ಟೌಕ್ಟೇ ಚಂಡಮಾರುತ : ಇಂದು ಸಂಜೆ ಗುಜರಾತ್ ತಲುಪುವ ಸಾಧ್ಯತೆ..!
ಟೌಕ್ಟೇ ಚಂಡಮಾರುತ ಅತ್ಯಂತ ತೀವ್ರಗೊಂಡಿದ್ದು ಸಾಕಷ್ಟು ಆಸ್ತಿಪಾಸ್ತಿ ಹಾನಿ ಮಾಡುತ್ತಿದೆ. ಮಾತ್ರವಲ್ಲದೇ ಇಂದು ಸಂಜೆ ಗುಜರಾತ್ ತಲುಪುವ ಸಾಧ್ಯತೆ ಇದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ.
ಟೌಕ್ಟೇ ಚಂಡಮಾರುತ ಸೋಮವಾರ ಸಂಜೆ ಕರಾವಳಿ ದಾಟುವ ನಿರೀಕ್ಷೆ ಇದೆ. ಅತ್ಯಂತ ತೀವ್ರವಾದ ಚಂಡಮಾರುತ ಪ್ರಸ್ತುತ ಮುಂಬಯಿಯಿಂದ ನೈಋತ್ಯಕ್ಕೆ 160 ಕಿ.ಮೀ ದೂರದಲ್ಲಿದೆ. ಗುಜರಾತ್ ಕರಾವಳಿಯನ್ನು ರಾತ್ರಿ 8 ರಿಂದ ರಾತ್ರಿ 11 ರವರೆಗೆ ತಲುಪುವ ಸಾಧ್ಯತೆಯಿದೆ. ಈ ವೇಳೆ ಗಂಟೆಗೆ 200 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತದೆ ಎಂದು ಹವಾಮಾನ ಇಲಾಖೆ ಯಿಳಿಸಿದೆ.
ಈಗಾಗಲೇ ಟೌಕ್ಟೇ ಚಂಡಮಾರುತದ ತೀವ್ರತೆಯಿಂದಾಗಿ ಕರ್ನಾಟಕ ಮತ್ತು ಗೋವಾದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಭಾನುವಾರ ಗಾಳಿ, ಭಾರೀ ಮಳೆ ಮತ್ತು ಹೆಚ್ಚಿನ ಉಬ್ಬರವಿಳಿತದ ಅಲೆಗಳು ಕೇರಳ, ಕರ್ನಾಟಕ ಮತ್ತು ಗೋವಾದ ಕರಾವಳಿ ತೀರವನ್ನು ಅಪ್ಪಳಿಸಿ, ನೂರಾರು ಮನೆಗಳಿಗೆ ಹಾನಿ, ವಿದ್ಯುತ್ ಕಂಬಗಳು ಮತ್ತು ಮರಗಳನ್ನು ಧರೆಗುಳಿಸಿದೆ.
ಇದರಿಂದಾಗಿ ತಗ್ಗು ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರಿಸಲು ಒತ್ತಾಯಿಸಲಾಗಿದೆ. ಇಂದು, ಐಎಂಡಿ ಮುಂಬೈಗೆ ಎಚ್ಚರಿಕೆ ನೀಡಿದ್ದು, ಬಲವಾದ ಗಾಳಿಯೊಂದಿಗೆ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದೆ.