ಲಾಕ್ಡೌನ್ ಯಶಸ್ವಿಗಾಗಿ ಇನ್ನಷ್ಟು ಬಿಗಿ ಕ್ರಮ – ಬಸವರಾಜ ಬೊಮ್ಮಾಯಿ

ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹಬ್ಬುತ್ತಿದೆ. ಆದರೂ ಲಾಕ್ಡೌನ್ ನಿಯಮಗಳನ್ನು ಜನ ಸಂಪೂರ್ಣವಾಗಿ ಪಾಲಿಸುತ್ತಿಲ್ಲ. ಹೀಗಾಗಿ ಲಾಕ್ಡೌನ್ ನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಲು ಪೊಲೀಸರು ಕೈಗೊಂಡಿರುವ ಕ್ರಮಗಳನ್ನು ಮತ್ತಷ್ಟು ಬಿಗಿ ಗೊಳಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಅನವಶ್ಯಕವಾಗಿ ಮನೆಯಿಂದ ಹೊರಗಡೆ ಬರುತ್ತಿದ್ದಾರೆ. ಯಾದಗಿರಿಯಲ್ಲಿ ಮದುವೆಗೆ ಮೋಟಾರ್ಸೈಕಲ್ ನಲ್ಲಿ ಐದು ಜನ ತೆರಳುತ್ತಿರುವುದು ಬೆಳಕಿಗೆ ಬಂದಿದೆ‌. ಹೀಗಾಗಿ ವಾಹನಗಳನ್ನು ಸೀಜ್ ಮಾಡುವ ಕಾರ್ಯಾಚರಣೆಯನ್ನು ಮತ್ತಷ್ಟು ಕಠಿಣವಾಗಿ ಜಾರಿಗೊಳಿಸಲಾಗುವುದು. ಈಗ ಜಾರಿಯಲ್ಲಿರುವ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸುವ ಮೂಲಕ ಲಾಕ್ಡೌನ್ ಯಶಸ್ವಿಗೊಳಿಸಲಾಗುವುದು ಎಂದು ತಿಳಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿಗಳು ಮೂರ್ನಾಲ್ಕು ದಿನಗಳ ಕಾಲ ನಿರಂತರವಾಗಿ ಲಾಕ್ಡೌನ್ ಜಾರಿ ಮಾಡಿದ್ದಾರೆ. ಆದರೂ ಕೂಡ ಜನ ಗಂಭೀರತೆಯನ್ನು ಅರಿತು ಕೊಳ್ಳುತ್ತಿಲ್ಲ. ಲಾಕ್ಡೌನ್ ಗೆ ಸಹಕಾರ ನೀಡುತ್ತಿಲ್ಲ. ಲಾಕ್ಡೌನ್ ಯಾಕೆ ಜಾರಿಯಾಗಿದೆ ಎಂಬುದನ್ನ ಅರ್ಥಮಾಡಿಕೊಳ್ಳದಿದ್ದರೆ ಕೋವಿಡ್ ನಿಯಂತ್ರಣ ಸಾಧ್ಯವಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಂದಿಗ್ಧದ ಆರ್ಥಿಕ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಬಡಜನರಿಗಾಗಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ‌ ರೀತಿ ಜನರಿಗೆ ಯಾವ ರೀತಿ ಸಹಾಯ ಮಾಡಬೇಕೆಂಬುದರ ಬಗ್ಗೆ ಪರಿಶೀಲನೆ ಮಾಡ್ತೀನಿ ಅಂತ ಹೇಳಿದ್ದಾರೆ. ಇವೆಲ್ಲವೂ ಮುಖ್ಯಮಂತ್ರಿಗಳ ಗಮನಕ್ಕೆ ಇದೆ ಎಂದು‌ ಅವರು ತಿಳಿಸಿದರು‌.

Spread the love

Leave a Reply

Your email address will not be published. Required fields are marked *