯೊಂದಿಗೆ ಸಂಬಂಧ ಹೊಂದಿರುವ 16 ಸಂಘಟನೆಗಳು ಕಾನೂನುಬಾಹಿರ ಸಂಘಟನೆಗಳು ಎಂದು ಹೇಳಿರುವ ತೆಲಂಗಾಣ ಸರ್ಕಾರ, ಈ 16 ಸಂಘಟನೆಗಳನ್ನು ಮಾರ್ಚ್‌ 30 ರಿಂದ ಒಂದು ವರ್ಷದ ಅವಧಿಗೆ ನಿಷೇಧಿಸಲಾಗಿದೆ ಎಂದು ಘೋಷಿಸಿದೆ.

ಸರ್ಕಾರದ ಆದೇಶದ ಪ್ರಕಾರ, ಕಾನೂನುಬಾಹಿರವೆಂದು ಘೋಷಿಸಲಾದ ಮುಂಚೂಣಿ ಸಂಘಟನೆಗಳು: ತೆಲಂಗಾಣ ಪ್ರಜಾ ಫ್ರಂಟ್ (ಟಿಪಿಡಿ), ತೆಲಂಗಾಣ ಅಸಂಘಟಿತ ಕಾರ್ಮಿಕ ಸಮಾಕ್ಯ (ಟಿಎಕೆಎಸ್), ತೆಲಂಗಾಣ ವಿದ್ಯಾರ್ಥಿ ವೇದಿಕಾ (ಟಿವಿವಿ), ಡೆಮಾಕ್ರಟಿಕ್‌ ಸ್ಟುಡೆಂಟ್‌ ಯೂನಿಯನ್‌ (ಡಿಎಸ್‌ಯು), ತೆಲಂಗಾಣ ವಿದ್ಯಾರ್ಥಿ ಸಂಘ (ಟಿವಿಎಸ್), ಆದಿವಾಸಿ ಸ್ಟೂಡೆಂಟ್ಸ್ ಯೂನಿಯನ್ (ಎಎಸ್‌ಯು), ರಾಜಕೀಯ ಕೈದಿಗಳ ಬಿಡುಗಡೆ ಸಮಿತಿ (ಸಿಆರ್‌ಪಿಪಿ), ತೆಲಂಗಾಣ ರೈತಂಗ ಸಮಿತಿ (ಟಿಆರ್‌ಎಸ್), ತುಡುಮ್ ಡೆಬ್ಬಾ (ಟಿಡಿ), ಪ್ರಜಾ ಕಲಾ ಮಂಡಳಿ (ಪಿಕೆಎಂ), ತೆಲಂಗಾಣ ಡೆಮಾಕ್ರಟಿಕ್ ಫ್ರಂಟ್ (ಟಿಡಿಎಫ್), ಹಿಂದೂ ಫ್ಯಾಸಿಸಂ ಆಕ್ರಮಣ ವಿರೋಧಿ ವೇದಿಕೆ (ಎಫ್‌ಎಹೆಚ್‌ಎಫ್‌ಒ), ಸಿವಿಲ್ ಲಿಬರ್ಟೀಸ್ ಕಮಿಟಿ (ಸಿಎಲ್‌ಸಿ), ಅಮರುಲಾ ಬಂಧು ಮಿಥ್ರುಲಾ ಸಂಘ (ಎಬಿಎಂಎಸ್), ಚೈತನ್ಯ ಮಹಿಳಾ ಸಂಘ (ಸಿಎಮ್ಎಸ್) ಮತ್ತು ಕ್ರಾಂತಿಕಾರಿ ಬರಹಗಾರರ ಸಂಘ (ಆರ್‌ಡಬ್ಲ್ಯೂಎ).

ಈ ಸಂಘಟನೆಗಳು ಯುಎಪಿಎ ಕಾಯ್ದೆ, ಕೃಷಿ ಕಾನೂನುಗಳು, ಸಿಎಎ / ಎನ್‌ಆರ್‌ಸಿ ಮುಂತಾದ ವಿವಿಧ ವಿಷಯಗಳ ವಿರುದ್ದ ಪ್ರಚೋದನಾಕಾರಿ ಹೇಳಿಕೆಗಳು, ಸಭೆಗಳು ಮತ್ತು ರ್ಯಾಲಿಗಳನ್ನು ನಡೆಸುತ್ತಿದ್ದು, ಈ ಮೂಲಕ ಜನರನ್ನು ತಮ್ಮತ್ತ ಸೆಳೆಯುತ್ತಿವೆ. ಅಲ್ಲದೆ, ಈ ಸಂಘಟನೆಗಳು ಸಿಪಿಐ-ಮಾವೋವಾದಿ ನಾಯಕತ್ವದ ನಿರ್ದೇಶನದಂತೆ ಕೆಲಸ ಮಾಡುತ್ತವೆ. ಈ ಸಂಘಟನೆಗಳ ಕೆಲವು ಸದಸ್ಯರು ಸರ್ಕಾರವನ್ನು “ರಾಜ್ಯದ ದಬ್ಬಾಳಿಕೆ” ಎಂದು ಕರೆಯುತ್ತಾರೆ ಮತ್ತು ಈ ಸಂಘಟನೆಗಳು ಪಿ. ವರವರ ರಾವ್, ಪ್ರೊಫೆಸರ್ ಜಿ.ಎನ್. ರೋಮಾ ವಿಲ್ಸನ್ ಮತ್ತು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ವಿವಿಧ ಸಂಘಟನೆಗಳ ಮುಖಂಡರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 16 ಸಂಘಟನೆಗಳನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿರುವುದಾಗಿ ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ.

ಸರ್ಕಾರ ಆದೇಶವನ್ನು ವಿರೋಧಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ), ಸರ್ಕಾರದ ಈ ನಡೆಯು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ರಾಜಕೀಯ ಭಿನ್ನಮತದ ವಿರುದ್ಧ ರಾಜ್ಯ ಸರ್ಕಾರ ಈ ರೀತಿಯ ಪ್ರತೀಕಾರಕ್ಕೆ ಇಳಿದಿದೆ ಎಂದು ಆರೋಪಿಸಿದೆ.

ಸಿದ್ಧಾಂತಗಳನ್ನು ಬಲಪ್ರಯೋಗದ ಮೂಲಕ ಸೋಲಿಸಲಾಗದು. ಸಮಾಜದಲ್ಲಿ ಪ್ರಜಾಸತ್ತಾತ್ಮಕವಾಗಿ ಕೆಲಸ ಮಾಡಲು ಅವಕಾಶ ನಿರಾಕರಿಸುವುದು‌ ನಮ್ಮ ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ. ಯಾವುದೇ ಕಾನೂನುಬಾಹಿರ ಕೆಲಸವನ್ನು‌ ಮಾಡಿರುವುದಕ್ಕೆ ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ವಿರುದ್ಧ ಸರಕಾರದ ಬಳಿ ಪುರಾವೆಗಳಿದ್ದರೆ ಸಂಬಂಧಿಸಿದ ಪ್ರಕರಣವನ್ನು ನ್ಯಾಯಾಲಯದ ಮುಂದೆ ತಂದು ಸಾಬೀತುಪಡಿಸಬೇಕು. ಅದನ್ನು ಬಿಟ್ಟು, ಈ ರೀತಿಯಲ್ಲಿ ದಮನ ಮಾಡುವುದು ಪ್ರಜಾಸತ್ತಾತ್ಮಕ ಸಮಾಜಕ್ಕೆ ವಿನಾಶಕಾರಿಯಾಗಿದೆ ಎಂದು ಪಿಎಫ್‌ಐ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಲಸಿಕೆ ಹಂಚಿಕೆ; ಕರ್ನಾಟಕಕ್ಕೆ 75 ಲಕ್ಷ, ಗುಜರಾತ್‌ ಸೇರಿ 04 ರಾಜ್ಯಗಳಿಗೆ ತಲಾ 01 ಕೋಟಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights