‘ಬಿ’ ಕರಾಬು ಭೂಮಿ ಮಾರಾಟಕ್ಕೆ ಸರ್ಕಾರ ನಿರ್ಧಾರ?; ರಿಯಲ್ ಎಸ್ಟೇಟ್ಗೆ 21,000 ಎಕರೆ ಸರ್ಕಾರಿ ಭೂಮಿ?
ಕೊರೊನಾ ವಿರುದ್ದ ಸರಿಯಾದ ರೀತಿಯ ಕ್ರಮಗಳಿಲ್ಲದ ಹಾಗೂ ನಿರ್ವಹಣೆಯ ವಿಫಲತೆಯಿಂದಾಗಿ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ, ಆರ್ಥಿಕ ಬಿಕ್ಕಟ್ಟಿನಿಂದ ಕೊಂಚ ಹೊರಬರಲು ಸರ್ಕಾರಕ್ಕೆ ಸೇರಿದ “ಬಿ” ಕರಾಬು ಭೂಮಿಯನ್ನು ಮಾರಾಟ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ನಗರ ಹಾಗೂ ನಗರ ಮಿತಿಯಿಂದ 18 ಕಿ.ಮೀ ವ್ಯಾಪ್ತಿಯಲ್ಲಿ ಬರುವ ‘ಬಿ’ ಕರಾಬು ಭೂಮಿಯನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಕೋಟ್ಯಾಂತರ ರೂಪಾಯಿ ಆದಾಯ ದೊರೆಯಲಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ನಗರದಲ್ಲಿ 12 ಸಾವಿರ ಎಕರೆ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 9 ಸಾವಿರ ಎಕರೆ ಸೇರಿ ಒಟ್ಟು 21 ಸಾವಿರ ಎಕರೆ ಸರ್ಕಾರಿ ಜಮೀನನ್ನು ಮಾರಾಟ ಮಾಡಲು ಕಂದಾಯ ಇಲಾಖೆ ಮುಂದಾಗಿದೆ. ಮಾರಾಟ ಮಾಡಲು ಮೂರು ವಿವಿಧ ದರ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರು ನಗರ ಮತ್ತು ಹೊರವಲಯದ 18 ಕಿ.ಮೀ. ವ್ಯಾಪ್ತಿಯೊಳಗಿನ ಈ ಜಮೀನನ್ನು ಮಾರಾಟ ಮಾಡುವುದರಿಂದಾಗಿ ಸರ್ಕಾರಕ್ಕೆ ಭಾರೀ ಪ್ರಮಾಣದಲ್ಲಿ ಆದಾಯ ಸಿಗಲಿದೆ. ಅಲ್ಲದೆ, ರಿಯಲ್ ಎಸ್ಟೇಟ್ ಉದ್ಯಮವೂ ಇನ್ನಷ್ಟು ಬೆಳೆಯಲಿದೆ ಎಂದು ಸಮರ್ಥಿಸಿಕೊಳ್ಳಲಾಗಿದೆ.
ಇದಕ್ಕಾಗಿ ಭೂಕಂದಾಯ ಕಾಯಿದೆ ಕಲಂ 64(2) ಹಾಗೂ 69ಕ್ಕೆ ತಿದ್ದುಪಡಿ ತರಲಾಗಿದೆ. ಈ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಸರ್ಕಾರಕ್ಕೆ ಸೇರಿದ ಬಿ ಕರಾಬು ಭೂಮಿಯನ್ನು ಅತಿಕ್ರಮಿಸಿಕೊಂಡಿರುವವರು ನಿಗದಿತ ದರವನ್ನು ಪಾವತಿಸಿ ಸಕ್ರಮಗೊಳಿಸಿಕೊಳ್ಳಲು ಅವಕಾಶವಿದೆ. ಅಲ್ಲದೆ, ಈ ಜಮೀನನ್ನು ಬಳಸುತ್ತಿರುವವರು ಮಾರುಕಟ್ಟೆ ಮೌಲ್ಯದ ಎರಡು ಪಟ್ಟು ಹೆಚ್ಚು ದರ ಪಾವತಿ ಮಾಡಿ ಸಕ್ರಮ ಮಾಡಿಕೊಳ್ಳಲು ಅನಮತಿ ಪಡೆಯಲಾಗಿದೆ.
ಬಿ ಕರಾಬು ಜಮೀನು ಯಾವುದು?
ಬಿ’ ಕರಾಬು ಜಮೀನನ್ನು ಲಾಕ್ಡ್ ಭೂಮಿ ಎಂದೂ ಕರೆಯಲಾಗುತ್ತದೆ. ಬೆಂಗಳೂರು ನಗರದಲ್ಲಿ ಸಾಕಷ್ಟು ಬಿ ಕರಾಬು ಜಮೀನಿದ್ದು, ಇವುಗಳಲ್ಲಿ ಹಲವಾರು ಎಕರೆ ಭೂಮಿಯು ಬಡಾವಣೆ ಹಾಗೂ ಇನ್ನಿತರ ಸ್ವತ್ತುಗಳ ನಡುವೆ ಇವೆ. ಈ ಜಮೀನುಗಳಲ್ಲಿ ಪ್ರಕೃತಿದತ್ತವಾಗಿ ಹರಿಯುವ ಹಳ್ಳ – ಕೊಳ್ಳ, ಕಾಲುವೆ, ಸಾರ್ವಜನಿಕ ಬಳಕೆಗೆ ಉಪಯೋಗವಾಗುವ ಕಾಲುದಾರಿ ‘ಬಿ’ ಕರಾಬು ಭೂಮಿ ಎನಿಸಿಕೊಳ್ಳುತ್ತದೆ.
ಜೊತೆಗೆ ಉಳುಮೆ ಮಾಡಲಾಗದ ಪಾಳು ಭೂಮಿ ಕೂಡ ಈ ವರ್ಗಕ್ಕೆ ಸೇರಿದೆ. ಇಂತಹ ಭೂಮಿ ಆಯಾ ಸರ್ವೆ ನಂಬರ್ಗಳ ವ್ಯಾಪ್ತಿಯಲ್ಲಿ ಕೆಲ ಗುಂಟೆಗಳಷ್ಟು ಪ್ರಮಾಣದಲ್ಲಿ ಇವೆ. ಇವುಗಳ ಸ್ವರೂಪ ಬದಲಿಸಲು ಕಾನೂನಿನಲ್ಲಿ ಅವಕಾಶ ಇಲ್ಲ.
ಇದನ್ನೂ ಓದಿ: 447 ಎಕರೆ ಗೋಮಾಳ ಗುಳುಂ: ಒತ್ತುವರಿ ಭೂಮಿಯಲ್ಲಿ 258 ಅನಧಿಕೃತ ಕಟ್ಟಡಗಳ ನಿರ್ಮಾಣ!

