ಕೊರೊನಾದಿಂದ ತಂದೆ ಸಾವು : ಕಾರ್ಯಕರ್ತೆ ನತಾಶಾ ನರ್ವಾಲ್ ಗೆ ಮಧ್ಯಂತರ ಜಾಮೀನು!

ತಂದೆ ಮಹಾವೀರ್‌ ನರ್ವಾಲ್ ಕೊವಿಡ್ ನಿಂದಾಗಿ ಸಾವನ್ನಪ್ಪಿದ ನಂತರ ಪಿಂಜ್ರಾ ಟಾಡ್ ಕಾರ್ಯಕರ್ತೆ ನತಾಶಾ ನರ್ವಾಲ್ ಮಧ್ಯಂತರ ಜಾಮೀನು ಪಡೆದಿದ್ದಾರೆ.

ಮಹಾವೀರ್ ನರ್ವಾಲ್ ಅವರು ಭಾನುವಾರ ಕೊರೊನಾದಿಂದಾಗಿ ಸಾವನ್ನಪ್ಪಿದ್ದು, ಅಂತಿಮ ವಿಧಿಗಳನ್ನು ನಿರ್ವಹಿಸಲು ಕಾರ್ಯಕರ್ತೆ ನತಾಶಾ ನರ್ವಾಲ್ ಅವರಿಗೆ ಇಂದು ಬೆಳಿಗ್ಗೆ ದೆಹಲಿ ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ.

ದೆಹಲಿ ಗಲಭೆಗೆ ಸಂಬಂಧಿಸಿದ ಪಿತೂರಿಯ ಆರೋಪದ ಮೇಲೆ ಕಳೆದ ವರ್ಷ ನತಾಶಾಳನ್ನು ಬಂಧಿಸಲಾಗಿತ್ತು. ಭಯೋತ್ಪಾದನಾ ವಿರೋಧಿ ಕಾನೂನು – ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊರೊನಾ ಸೋಂಕು ತಗುಲಿದ ಕಾರಣದಿಂದ ನತಾಶಾ ನರ್ವಾಲ್ ಅವರ ಸಹೋದರ ಆಕಾಶ್ ಕೂಡ ಪ್ರತ್ಯೇಕವಾಗಿದ್ದಾನೆ. “ಆದ್ದರಿಂದ, ಅಂತ್ಯಕ್ರಿಯೆ ಮತ್ತು ಶವಸಂಸ್ಕಾರ ಮಾಡಲು ಕುಟುಂಬದಲ್ಲಿ ಬೇರೆ ಯಾರೂ ಇಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ನ್ಯಾಯದ ಹಿತದೃಷ್ಟಿಯಿಂದ, ದುಃಖ ಮತ್ತು ವೈಯಕ್ತಿಕ ನಷ್ಟದ ಈ ಸಮಯದಲ್ಲಿ ಅರ್ಜಿದಾರರ ಬಿಡುಗಡೆ ಕಡ್ಡಾಯವಾಗಿದೆ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಆಕೆಗೆ ಮೂರು ತಿಂಗಳ ಕಾಲ ಜಾಮೀನು ನೀಡಲಾಗಿದೆ.

ಮಹಾವೀರ್ ನರ್ವಾಲ್ ಅವರು ಸಾಯುವ ಮುನ್ನ ತಮ್ಮ ಮಗಳೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಕುಟುಂಬದವರು ಮಾಧ್ಯಮದೊಂದಿಗೆ ಅಳಲು ತೋಡಿಕೊಂಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights