ನಿಜವಾಗಲೂ ಕೊರೊನಾ ಲಸಿಕೆ ಪಡೆದ್ರಾ ನಟಿ ನಯನತಾರಾ? ಹೀಗೊಂದು ಅನುಮಾನ ಹುಟ್ಟಿದ್ದು ಯಾಕೆ?
ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರು ಮೇ 18 ಮಂಗಳವಾರ ಕೋವಿಡ್-19 ಲಸಿಕೆ ಮೊದಲ ಡೋಸ್ ಪಡೆದರು. ಆದರೆ ನಿಜವಾಗಿಯೂ ನಯನತಾರಾ ಲಸಿಕೆ ಪಡೆದ್ರಾ ಅನ್ನೋ ಅನುಮಾನದ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ವಿಘ್ನೇಶ್ ಮತ್ತು ನಯನತಾರಾ ಅವರು ಲಸಿಕೆಯ ಮೊದಲ ಶಾಟ್ ಅನ್ನು ಚೆನ್ನೈನ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಸ್ವೀಕರಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರಗಳನ್ನು ಹಂಚಿಕೊಳ್ಳುವಾಗ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಸುರಕ್ಷಿತವಾಗಿರಿ, ಮನೆಯೊಳಗೆ ಇರಿ ಎಂದು ಅವರು ಹೇಳಿದ್ದಾರೆ.
ಆದರೆ ಫೋಟೋ ಹಂಚಿಕೊಂಡ ಬಳಿಕ ನೆಟ್ಟಿಗರು ಇಬ್ಬರ ಫೋಟೋವನ್ನು ಹೋಲಿಸಿ ನಿರ್ದೇಶಕ ವಿಘ್ನೇಶ್ ಶಿವನ್ ಕೊರೊನಾ ಲಸಿಕೆ ಪಡೆಯುವಾಗ ಕಂಡ ಸಿರಿಂಜ್ ನಟಿ ನಯನತಾರಾ ಪಡೆಯುವಾಗ ಯಾಕೆ ಕಂಡಿಲ್ಲ? ಎಂದು ಪ್ರಶ್ನಿಸಿದ್ದಾರೆ. ನಟಿ ಲಸಿಕೆ ಪಡೆದುಕೊಂಡಂತೆ ನಟಿಸಿದ್ರಾ ಅನ್ನೋ ಅನುಮಾನ ಹೊರಹಾಕಿದ್ದಾರೆ.
ಇದಕ್ಕೆ ಕೆಲವರು ವಿಘ್ನೇಶ್ ಕೊಂಚ ಬಾಗಿದ್ದಾರೆ, ಜೊತೆಗೆ ಅವರ ಸಿರಿಂಜ್ ಉದ್ದವಾಗಿದೆ ಹೀಗಾಗಿ ಅವರ ಸಿರಿಂಜ್ ಹಾಣ್ತಾಯಿದೆ. ಆದರೆ ನಯನತಾರಾ ಅವರಿಗೆ ಹಾಕಿದ ಸಿರಿಂಜ್ ತುಂಬಾ ಚಿಕ್ಕದಿರಬೇಕು, ಅದು ನರ್ಸ್ ಕೈಯಲ್ಲಿ ಕಾಣುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ತಮಿಳು ಚಲನಚಿತ್ರೋದ್ಯಮದ ಹಲವಾರು ತಾರೆಯರು ಮತ್ತು ಪ್ರಸಿದ್ಧ ವ್ಯಕ್ತಿಗಳು ಕೋವಿಡ್-19 ಲಸಿಕೆ ಪಡೆದಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಅವರು ಮೇ 13 ರ ಗುರುವಾರ ಲಸಿಕೆಯ ಮೊದಲ ಶಾಟ್ ತೆಗೆದುಕೊಂಡರು. ಜೊತೆಗೆ ದಕ್ಷಿಣದ ಇತರ ನಟರು ಕಮಲ್ ಹಾಸನ್, ಮೋಹನ್ ಲಾಲ್, ನಾಗಾರ್ಜುನ ಅಕ್ಕಿನೇನಿ ಮತ್ತು ಪುನೀತ್ ರಾಜ್‌ಕುಮಾರ್ ಲಸಿಕೆ ಪಡೆದಿದ್ದಾರೆ.