ಮೇ.15ರಂದು ರಾಜ್ಯದಾದ್ಯಂತ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಪ್ರತಿಭಟನೆ!

ಮೇ ೧೫ ರಂದು ರಾಜ್ಯದಾದ್ಯಂತ ರಾಜ್ಯ ಸರ್ಕಾರದ ಧೋರಣೆ ವಿರುದ್ಧ  ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ನೇತೃತ್ವದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಕೋವಿಡ್ ಉಲ್ಬಣಿಸಿರುವ ಸಂದರ್ಭದಲ್ಲಿ ಜನರ ಜೀವ ಮತ್ತು ಜೀವನ ಉಳಿಸುವಂತೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಜನಸೇವೆ ಮಾಡುತ್ತಿರುವ ಸುಮಾರು 4೦೦ ಜನ ಸಾಮಾಜಿಕ ಕಾರ್ಯಕರ್ತರು ವಾರದ ಹಿಂದೆ ಮುಖ್ಯಮಂತ್ರಿಗಳಿಗೆ ತುರ್ತು ಪತ್ರ ಬರೆದಿದ್ದು ಅದನ್ನು ಮಾಧ್ಯಮಗಳೂ ಪ್ರಕಟಿಸಿದ್ದವು. ಜೊತೆಗೆ ತುರ್ತು ಪತ್ರವನ್ನು ಖುದ್ದು ಸಿಎಂ ಕಛೇರಿಗೂ ತಲುಪಿಸಲಾಗಿತ್ತು. ಅದರಲ್ಲಿ ಪ್ರಸ್ತುತ ಬಿಕ್ಕಟ್ಟಿನಿಂದ ಜನರನ್ನು ರಕ್ಷಿಸಲು ಪಂಚ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಸರ್ಕಾರ ಕಾರ್ಯರೂಪಕ್ಕೆ ತರಬೇಕೆಂದು ವಿನಂತಿಸಿಕೊಳ್ಳಲಾಗಿತ್ತು.

ಅಲ್ಲಿಂದೀಚೆಗೆ ರಾಜ್ಯದಲ್ಲಿ ಸಣ್ಣ ಮಟ್ಟಕ್ಕೆ ಬೆಡ್ ಗಳ ಸಂಖ್ಯೆಯನ್ನು ಹೆಚ್ಚಿಸಿರುವುದನ್ನು ಬಿಟ್ಟರೆ ಸರ್ಕಾರ ಮತ್ತ್ಯಾವ ಕ್ರಮಗಳಿಗೂ ಮುಂದಾಗಿಲ್ಲ. ಕನಿಷ್ಟ ಪ್ರತಿಕ್ರಿಯಿಸುವ ಜವಬ್ದಾರಿಯನ್ನೂ ತೋರಿಲ್ಲ. ಜನರಿಗೆ ಆಸರೆಯಾಗುವ ಯಾವ ಕ್ರಮಗಳೂ ಇಲ್ಲದೆ, ಲಾಕ್ ಡೌನ್ ಮಾತ್ರ ಮುಂದುವರೆಯುತ್ತಿದೆ. ಈ ಸಮಯದಲ್ಲಿ ಜನರನ್ನು ಅಮಾನವೀಯವಾಗಿ ಥಳಿಸಲಾಗುತ್ತಿದೆ. ಹಾಗಾಗಿ ಸರ್ಕಾರದ ಈ ನಿಶ್ಚಲ ಮತ್ತು ಅಮಾನವೀಯ ಧೋರಣೆಯನ್ನು ಖಂಡಿಸಿ ಮತ್ತು ಪಂಚ ಕ್ರಮಗಳನ್ನು ಸರ್ಕಾರ ಕಾರ್ಯರೂಪಕ್ಕೆ ತರಲೇಬೇಕು ಎಂದು ಒತ್ತಾಯಿಸಿ ಮೇ 15 ರಂದು ರಾಜ್ಯದ ಜನರು ತಮ್ಮ ತಮ್ಮ ಮನೆ ಎದುರೇ ಪ್ರತಿಭಟನೆಯನ್ನು ದಾಖಲಿಸುವಂತೆ ಕರೆ ನೀಡಲಾಗಿದೆ. ಒಂದು ವೇಳೆ ಇದಕ್ಕೂ ತಮ್ಮ ಸರ್ಕಾರ ಸ್ಪಂದಿಸದಿದ್ದರೆ ಗಂಭೀರ ಸ್ವರೂಪದ ಹೋರಾಟಕ್ಕಿಳಿಯಲಾಗುವುದು ಎಂದು ಎಚ್ಚರಿಸಲಾಗಿದೆ.

ಜನರಿಗಾಗಿ ಸರ್ಕಾರವನ್ನು ಒತ್ತಾಯಿಸುವ ಈ ಹೋರಾಟದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ದೇವನೂರ ಮಹಾದೇವ, ಡಾ. ಕೆ. ಮರುಳಸಿದ್ದಪ್ಪ, ಬಿ.ಟಿ. ಲಲಿತಾ ನಾಯ್ಕ್, ಶಶಿಕಾಂತ್ ಸೆಂದಿಲ್, ಮಾವಳ್ಳಿ ಶಂಕರ್, ಯಾಸಿನ್ ಮಲ್ಪೆ, ಸಿ.ಎಸ್. ದ್ವಾರಕಾನಾಥ್, ಬಡಗಲಪುರ ನಾಗೇಂದ್ರ, ಎಚ್. ಆರ್. ಬಸವರಾಜಪ್ಪ, ಎಸ್. ಬಾಲನ್, ಎನ್. ವೆಂಕಟೇಶ್, ಕೆ.ಎಲ್. ಅಶೋಕ್ ಇತರರು ಕೈ ಜೋಡಿಸಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights