ಫ್ಯಾಕ್ಟ್‌ಚೆಕ್ : ಮೀಸಲಾತಿ ಬಗ್ಗೆ ದಾರಿ ತಪ್ಪಿಸುವಂತ ಪೋಸ್ಟ್‌ ಹಂಚಿಕೆ

ಸಾಮಾನ್ಯ ವರ್ಗದ ಅಭ್ಯರ್ಥಿ ಶೇ.90 ಅಂಕ ಗಳಿಸಿದರೂ ಕೆಲಸ ಸಿಗುವುದಿಲ್ಲ. ಆದರೆ SC/ST ಅಭ್ಯರ್ಥಿ ಶೆ.50 ಅಂಕ ಪಡೆದರೆ ಸಾಕು ಕೆಲಸ ಸಿಗುತ್ತದೆ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಹಾಗಿದ್ದರೆ ಕೇವಲ 50% ಅಂಕ ಪಡೆದರೆ ಮೀಸಲಾತಿ ಆಧಾರದಲ್ಲಿ ಕೆಲಸ ಸಿಗುತ್ತದೆ ಎಂಬ ಹೇಳಿಕೆ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಚಿತ್ರದೊಂದಿಗೆ 90%ಮತ್ತು 50% ಅಂಕಗಳ ಗ್ರಾಫಿಕ್ ಡಿಸೈನ್‌ನಲ್ಲಿ ರಚಿಸಿದ ಪೋಸ್ಟ್‌ರ್ಅನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಮೀಸಲಾತಿ ಜಾರಿಯಿಂದಾಗಿ 90 ಅಂಕ ಗಳಿಸಿದ ಸಾಮಾನ್ಯ ವರ್ಗದವನಿಗೆ ಸಿಗದ ಸೌಲಭ್ಯ ಕೇವಲ 50% ಪಡೆದವನಿಗೆ ಸಿಗುತ್ತದೆ. ಇಂತಹ ತಾರತಮ್ಯಕ್ಕೆ ಮೀಸಲಾತಿ ಕಾರಣ ಎಂಬ ಪ್ರತಿಪಾದನೆಯನ್ನು ಪರಿಶೀಲಿಸಿದಾಗ ತಿಳಿದ ವಾಸ್ತವವೇನೆಂದರೆ, ಮೀಸಲಾತಿಯಿಂದಾಗಿ ಶೇ.90% ಪಡೆದವರಿಗೆ ಸಿಗದ ಕೆಲಸ ಶೇ.50 ಪಡೆದವರಿಗೆ ಸಿಗುತ್ತದೆ ಎಂಬುದು ಸಂಪೂರ್ಣ ಸುಳ್ಳು. ಮೀಸಲಾತಿ ಪರಿಕಲ್ಪನೆ ಅರ್ಥ ಮಾಡಿಕೊಳ್ಳದ ಜಾತಿವಾದಿಗಳು ಸೃಷ್ಟಿಸಿದ ಪೋಸ್ಟರ್ ಇದಾಗಿದೆ.

ಮೀಸಲಾತಿ ಎಂಬುದು ಸಾಮಾಜಿಕ ತಾರತಮ್ಯಕ್ಕೆ ಒಳಗಾದ ಸಮುದಾಯಗಳ ಪ್ರಾತಿನಿಧ್ಯವನ್ನು ಖಾತರಿಗೊಳಿಸಲು ಜಾರಿಗೆ ತಂದ ಕ್ರಮವಾಗಿದೆ. SC/ST ಮಾತ್ರವಲ್ಲದೇ ಈ ದೇಶದ ಎಲ್ಲಾ ಸಮುದಾಯಗಳಿಗೂ ಮೀಸಲಾತಿ ದೊರೆಯುತ್ತಿದೆ. ಇತ್ತೀಚೆಗೆ EWS ಕೋಟಾದಡಿ ಬಲಾಢ್ಯ ಜಾತಿಯ ಬಡವರಿಗೆ ಶೇ.10 ರಷ್ಟು ಮೀಸಲಾತಿ ಒದಗಿಸಲಾಗಿದೆ.

ಸದ್ಯ ಮೀಸಲಾತಿ ಇರುವುದು

ಎಸ್‌ಸಿ: (101 ಜಾತಿಗಳು) – 15%
ಎಸ್‌ಟಿ: (52 ಜಾತಿಗಳು) 03%
ಕೆಟಗರಿ 1: (94 ಜಾತಿಗಳು) 04%
2ಎ: (102 ಜಾತಿಗಳು) 15%
2ಬಿ; (ಮುಸ್ಲಿಮರು) 04%
3ಎ: 04%
3ಬಿ: 05%
EWS: (ಬ್ರಾಹ್ಮಣ, ಮೊದಲಿಯಾರ್, ನಾಯರ್, ಆರ್ಯವೈಶ್ಯ, ಜೈನರು) 10%

ಒಟ್ಟು; 60% ಮೀಸಲಾತಿ ಇದ್ದರೆ ಉಳಿದ 40% ಅನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ. ಅಂದರೆ ಅಲ್ಲಿ ಹೆಚ್ಚಿನ ಅಂಕ ಪಡೆದ ಯಾವುದೇ ಸಮುದಾಯದವರು ಬೇಕಾದರೆ ಪಡೆಯಬಹುದು.

ಒಂದು ಉದಾಹರಣೆ ಮೂಲಕ ಇದನ್ನು ನೋಡೋಣ

100 ಸರ್ಕಾರಿ ಹುದ್ದೆಗಳಿವೆ ಎಂದಿಟ್ಟುಕೊಳ್ಳಿ. ಅದಕ್ಕೆ 10,000 ಜನರು ಅಪ್ಲಿಕೇಶನ್ ಹಾಕಿರುತ್ತಾರೆ. ಮೀಸಲಾತಿಯ ಪ್ರಕಾರ ಮೊದಲು ಸಾಮಾನ್ಯ ಹುದ್ದೆಗಳನ್ನು ತುಂಬಲಾಗುತ್ತದೆ. ಅಂದರೆ 10,000 ಜನರಲ್ಲಿ ಹೆಚ್ಚು ಅಂಕ ಗಳಿಸಿದ 40 ಜನರನ್ನು ಯಾವುದೇ ಜಾತಿ ಪರಿಗಣಿಸದೆ ತುಂಬಿಕೊಳ್ಳಲಾಗುತ್ತದೆ. ಆ ನಂತರ ಎಸ್‌ಸಿ ಸಮುದಾಯದ ಅತಿ ಹೆಚ್ಚು ಅಂಕ ಗಳಿಸಿದ 15 ಜನರನ್ನು, ಎಸ್ಟಿ ಸಮುದಾಯ 3 ಜನರನ್ನು, ಕೆಟಗರಿ ಒಂದರಲ್ಲಿ ಬರುವ 4 ಜನರನ್ನು, 2ಎ ಕೆಟಗರಿಯ 15 ರನ್ನು, 2ಬಿ ಕೆಟಗರಿಯ 4 ಜನರನ್ನು, 3ಎ ಕೆಟಗರಿಯ 4 ಜನರನ್ನು, 3ಬಿ ಕೆಟಗರಿಯ 5 ಜನರನ್ನು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳು (EWS) ಎಂದು ಪರಿಗಣಿಸಿ ಬ್ರಾಹ್ಮಣ, ಮೊದಲಿಯಾರ್, ನಾಯರ್, ಆರ್ಯವೇಶ್ಯ ಮತ್ತು ಜೈನ ಸಮುದಾಯದ 10 ಜನರನ್ನು ಸೇರಿ ಒಟ್ಟು 100 ಜನರನ್ನು ಆಯ್ಕೆ ಮಾಡಲಾಗುತ್ತದೆ.

ಅಂದರೆ 10,000 ಜನರಲ್ಲಿ 100 ಜನಕ್ಕೆ ಮಾತ್ರ ಕೆಲಸ ಸಿಗುತ್ತದೆ. ಉಳಿದ 9,900 ಜನರಿಗೆ ಕೆಲಸ ಸಿಗುವುದಿಲ್ಲ. ಎಸ್‌ಸಿ ಸಮುದಾಯದ ಶೇ.24 ಜನರಿದ್ದಾರೆ ಎಂದಿಟ್ಟುಕೊಂಡರೆ, ಅದರಲ್ಲಿ1000 ಸಾವಿರ ಜನರು ಕೆಲಸಕ್ಕೆ ಅಪ್ಲಿಕೇಶ್ ಹಾಕಿದ್ದರೆ ಅವರಲ್ಲಿ 15 ಜನರು ಎಸ್‌ಸಿ ಮೀಸಲಾತಿ ಮತ್ತು ಸಾಮಾನ್ಯ ವರ್ಗದಲ್ಲಿ ಮೆರಿಟ್ ಪಡೆದ ಅಂದಾಜು 5 ಜನರು ಸೇರಿದರೆ 20 ಜನರಿಗೆ ಉದ್ಯೋಗ ಸಿಗಬಹುದು. ಉಳಿದ 980 ಮಂದಿಗೆ ಉದ್ಯೋಗ ಸಿಗುವುದಿಲ್ಲ.

ಅದೇ ರೀತಿಯ ಬ್ರಾಹ್ಮಣ ಸಮುದಾಯ 3% ಜನರಿದ್ದು, 100 ಜನ ಅಪ್ಲಿಕೇಶನ್ ಹಾಕಿದ್ದರೆ ಅವರಲ್ಲಿ ಸಾಮಾನ್ಯ ವರ್ಗದಲ್ಲಿ ಕನಿಷ್ಟ 30 ಜನರಿಗೆ ಮತ್ತು EWS ಕೋಟಾದಡಿ 5 ಜನರಿಗೆ ಖಂಡಿತ ಉದ್ಯೋಗ ಸಿಗುತ್ತದೆ. ಏಕೆಂದರೆ ಅವರು ತಲೆ ತಲೆಮಾರುಗಳಿಂದ ಬೇರೆಯವರಿಗೆ ಸಿಗದ ಶೈಕ್ಷಣಿಕ ಅವಕಾಶ ಪಡೆದಿದ್ದಾರೆ. ಉಳಿದ 65 ಮಂದಿಗೆ ಉದ್ಯೋಗ ಸಿಗುವುದಿಲ್ಲವಷ್ಟೆ.

ಇದನ್ನೇ ನೀವು ಎಸ್‌ ಸಿ ಸಮುದಾಯಕ್ಕೆ ಹೋಲಿಸಿದರೆ ಅವರಲ್ಲಿ 980 ಮಂದಿಗೆ ಉದ್ಯೋಗ ಸಿಕ್ಕಿಲ್ಲ. ಅಂದರೆ ಒಟ್ಟು ಉದ್ಯೋಗಗಳಲ್ಲಿ ಇವರ ಪಾಲು ಹೆಚ್ಚಿದೆ ಅಲ್ಲವೇ? ಹಾಗಾಗಿ ಮೀಸಲಾತಿಯಿಂದಾಗಿ ಶೇ.90% ಪಡೆದವರಿಗೆ ಸಿಗದ ಕೆಲಸ ಶೇ.50 ಪಡೆದವರಿಗೆ ಸಿಗುತ್ತದೆ ಎಂಬುದು ಸಂಪೂರ್ಣ ಸುಳ್ಳು. ಇಲ್ಲಿ ಉದ್ಯೋಗಗಳ ಸಂಖ್ಯೆ ಹೆಚ್ಚಿಸಿ ಎಂದು ಹೋರಾಟ ಮಾಡಬೇಕೆ ಹೊರತು ಮೀಸಲಾತಿಯ ವಿರುದ್ದವಲ್ಲ. 10,000 ಉದ್ಯೋಗಗಳನ್ನು ಸೃಷ್ಟಿಸಿ ಎಂದು ಹೋರಾಡುವುದು ಬಿಟ್ಟು ಮೀಸಲಾತಿ ಮತ್ತು ಅಂಬೇಡ್ಕರ್‌ ರನ್ನು ದೂಷಿಸಿದರೆ ಪ್ರಯೋಜನವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಮೀಸಲಾತಿಯಿಂದ ಶೇ.50 ಪಡೆದ ವ್ಯಕ್ತಿಗೆ ಸಿಗುವ ಸೌಲಭ್ಯ (ಉದ್ಯೋಗ) ಶೇ. 90 ಪಡೆದವನಿಗೆ ಸಿಗುವುದಿಲ್ಲ ಎಂಬ ವಾದ ಸತ್ಯಕ್ಕೆ ದೂರವಾದದ್ದು ಮತ್ತು ಜನರನ್ನು ದಾರಿ ತಪ್ಪಿಸುವ ಹೇಳಿಕೆಯಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ತಿಳಿಯದೆ ಬಿಜೆಪಿಗೆ ಮತ ಹಾಕಿದ ಕಾರಣ ವ್ಯಕ್ತಿಯೊಬ್ಬ ತನ್ನ ಕೈ ಬೆರಳನ್ನು ಕತ್ತರಿಸಿಕೊಂಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights