ಕುವೆಂಪು ವಿವಿ ನಿರ್ಧಾರದ ವಿರುದ್ದ ‘ಸಹ್ಯಾದ್ರಿ ಕ್ಯಾಂಪಸ್ ಉಳಿಸಿ’ ಆಂದೋಲನ; ವಿದ್ಯಾರ್ಥಿಗಳ ಹೋರಾಟಕ್ಕೆ KVS ಬೆಂಬಲ!

 ಒಂದು ದೇಶದ ಭವಿಷ್ಯವು ಆ ದೇಶದ ತರಗತಿಗಳಲ್ಲಿ ರೂಪುಗೊಳ್ಳುತ್ತದೆ ಎಂದು ಕೊಠಾರಿ ಕಮಿಷನ್‌ ಹೇಳಿತ್ತು. ಆದರೆ, ಇಂದಿನ ಸರ್ಕಾರಗಳು ಸರ್ಕಾರಿ ಶಾಲೆ-ಕಾಲೇಜುಗಳ ಸ್ವರೂಪವನ್ನೇ ನಾಶಮಾಡಲು ಮುಂದಾಗಿವೆ. ಆ ಸಾಲಿಗೆ ಇದೀಗ ಶಿವಮೊಗ್ಗದಲ್ಲಿರುವ ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜು ಸೇರ್ಪಡೆಯಾಗುತ್ತಿದೆ.

ಸಹ್ಯಾದ್ರಿ ಕಾಲೇಜಿನ ಸುಮಾರು  18.4 ಎಕರೆ ಜಾಗವನ್ನು ಖೇಲೋ ಇಂಡಿಯಾ ಮತ್ತು ಸಾಯಿ ಸಂಸ್ಥೆಯ ಕ್ರೀಡಾಹಬ್ ನಿರ್ಮಾಣಕ್ಕೆ ನೀಡಲು ಕುವೆಂಪು ವಿಶ್ವವಿದ್ಯಾನಿಲಯದ ಆಡಳಿತಾಂಗ ಮುಂದಾಗಿದೆ.

ವಿವಿ ಆಡಳಿತದ ನಿರ್ಧಾರದ ವಿರುದ್ಧ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಹೋರಾಟಕ್ಕೂ ಕರೆಕೊಟ್ಟಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ಹೋರಾಟಕ್ಕೆ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ  ಹಳೆಯ ವಿದ್ಯಾರ್ಥಿ, ಚಿಂತಕ ಕಡಿದಾಳ್‌ ಶಾಮಣ್ಣ ಅವರೂ ಬೆಂಬಲ ನೀಡಿದ್ದಾರೆ.

ಅಲ್ಲದೆ, ವಿದ್ಯಾರ್ಥಿಗಳ ಹೋರಾಟಕ್ಕೆ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಬೆಂಬಲ ನೀಡಿದೆ. ಮೂಢ ಜನರೇ ನೀವು ಏನನ್ನಾದರೂ ಕಟ್ಟಿ, ಮೊದಲು ಶಾಲೆ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿ ಎಂದು ಅಂಬೇಡ್ಕರ್‌ ಹೇಳಿದ್ದರು. ಆದರೆ, ಸರ್ಕಾರ ಶಾಲಾ-ಕಾಲೇಜುಗಳ ಭೂಮಿಯನ್ನೇ ಮತ್ತೊಂದು ಯೋಜನೆಗಳಿಗಾಗಿ ಬಳಸಿಕೊಳ್ಳುತ್ತಿರುವುದು ಅಕ್ಷಮ್ಯ. ಜಿಲ್ಲಾಡಳಿತ ಕಾಲೇಜು ಆವರಣದಲ್ಲಿ ಕ್ರೀಡಾಹಬ್ ಕಟ್ಟುವ ಯೋಜನೆಯಲ್ಲಿ ಕೈಬಿಡಬೇಕು. ಕುವೆಂಪು ವಿವಿ ಜಿಲ್ಲಾಡಳಿತಕ್ಕೆ ಕಾಲೇಜಿನ ಭೂಮಿ ನೀಡುವ ನಿರ್ಧಾರವನ್ನು ಹಿಂಪಡೆಯಬೇಕು. ವಿದ್ಯಾರ್ಥಿಗಳು ನಡೆಸುತ್ತಿರುವ ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಆಂದೋಲನವನ್ನು ಕೆ ವಿ ಎಸ್ ಸಂಪೂರ್ಣವಾಗಿ ಬೆಂಬಲಿಹಿಸುತ್ತದೆ‌ ಎಂದು ಕೆವಿಎಸ್‌ ರಾಜ್ಯ ಸಂಚಾಲಕ ಸರೋವರ್‌ ಬೆಂಕಿಕೆರೆ ಒತ್ತಾಯಿಸಿದ್ದಾರೆ.

May be an image of text that says 'KVS ಸಹ್ಯಾದ್ರಿ ಕ್ಯಾಂಪಸ್ ಉಳಿಸಿ #SAVE SAHYADRI ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಾಗಿರುವ ಸಹ್ಯಾದ್ರಿ ಕಾಲೇಜಿನ 18.4 ಎಕರೆ ಜಾಗವನ್ನು ಖೇಲೋ ಇಂಡಿಯಾ ಮತ್ತು ಸಾಯಿ ಸಂಸ್ಥೆಯ ಯೋಜನೆಗಾಗಿ ಜಿಲ್ಲಾಡಳಿತಕ್ಕೆ ನೀಡಲು ಕುವೆಂಪು ವಿವಿ ಆಡಳಿತಾಂಗ ಮುಂದಾಗಿರುವುದನ್ನ ಕರ್ನಾಟಕ ವಿದ್ಯಾರ್ಥಿ ಸಂಘಟನೆ -KVS ತೀವ್ರವಾಗಿ ಖಂಡಿಸುತ್ತದೆ.'

ಸಹ್ಯಾದ್ರಿ ಕಾಲೇಜು ಹಳ್ಳಿಗಾಡಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತಮ ವೇದಿಕೆಯಾಗಿದೆ. ಈ ಕಾಲೇಜು ಸ್ವತಂತ್ರ ವಿಶ್ವವಿದ್ಯಾನಿಲಯವಾಗುವ ಎಲ್ಲಾ ಲಕ್ಷಣಗಳನ್ನೂ ಹೊಂದಿದೆ. ಇಂತಹ ಕಾಲೇಜಿಗೆ ಮತ್ತಷ್ಟು ಅನುದಾನಗಳನ್ನು ಅಭಿವೃದ್ದಿ ಪಡಿಸಬೇಕು. ಶಿವಮೊಗ್ಗಗೆ ಕ್ರೀಡಾಹಬ್ ಬರುತ್ತದೆ ಎಂದರೆ ನಮಗೆ ಸಂತೋಷವೇ, ಆದರೆ, ಅದಕ್ಕಾಗಿ ಕಾಲೇಜಿನ ಜಾಗವನ್ನು ಬಳಸಿಕೊಳ್ಳುವುದು ಸರಿಯೊಲ್ಲ, ಬೇರೆಡೆ ಸರ್ಕಾರಿ ಜಾಗವನ್ನು ಇದಕ್ಕಾಗಿ ಬಳಸಿಕೊಂಡು ಕ್ರೀಡಾಹಬ್ ನಿರ್ಮಾಣ ಮಾಡಲಿ ಎಂದು ರೈತ ಹೋರಾಟಗಾರ ಕೆಟಿ ಗಂಗಾಧರ್‌ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ 10 ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಜಯ; BJP ಗೆದ್ದಿದ್ದು ಒಂದು ಮಾತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights