ಕೋಮು ವಿಷಬೀಜದ ಮತ್ತೊಂದು ಹೆಸರು ತೇಜಸ್ವಿ ಸೂರ್ಯ; ಡಿ.ಕೆ. ಶಿವಕುಮಾರ್

ಕೋಮು ವಿಷಬೀಜದ ಮತ್ತೊಂದು ಹೆಸರು ತೇಜಸ್ವಿ ಸೂರ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಕೋಮುವಾದದ ವಿಷಬೀಜಕ್ಕೆ ಇರುವ ಮತ್ತೊಂದು ಹೆಸರು ತೇಜಸ್ವಿ ಸೂರ್ಯ. ಮಾಧ್ಯಮಗಳ ಮುಂದೆ ಮುಸಲ್ಮಾನರ ಹೆಸರುಗಳನ್ನು ಓದಿದ್ದು ಈತನೊ ಅಥವಾ ಅಧಿಕಾರಿಗಳೋ? ಮಾಡುವುದೆಲ್ಲ ಮಾಡಿ ಅಧಿಕಾರಿಗಳನ್ನು ಸಿಕ್ಕಿಸಲು ನೋಡುತ್ತಿದ್ದಾನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದ್ದಾರೆ.

‘ಆ ಸಂಸದರನ್ನು ಏನೆಂದು ಕರೆಯಬೇಕೋ ಗೊತ್ತಾಗುತ್ತಿಲ್ಲ. ಪತ್ರಿಕಾ ಗೋಷ್ಠಿಯಲ್ಲಿ 17 ಜನರ ಹೆಸರು ಓದಿದ್ದು ಈ ಮಹಾನುಭಾವನೇ ಅಲ್ಲವೇ? ನೀವು ಮಾಧ್ಯಮದವರು ಅದನ್ನು ತಿರುಚಿ ತೋರಿಸಿದ್ದೀರಾ? ಈ ಹಿಂದೆ ಮುಸಲ್ಮಾನರನ್ನು ಪಂಕ್ಚರ್ ಹಾಕುವವರು ಎಂದಿದ್ದರು, ಬೆಂಗಳೂರು ಭಯೋತ್ಪಾದಕರ ರಾಜಧಾನಿಯಾಗುತ್ತಿದೆ ಎಂದಿದ್ದರು. ಈಗ ಈ 17 ಜನರನ್ನು ಗುರಿಯಾಗಿಸಿ ಮಾತನಾಡಿದ್ದಾರೆ. ಈಗ ಅಧಿಕಾರಿಗಳು ಕೊಟ್ಟ ಹೆಸರು ಓದಿದೆ ಅಂತಿದ್ದಾರೆ. ಅಧಿಕಾರಿಗಳೇಕೆ ಕೇವಲ 17 ಜನರ ಹೆಸರು ಕೊಡುತ್ತಾರೆ? ಅವರು ಕೊಟ್ಟರೆ ಎಲ್ಲರ ಹೆಸರು ಕೊಡುತ್ತಿದ್ದರು. ತಮ್ಮ ತಪ್ಪನ್ನು ಅಧಿಕಾರಿಗಳ ಮೇಲೆ ಹೊರಿಸುತ್ತಿದ್ದಾರೆ’ ಎಂದಿದ್ದಾರೆ.

‘ಮುಖ್ಯಮಂತ್ರಿಗಳು ಮೂರನೇ ಅಲೆ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಅದಕ್ಕೆ ಅವರು ಸಿದ್ಧತೆ ಮಾಡಿಕೊಳ್ಳಲಿ. ಅದಕ್ಕೆ ಮೊದಲು ಈಗ ಬಂದಿರೋ 2ನೇ ಅಲೆ ನಿಯಂತ್ರಿಸಲು ಕಾರ್ಯಕ್ರಮ ರೂಪಿಸಲಿ. ಲಸಿಕೆ ಕೊಡುತ್ತೇವೆ, ನೋಂದಣಿ ಮಾಡಿಸಿ ಅಂತಾ ಹೇಳಿದರು. ನಾನು ನನ್ನ ಮಕ್ಕಳಿಗೆ ನೋಂದಣಿ ಮಾಡಿಸಲು ಆನ್ಲೈನ್ ನಲ್ಲಿ ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ನೀವು ಬೇಕಾದರೆ ಪ್ರಯತ್ನಿಸಿ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಯಾವುದೇ ಸ್ಪಷ್ಟತೆ ಇಲ್ಲ’ ಎಂದರು.

ಜೊತೆಗೆ ಸಿಇಟಿಯಲ್ಲಿ ಯಾವ ಕಾಲೇಜಿನಲ್ಲಿ ಯಾವ್ಯಾವ ಸೀಟು ಎಷ್ಟೆಷ್ಟು ಇದೆ ಎಂದು ತೋರಿಸುವ ರೀತಿ ಯಾವ ಆಸ್ಪತ್ರೆಯಲ್ಲಿ ಹಾಸಿಗೆ, ಆಕ್ಸಿಜನ್ ಇದೆ, ಲಸಿಕೆ ಎಲ್ಲಿ ನೀಡಲಾಗುತ್ತದೆ ಅಂತಾ ಸಂಪೂರ್ಣ ಮಾಹಿತಿಯನ್ನು ಜನರಿಗೆ ಕೊಡಲಿ ಎಂದು ಆಗ್ರಹಿಸಿದ್ದಾರೆ.

‘ಶಿವಮೊಗ್ಗದಲ್ಲಿ ಒಬ್ಬ ಮಂತ್ರಿಗಳು, ಜನರಿಗೆ ಪರಿಹಾರ ಕೊಡಲು ನಮ್ಮ ಬಳಿ ನೋಟು ಮುದ್ರಿಸುವ ಯಂತ್ರ ಇಲ್ಲ ಅಂತಾ ಹೇಳಿದ್ದಾರೆ. ಆದರೆ ಅವರು ಹಿಂದೆ ನೋಟು ಎಣಿಸುವ ಯಂತ್ರ ಇಟ್ಟುಕೊಂಡಿರಲಿಲ್ಲವೇ? ನಿಮಗೆ ಪರಿಹಾರ ಕೊಡಕ್ಕೆ ಆಗದಿದ್ದರೆ ಸರ್ಕಾರದ ಬಳಿ ದುಡ್ಡಿಲ್ಲ, ಆಗಲ್ಲ ಅಂತಾ ಹೇಳಿ. ಜನ ನೋವಿಗೆ ಸಿಲುಕಿದ್ದಾರೆ, ಅದಕ್ಕಾಗಿ ಈ ರೀತಿ ಪರಿಹಾರ ಕೇಳುತ್ತಿದ್ದಾರೆ. ನೀವು ಲಾಕ್ ಡೌನ್ ಮಾಡಿರುವುದಕ್ಕೆ ಅವರು ಪರಿಹಾರ ಕೇಳುತ್ತಿದ್ದಾರೆ. ನೆರೆ ರಾಜ್ಯಗಳಲ್ಲಿ ಪರಿಹಾರ ಕೊಡುತ್ತಿದ್ದಾರೆ. ನಿಮ್ಮನ್ನು ಪರಿಹಾರ ಕೇಳದೆ ಇನ್ಯಾರನ್ನು ಕೇಳಬೇಕು?’ ಎಂದು ಡಿಕೆಶಿ ಗುಡುಗಿದರು.

‘ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವವರಿಗೆ ಸರಕಾರ ತಕ್ಷಣ ಆರ್ಥಿಕ ನೆರವು ಪ್ಯಾಕೇಜ್ ಘೋಷಿಸಿ ತಿಂಗಳಿಗೆ 10 ಸಾವಿರ ರುಪಾಯಿ ನೀಡಬೇಕು. ತರಕಾರಿ ಬೆಳೆದ ರೈತನಿಂದ ಬೆಳೆ ಖರೀದಿಯಾಗುತ್ತಿಲ್ಲ. ಕೃಷಿ, ತೋಟಗಾರಿಕೆ ಸಚಿವರೇ, ಯಾವ ರೈತನ ಬಳಿ ಹೋಗಿ ಬೆಳೆ ಖರೀದಿ ಮಾಡಿದ್ದೀರಿ? ಅವರ ಜತೆ ಏಂದರೂ ಮಾತನಾಡಿದ್ದೀರಾ? ಮೊದಲು ಹೋಗಿ, ಎಪಿಎಂಸಿಗಳಿಗೆ ಭೇಟಿ ಕೊಟ್ಟು, ರೈತರ ಸಂಕಷ್ಟ ಆಲಿಸಿ. ಕೇವಲ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟರೆ ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ’ ಎಂದು ಮಂತ್ರಿಗಳ ವಿರುದ್ಧ ಕನಕಪುರದ ಬಂಡೆ ಸಿಡಿದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights