ಬಸವಕಲ್ಯಾಣ ಚುನಾವಣೆ: ಸ್ಥಳೀಯ ನಾಯಕ ಧೋರಣೆಯಿಂದ ಕಾಂಗ್ರೆಸ್‌ಗೆ ರವೀಂದ್ರ ರಾಜೀನಾಮೆ!
ಬಸವ ಕಲ್ಯಾಣ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಇದಕ್ಕಾಗಿ ಮೂರು ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿವೆ. ಈ ಮಧ್ಯೆ, ಕಾಂಗ್ರೆಸ್‌ನ ದಲಿತ ಘಟಕದ ಮುಖಂಡ ರವೀಂದ್ರ ಗಾಯಕವಾಡ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಚುನಾವಣಾ ಸಮಯದಲ್ಲಿ ಕಾಂಗ್ರೆಸ್‌ಗೆ ಗಂಭೀರ ಹೊಡೆತ ನೀಡಿದೆ ಎಂದು ಹೇಳಲಾಗಿದೆ.
ಬಸವಕಲ್ಯಾಣದಲ್ಲಿ ಕಾಂಗ್ರೆಸ್‌ನ ಬ್ಲಾಕ್ ಮತ್ತು ನಗರ ಘಟಕದ ಅಧ್ಯಕ್ಷರು ಹಾಗೂ ಮುಖಂಡರು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿರುವ ಅವರು ತಮ್ಮ ಬೆಂಬಲಿಗರೊಂದಿಗೆ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಬಿ.ನಾರಾಯಣರಾವ್ ಅವರು ಗೆಲ್ಲುವುದಕ್ಕಾಗಿ ನಾವು ಶ್ರಮಿಸಿದ್ದೆವು. ಹೀಗಿದ್ದರೂ, ನಮ್ಮನ್ನು ಉಪ ಚುನಾವಣೆಯಿಂದ ದೂರ ಇಡಲಾಗಿದೆ. ಅಲ್ಲದೆ, ಪಕ್ಷದ ಕಚೇರಿ ಉದ್ಘಾಟನೆ, ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಗಳಿಗೂ ನಮ್ಮನ್ನು ಆಹ್ವಾನಿಸಿಲ್ಲ. ಈ ಮೂಲಕ, ಪಕ್ಷದ ಬ್ಲಾಕ್ ಅಧ್ಯಕ್ಷರು ಹಾಗೂ ಮುಖಂಡರು ಕಾಂಗ್ರೆಸ್ ಸಿದ್ಧಾಂತವನ್ನು ಗಾಳಿಗೆ ತೂರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ದಲಿತ ಪ್ಯಾಂಥರ್ ಸಂಘಟನೆಯ ಸಂಚಾಲಕ ಕೂಡ ಆಗಿದ್ದರಿಂದ 115 ಊರುಗಳಲ್ಲಿ ಈ ಸಂಘಟನೆಯ ಶಾಖೆಗಳಿವೆ. ಆದರೆ, ಕಾಂಗ್ರೆಸ್ ಸ್ಥಳೀಯ ನಾಯಕರ ನಿರ್ಲಕ್ಷ್ಯ ಧೋರಣೆಗಳಿಂದಾಗಿ ಸಂಘಟನೆ ಪದಾಧಿಕಾರಿಗಳು ಹಾಗೂ ಪಕ್ಷದಲ್ಲಿನ ಬೆಂಬಲಿಗರು ಸಭೆ ನಡೆಸಿ ಕಾಂಗ್ರೆಸ್‌ನಿಂದ ದೂರ ಉಳಿಯಲು ನಿರ್ಣಯಿಸಿದ್ದೇವೆ ಎಂದು ರವೀಂದ್ರ ಗಾಯಕವಾಡ ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಸಿದ್ದರಾಮಯ್ಯಗೆ ಮತ್ತೊಮ್ಮೆ ಮುಖಭಂಗ; ಸರಗೂರಿನಲ್ಲಿ ಕಾಂಗ್ರೆಸ್ ಸೋಲು!

