ಹೆಚ್‌ಎಸ್‌ ದೊರೆಸ್ವಾಮಿ: 104 ವರ್ಷದ ಹಿರಿಯಜ್ಜರ ಸಾರ್ಥಕ ಬದುಕಿನ ಹೆಮ್ಮೆಯ ಹಾದಿ!

1918ರ ಏಪ್ರಿಲ್ 10ರಂದು (10-4-1918) ಇಂದಿನ ಕನಕಪುರ ತಾಲೂಕಿನ ಹಾರೋಹಳ್ಳಿಯ ಶಾನುಭೋಗರ ಮನೆತನದಲ್ಲಿ ಶ್ರೀನಿವಾಸ ಅಯ್ಯರ್ ಮತ್ತು ಲಕ್ಷಮಮ್ಮನವರ ನಾಲ್ವರು ಗಂಡು ಮಕ್ಕಳಲ್ಲಿ ಕೊನೆಯವರಾಗಿ ಮತ್ತು ಇಬ್ಬರು ತಂಗಿಯರ ಅಣ್ಣನಾಗಿ ಎಚ್.ಎಸ್. ದೊರೆಸ್ವಾಮಿ ಅವರು ಜನಿಸಿದರು. ತಮ್ಮ ಚಿಕ್ಕ ತಾತ, ಅಂದರೆ ತಂದೆಯ ಚಿಕ್ಕಪ್ಪನವರಾದ ಶಾನುಭೋಗ ಶ್ಯಾಮಣ್ಣನವರ ಆರೈಕೆಯಲ್ಲಿ ಅವರ ಬಾಲ್ಯ ಬಹಳ ಸುಖಮಯವಾಗಿ ಕಳೆಯಿತು. ಹಾರೋಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಅಲ್ಲಿಂದ ಮುಂದೆ ಬಿ.ಎಸ್ಸಿ.ವರೆಗೂ ಬೆಂಗಳೂರಿನಲ್ಲಿ ಶಿಕ್ಷಣ ಪಡೆದರು. ಶಾಲಾ ಕಾಲೇಜು ದಿನಗಳಲ್ಲಿ ದೊರೆಸ್ವಾಮಿಯವರು ಉತ್ತಮ ವಾಲಿಬಾಲ್ ಆಟಗಾರರೂ ಆಗಿದ್ದು 1939-41ರಲ್ಲಿ ಸೆಂಟ್ರಲ್ ಕಾಲೇಜು ಟೀಮಿಗೆ ‘ಹಿಟ್ಟರ್’ ಆಗಿ ಆಡುತ್ತಿದ್ದರು; ಕಾಲೇಜನ್ನು ಪ್ರತಿನಿಧಿಸಿ ಅಂತರರಾಜ್ಯ ಟೂರ್ನಿಗಳಲ್ಲಿ ಸಹ ಆಡಿದ್ದರು.

ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ಅವರಲ್ಲಿ ಸಂಘಟನಾ ಚಾತುರ್ಯ ಮೊಳೆತಿತ್ತು. ತಮ್ಮ ಗೆಳೆಯರನ್ನು ಸೇರಿಸಿ ‘ಕಿರಿಯ ತರುಣರ ಸಂಘ’ ಸ್ಥಾಪಿಸಿ ಚರ್ಚಾ ಸ್ಪರ್ಧೆಗಳು ಮತ್ತು ಹಿರಿಯ ಸಾಹಿತಿಗಳಿಂದ ಭಾಷಣಗಳನ್ನು ಏರ್ಪಡಿಸುವುದು ಹಾಗೂ ದೇಶದ ಮಹನೀಯರ ದಿನಾಚರಣೆಗಳನ್ನು ಆಚರಿಸುವುದು ಮಾಡುತ್ತಿದ್ದರು. ಇಂಟರ್‌ಮೀಡಿಯೆಟ್ (ಇಂದಿನ ಪಿಯುಸಿ) ಕಾಲೇಜಿಗೆ ಸೇರುವ ವೇಳೆಗಾಗಲೇ (1937-39ರ ಅವಧಿ) ದೊರೆಸ್ವಾಮಿಯವರಲ್ಲಿ ಸ್ವತಂತ್ರ ಚಿಂತನಾ ಶಕ್ತಿ ಬೆಳೆದಿತ್ತು. ದೇಶದ ಸ್ವಾತಂತ್ರ್ಯ ಚಳವಳಿ ಅವರ ಮೇಲೆ ಪ್ರಭಾವ ಬೀರತೊಡಗಿತ್ತು. ಅಂದಿನ ಅನೇಕ ಮಂದಿ ಚಿಂತಕರ, ಸ್ವಾತಂತ್ರ್ಯ ಹೋರಾಟಗಾರರ ಮಾತು-ಬರಹ-ಭಾಷಣಗಳು, ಪತ್ರಿಕಾ ಲೇಖನಗಳು ಇವರ ಮೇಲೆ ಗಾಢವಾದ ಪರಿಣಾಮ ಉಂಟುಮಾಡುತ್ತಿದ್ದವು. ಸ್ವಾತಂತ್ರ್ಯ ಚಳವಳಿಯನ್ನು ಮತ್ತು ಕಾಂಗ್ರೆಸ್ಸನ್ನು ವಿರೋಧಿಸುತ್ತಿದ್ದ ಅಂದಿನ ಮೈಸೂರು ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರನ್ನು ಕಾಲೇಜು ವಿದ್ಯಾರ್ಥಿ ಸಂಘದ ವಾರ್ಷಿಕ ಸಭೆಗೆ ಆಹ್ವಾನಿಸಿದಾಗ ವಿದ್ಯಾರ್ಥಿಗಳು ಅವರಿಗೆ ಕಪ್ಪು ಬಾವುಟ ಪ್ರದರ್ಶಿಸುವ ಬೆದರಿಕೆ ಹಾಕಿ, ಯಾವ ಮನವೊಲಿಕೆಗೂ ಜಗ್ಗದೆ, ಕೊನೆಗೆ ಮಿರ್ಜಾರ ಕಾರ್ಯಕ್ರಮವೇ ರದ್ದಾಯಿತು.

ಹೋರಾಟದ ಹಾದಿಯ ಕರೆ:

ಅದೇ ವೇಳೆಯಲ್ಲಿ ಮುಂಬೈ ಮೇಯರ್ ಮತ್ತು ಮುಂಬೈ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪ್ರಸಿದ್ಧ ವಕೀಲ ಕೆ.ಎಫ್. ನಾರಿಮನ್ ಬೆಂಗಳೂರಿನಲ್ಲಿ ಕಿಕ್ಕಿರಿದ ಸಭೆಯಲ್ಲಿ ರಾಷ್ಟ್ರೀಯತೆ ಸ್ವಾತಂತ್ರ್ಯ ಇತ್ಯಾದಿ ಕುರಿತು ಆವೇಶಪೂರಿತ ಭಾಷಣ ಮಾಡಿದರು. ಪೊಲೀಸರು ಅವರನ್ನು ಅವಮಾನಕರವಾಗಿ ಬಂಧಿಸಿ ಎಳೆದೊಯ್ದರು. ಕೂಡಲೇ ಜನರಿಗೂ ಪೊಲೀಸರಿಗೂ ನಡುವೆ ಮೆಜೆಸ್ಟಿಕ್ ಟಾಕೀಸಿನವರೆಗೂ ದೊಡ್ಡ ಬೀದಿ ಕಾಳಗ ನಡೆಯಿತು. ಹಲವಾರು ಜನ ಗಾಯಗೊಂಡರು, ಐಜಿಪಿ ಹಾರಿಸಿದ ಗುಂಡಿನಿಂದ ಒಬ್ಬ ಯುವಕ ಸಾವಿಗೀಡಾದ. ನಾರಿಮನ್ ಬಂಧನವನ್ನು ಖಂಡಿಸಿ ಮರುದಿನ ಸೆಂಟ್ರಲ್ ಕಾಲೇಜು ವಿದ್ಯಾರ್ಥಿಗಳು ಮುಷ್ಕರ ನಡೆಸಿದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ದೊರೆಸ್ವಾಮಿಯವರಿಗೂ ಮೊದಲ ಸಲ ಲಾಠಿಯೇಟಿನ ‘ರುಚಿ’ ದೊರೆಯಿತು. ನಾರಿಮನ್ ಭಾಷಣ ದೊರೆಸ್ವಾಮಿಯವರ ಬದುಕಿನ ದಿಕ್ಕನ್ನೇ ಬದಲಿಸುವ ತೀರ್ಮಾನಕ್ಕೆ ಕಾರಣವಾಯಿತು; ಅವರು ಸ್ವಾತಂತ್ರ್ಯ ಚಳವಳಿಗೆ ತಮ್ಮನ್ನು ಅರ್ಪಿಸಿಕೊಳ್ಳಲು ನಿರ್ಧರಿಸಿದರು.

HS Doreswamy – This 99 Year Old Freedom Fighter From Bengaluru Hasn't Stopped Fighting for Causes – Abdul Kalam Fan Club

1942ರಲ್ಲಿ ಬಿ.ಎಸ್ಸಿ. ಮುಗಿಸಿ ಜೂನ್ ತಿಂಗಳಲ್ಲಿ ಗಾಂಧಿನಗರ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರಿದರಾದರೂ ಕೇವಲ ಎರಡೇ ತಿಂಗಳಲ್ಲಿ ಆ ವೃತ್ತಿ ಕೊನೆಗೊಂಡಿತು. ಅದೇ ಆಗಸ್ಟ್ 9ರಂದು ಆರಂಭವಾದ ಕ್ವಿಟ್ ಇಂಡಿಯ ಚಳವಳಿಯಲ್ಲಿ ದೊರೆಸ್ವಾಮಿಯವರೂ ಪೂರ್ಣವಾಗಿ ತೊಡಗಿಸಿಕೊಂಡರು. ಅದೇ ವರ್ಷ ಡಿಸೆಂಬರಿನಲ್ಲಿ, ಚಳವಳಿಗಾರರಿಗೆ ಕೈಬಾಂಬುಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಅವರನ್ನು ಬಂಧಿಸಿ ಒಂದು ವರ್ಷ ನಾಲ್ಕು ತಿಂಗಳು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಯಿತು. ಜೈಲಿನಿಂದ ಹೊರಬಂದ ಬಳಿಕ ಅವರು ಪುನಃ ವೃತ್ತಿಗೆ ಹಿಂದಿರುಗದೆ ಸ್ವಾತಂತ್ರ್ಯ ಚಳವಳಿಯ ಜೊತೆಜೊತೆಯಲ್ಲಿ ಅದಕ್ಕೆ ಪೂರಕವಾಗಿ ಪುಸ್ತಕ ಪ್ರಕಟಣೆ, ನಂತರ ಪತ್ರಿಕಾ ಪ್ರಕಟಣೆ ಮುಂತಾದ ಚಟುವಟಿಕೆಗಳ ಹಾದಿಯನ್ನು ಆಯ್ದುಕೊಂಡರು.

ದೊರೆಸ್ವಾಮಿಯವರಿಗೆ ಹೈಸ್ಕೂಲಿನಲ್ಲಿ ಉಪಪಠ್ಯವಾಗಿದ್ದ ಗಾಂಧೀಜಿಯವರ My Early Life ಕೃತಿಯಲ್ಲಿನ “ಸಮಾಜ ಸೇವಕರು ಸ್ವಯಂಪ್ರೇರಿತವಾಗಿ ಬಡತನವನ್ನು ಅಪ್ಪಿಕೊಳ್ಳಬೇಕು (A social worker should hug voluntary pioverty)” ಎಂಬ ಮಾತು ಅವರ ಮೇಲೆ ಅಚ್ಚಳಿಯದ ಪ್ರಭಾವ ಬೀರಿತ್ತು. ಅವರು ಮುಂದಿನ ತಮ್ಮ ಬದುಕನ್ನು ಅದೇ ರೀತಿ ರೂಪಿಸಿಕೊಂಡು ಬದುಕುತ್ತಿದ್ದಾರೆ. ಸ್ವಂತದ್ದೆನ್ನುವ ಯಾವ ಆಸ್ತಿಪಾಸ್ತಿಯನ್ನೂ ಹೊಂದಿಲ್ಲದ ಅವರು ಇಂದಿಗೂ ಬಾಡಿಗೆ ಮನೆಯಲ್ಲಿ, ಕೇಂದ್ರ ಸರ್ಕಾರದಿಂದ ಬರುವ ಸ್ವಾತಂತ್ರ್ಯ ಯೋಧರ ಮಾಸಾಶನವನ್ನಾಧರಿಸಿ ಬದುಕುತ್ತಿದ್ದಾರೆ.

ಕ್ವಿಟ್ ಇಂಡಿಯ ಹೋರಾಟದಲ್ಲಿ

ಆಗಸ್ಟ್ 9ರ ರಾತ್ರಿಯೇ ದೇಶಾದ್ಯಂತ ಕಾಂಗ್ರೆಸ್ ನಾಯಕರನ್ನೆಲ್ಲ ಬಂಧಿಸಿದ ಪರಿಣಾಮವಾಗಿ ಮೈಸೂರು ಸಂಸ್ಥಾನದಲ್ಲಿ ಕೂಡ ಹೋರಾಟ ಮುನ್ನಡೆಸಬಲ್ಲ ನಾಯಕರಿಲ್ಲದಂತಾಗಿದ್ದಾಗ, ಗಾಂಧೀಜಿಯ “ಮಾಡು ಇಲ್ಲವೆ ಮಡಿ” ಕರೆಗೆ ಓಗೊಟ್ಟು ವಿದ್ಯಾರ್ಥಿಗಳು ದೊಡ್ಡ ಪ್ರಮಾಣದಲ್ಲಿ ಸಂಘಟಿತರಾಗಿ ಸಂಸ್ಥಾನದ ಉದ್ದಗಲಕ್ಕೂ ಹೋರಾಟ ಹರಡುವಂತೆ ಮಾಡಿದ್ದರು. ಆದರೆ ಎರಡು ತಿಂಗಳು ಕಳೆಯುವ ಹೊತ್ತಿಗೆ ಅದರ ಕಾವು ಕಡಿಮೆಯಾಗುವಂತೆ ಕಂಡಾಗ, ಕಾರ್ಮಿಕ ಸಮುದಾಯವನ್ನೂ ಅದರ ಜೊತೆ ತೊಡಗಿಸುವ ಹೊಣೆ ದೊರೆಸ್ವಾಮಿಯವರ ಹೆಗಲಿಗೆ ಬಂದಿತು. ಅವರ ಸಂಘಟನಾ ಚತುರತೆಯ ಫಲವಾಗಿ ಬೆಂಗಳೂರಿನ ದೊಡ್ಡ ಬಟ್ಟೆ ಮಿಲ್ಲುಗಳಾದ ಬಿನ್ನಿ, ಮಿನರ್ವ ಮತ್ತು ರಾಜಾ ಮಿಲ್ಲುಗಳ 8000 ಕಾರ್ಮಿಕರು 14 ದಿನಗಳ ಕಾಲ ಕಾರ್ಖಾನೆಗಳನ್ನು ಬಂದ್ ಮಾಡಿದರು. ಅದರ ಪ್ರಭಾವದಿಂದ ಕೋಲಾರದ ಚಿನ್ನದ ಗಣಿಗಳು, ಭದ್ರಾವತಿಯ ಕಬ್ಬಿಣ ಮತ್ತು ಕಾಗದ ಕಾರ್ಖಾನೆಗಳು ಹಾಗೂ ಬೆಂಗಳೂರು, ದಾವಣಗೆರೆ ಮುಂತಾದೆಡೆಗಳ ಇನ್ನೂ ಹಲವಾರು ಕಾರ್ಖಾನೆಗಳೂ ಸಹ ದೀರ್ಘಕಾಲ ಬಂದ್ ಆದವು. ಇದೆಲ್ಲವೂ ಸ್ವಾತಂತ್ರ್ಯ ಹೋರಾಟದಲ್ಲಿ ಬಹುದೊಡ್ಡ ಕೊಡುಗೆ ನೀಡಿತು.

“ಮೈಸೂರು ಚಲೊ” ಮತ್ತು ‘‘ಪೌರ ವಾಣಿ’’, ‘‘ಪೌರವೀರ’’

1947ರ ಸ್ವಾತಂತ್ರ್ಯಕ್ಕೂ ಮೊದಲೇ ಅಖಿಲ ಮೈಸೂರು ಕಾಂಗ್ರೆಸ್ ಕಮಿಟಿಯೊಳಗೆ “ಪ್ರಗತಿ ಪಕ್ಷ” ಎಂಬ ಒತ್ತಡ ಗುಂಪೊಂದನ್ನು ದೊರೆಸ್ವಾಮಿ ಮತ್ತು ಅವರ ಯುವ ಮಿತ್ರರು ಹುಟ್ಟುಹಾಕಿದ್ದರು. ಕಾಂಗ್ರೆಸ್ ಕಮಿಟಿಯೊಳಗೆ ತೂರಿಕೊಂಡಿದ್ದ ಕೆಲವು ಪಟ್ಟಭದ್ರ ಹಿರಿತಲೆಗಳು ಕೈಗೊಳ್ಳುತ್ತಿದ್ದ ತಪ್ಪು ನಿರ್ಧಾರಗಳನ್ನು ಪ್ರತಿರೋಧಿಸುವುದು, ಸ್ವಾತಂತ್ರ್ಯ ಹೋರಾಟವನ್ನು ತೀವ್ರಗೊಳಿಸುವುದು ಅದರ ಉದ್ದೇಶವಾಗಿತ್ತು. ತನ್ನ ವಿಚಾರಗಳನ್ನು ಜನರ ನಡುವೆ ಪ್ರಭಾವಶಾಲಿಯಾಗಿ ಪ್ರಚುರಪಡಿಸುವುದಕ್ಕಾಗಿ ಅದು ‘ಪೌರವಾಣಿ’ ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿತ್ತು. ಭಾರತ ಒಕ್ಕೂಟದಲ್ಲಿ ಸೇರ್ಪಡೆಗೊಳ್ಳಲು ನಿರಾಕರಿಸಿದ್ದ ಮೈಸೂರು ಅರಸರ ಸಂಸ್ಥಾನದ ವಿರುದ್ಧ ಈ ಪತ್ರಿಕೆ ಅತ್ಯಂತ ಕಟುವಾಗಿ ವಿಮರ್ಶಿಸುತ್ತ, ಚುನಾಯಿತ ‘ಜವಾಬ್ದಾರಿ ಸರ್ಕಾರ’ ಸ್ಥಾಪಿಸಬೇಕೆಂಬ ಕಾಂಗ್ರೆಸ್ ಒತ್ತಾಯದ ಬಗ್ಗೆ ಜನರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸುತ್ತಿತ್ತು. ಅದರ ಸಂಪಾದಕರಾಗಿದ್ದ ಭದ್ರಣ್ಣನವರು 1947ರ ಜನವರಿಯಲ್ಲಿ ಅಕಸ್ಮಾತ್ ನಿಧನರಾದಾಗ ಅದರ ಸಂಪಾದಕತ್ವದ ಹೊಣೆ ಏಕಾಏಕಿಯಾಗಿ ದೊರೆಸ್ವಾಮಿಯವರ ಹೆಗಲಿಗೆ ಬಂದಿತು. ಆ ವೇಳೆಗೆ ಮೈಸೂರಿನಲ್ಲಿ ‘ಸಾಹಿತ್ಯ ಮಂದಿರ’ ಎಂಬ ಪುಸ್ತಕ ಪ್ರಕಟಣಾ ಸಂಸ್ಥೆ ಪ್ರಾರಂಭಿಸಿ, ಲಾಭದಾಯಕವಾಗಿ ನಡೆಯುತ್ತಿದ್ದ ಅದನ್ನಾಧರಿಸಿ ಮೈಸೂರನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಳ್ಳಲು ನಿರ್ಧರಿಸಿದ್ದ ದೊರೆಸ್ವಾಮಿಯವರು ಮತ್ತೊಮ್ಮೆ ಅನಿಶ್ಚಿತ ಬದುಕನ್ನು ಪ್ರವೇಶಿಸುವ ನಿರ್ಧಾರ ಕೈಗೊಂಡು ಹೊರಟುಬಿಟ್ಟರು.

This 102-Year-Old Bengaluru Man Just Finished A 5-Day Protest Against CAA

ಜವಾಬ್ದಾರಿ ಸರ್ಕಾರದ ಸ್ಥಾಪನೆಗೆ ಒತ್ತಾಯಿಸುವುದಕ್ಕಾಗಿ ‘ಮೈಸೂರು ಚಲೊ’ ಚಳವಳಿ ನಡೆಸಲು ಕಾಂಗ್ರೆಸ್ ಕಾರ್ಯಕ್ರಮ ಹಾಕಿತ್ತು. ಅದನ್ನು ವಿವರಿಸುವ ಸರಣಿ ಲೇಖನಗಳನ್ನು ಪ್ರಕಟಿಸಿದ್ದಕ್ಕಾಗಿ ಪೌರವಾಣಿಯ ಮೇಲೆ ಮೈಸೂರು ಸರ್ಕಾರ ನಿರ್ಬಂಧ (ಸೆನ್ಸಾರ್‌ಶಿಪ್) ಹೇರಿತು. ಅದಕ್ಕೆ ಪ್ರತಿಯಾಗಿ ಪತ್ರಿಕೆಯ ಬಹಿರಂಗ ಪ್ರಕಟಣೆಯನ್ನು ನಿಲ್ಲಿಸಿದ ದೊರೆಸ್ವಾಮಿಯವರು, ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಹಿಂದೂಪುರದಿಂದ 1947ರ ಸೆಪ್ಟೆಂಬರ್ 7ರಿಂದ ರಹಸ್ಯವಾಗಿ ಪತ್ರಿಕೆ ಪ್ರಕಟಿಸತೊಡಗಿದರು. ಅದರ ಪ್ರಸಾರ 10 ಸಾವಿರಕ್ಕೆ ಏರಿತ್ತು. ಕೇವಲ 38 ದಿನಗಳ ಬಳಿಕ ಪತ್ರಿಕೆಗೆ ಸಂಸ್ಥಾನದೊಳಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಯಿತು. ಆಗ ‘ಪೌರವೀರ’ ಹೆಸರಿನಿಂದ ಪತ್ರಿಕೆಯನ್ನು ಮುಂದುವರಿಸಿದರು. ಆ ವೇಳೆಗೆ ಸಂಸ್ಥಾನದ ಸರ್ಕಾರ ಪ್ರಜಾ ಶಕ್ತಿಗೆ ಮಣಿದಿತ್ತು. 24-10-1947ರಂದು ಮೈಸೂರಿನಲ್ಲಿ ‘ಜವಾಬ್ದಾರಿ ಸರ್ಕಾರ’ ಸ್ಥಾಪನೆಯಾಗಿ ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾದರು.

ಅದಕ್ಕೂ ಮೊದಲೇ ಹಿಂದೂಪುರದಲ್ಲಿ ಸತ್ಯಾಗ್ರಹಿಗಳೆಲ್ಲ ಸೇರಿ ಮೈಸೂರು ಸಂಸ್ಥಾನದಲ್ಲಿ ‘ಆಜಾದ್ ಸರ್ಕಾರ’ವನ್ನು ಸ್ಥಾಪನೆ ಮಾಡಿರುವುದಾಗಿ ಒಂದು ‘ಪ್ರಸಿದ್ಧ ಪತ್ರಿಕೆ’ (ಗೆಜೆಟ್‌ನಂತೆ) ಹೊರಡಿಸಿದರು. ಅಲ್ಲಿಂದಲೇ ಜವಾಬ್ದಾರಿ ಸರ್ಕಾರದ ಸ್ಥಾಪನೆಗಾಗಿ ಗಡಿಭಾಗದ ಹಳ್ಳಿ-ಪೇಟೆ-ಪಟ್ಟಣಗಳಲ್ಲಿ ಪ್ರಬಲವಾಗಿ ಸಂಘಟನೆ ಮಾಡಿದರು. ಜವಾಬ್ದಾರಿ ಸರ್ಕಾರದ ಸ್ಥಾಪನೆಯ ಬಳಿಕ ದೊರೆಸ್ವಾಮಿಯವರು ಬೆಂಗಳೂರಿಗೆ ಹಿಂದಿರುಗಿ ಅಲ್ಲಿಂದಲೇ ಪೌರವಾಣಿಯನ್ನು ಪುನಃ ಪ್ರಕಟಿಸತೊಡಗಿದರು. ಅದು ಮುಂದೆ ಕರ್ನಾಟಕ ಏಕೀಕರಣ ಚಳವಳಿಯೂ ಸೇರಿದಂತೆ ಅನೇಕ ರೀತಿಗಳಲ್ಲಿ ಕರ್ನಾಟಕದ ಜನತೆಯ ಏಳಿಗೆಗಾಗಿ ಶ್ರಮಿಸಿತು.

ಕರ್ನಾಟಕ ಏಕೀಕರಣ ಚಳವಳಿ

ಸ್ವಾತಂತ್ರ್ಯ ಸಾಧನೆ ಮತ್ತು ಜವಾಬ್ದಾರಿ ಸರ್ಕಾರದ ಸ್ಥಾಪನೆಯ ಬಳಿಕ ಕರ್ನಾಟಕ ಏಕೀಕರಣ ಚಳವಳಿಯಲ್ಲೂ ದೊರೆಸ್ವಾಮಿ ಮತ್ತು ಅವರ ಯುವ ತಂಡ ದಣಿವರಿಯದೆ ದುಡಿಯಿತು. ಅದಕ್ಕಾಗಿ ಅವರ ಒಂದು ನಿಯೋಗ ದೆಹಲಿಗೆ ಹೋಗಿ ನೆಹರು, ರಾಜೇಂದ್ರ ಪ್ರಸಾದ್, ವಲ್ಲಭಭಾಯಿ ಪಟೇಲ್ ಒಳಗೊಂಡಂತೆ ಹಲವಾರು ಕೇಂದ್ರ ನಾಯಕರನ್ನು ಭೇಟಿ ಮಾಡಿತು. ಪಟೇಲರ ‘ಆಣತಿ’ಯಂತೆ ‘ಏಕೀಕರಣವನ್ನು ಸುಗಮಗೊಳಿಸುವುದಕ್ಕಾಗಿ ಮೈಸೂರು ಮಹಾರಾಜರು ತಮ್ಮ ಸಿಂಹಾಸನವನ್ನು ತೊರೆಯಬೇಕು’ ಎಂಬ ಮನವಿ ರೂಪದ ಒತ್ತಾಯವನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ಪ್ರಜೆಗಳಲ್ಲೂ ರಾಜರ ಆಂತರಿಕ ವಲಯದಲ್ಲೂ ದೊಡ್ಡ ಸಂಚಲನ ಸೃಷ್ಟಿಸಿದರು. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ ಈ ತಂಡ ಜನರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಿತು. ಇದೆಲ್ಲವೂ ಏಕೀಕರಣಕ್ಕೆ ದೊಡ್ಡ ಕೊಡುಗೆ ನೀಡಿತು ಎಂಬುದರಲ್ಲಿ ಸಂಶಯವಿಲ್ಲ.

ತುರ್ತು ಪರಿಸ್ಥಿತಿಯಲ್ಲಿ ಮತ್ತು ಆ ನಂತರವೂ…

ತುರ್ತು ಪರಿಸ್ಥಿತಿಗೆ ಮೊದಲು 1973ರಲ್ಲಿ ಜೆಪಿಯವರು ಇಂದಿರಾ ಗಾಂಧಿಯ ಭ್ರಷ್ಟಾಚಾರದ ವಿರುದ್ಧ ಆರಂಭಿಸಿದ ದೇಶವ್ಯಾಪಿ ಆಂದೋಲನದ ಕರ್ನಾಟಕದ ಕಾರ್ಯಭಾರದಲ್ಲಿ ದೊರೆಸ್ವಾಮಿಯವರು ತಮ್ಮ ಮಿತ್ರರೊಂದಿಗೆ ಸಕ್ರಿಯ ಪಾತ್ರ ವಹಿಸಿದರು. ಈ ಚಳವಳಿಯಿಂದಾಗಿ ತನ್ನ ಅಧಿಕಾರದ ಕುರ್ಚಿ ಅಲುಗಾಡತೊಡಗಿದ್ದನ್ನು ಮನಗಂಡ ಇಂದಿರಾ ಗಾಂಧಿ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದರು. ಅದನ್ನು ವಿರೋಧಿಸಿ ಮೊಹಲ್ಲ ಮೊಹಲ್ಲಗಳಲ್ಲಿ ಬಹಿರಂಗ ಸಭೆ ನಡೆಸಿ ಬಂಧನಕ್ಕೆ ಒಳಗಾಗುವ ತೀರ್ಮಾನವನ್ನು ಸರ್ವೋದಯ ಮಂಡಲದ ತಂಡದವರು ತೆಗೆದುಕೊಂಡರು. ದೊರೆಸ್ವಾಮಿ ಮತ್ತು ಗರುಡ ಶರ್ಮ ಅವರು ಇಂದಿರಾ ಗಾಂಧಿಯವರಿಗೊಂದು ಬಹಿರಂಗ ಪತ್ರ ಬರೆದರು. ಅದರಲ್ಲಿ ಅವರ ಅಧಿಕಾರವು ವಸಾಹತುಶಾಹಿ ಬ್ರಿಟಿಷರಿಗಿಂತಲೂ ಕ್ರೂರವಾದ ಸರ್ವಾಧಿಕಾರವನ್ನು ಹೇರಿರುವುದಾಗಿ ದೃಷ್ಟಾಂತಗಳ ಸಮೇತ ಆರೋಪಿಸಿದ್ದರು. ಇದರ ಫಲವಾಗಿ ಮತ್ತೊಮ್ಮೆ ದೊರೆಸ್ವಾಮಿಯವರ ಬಂಧನವಾಯಿತು. ಅವರು ನಾಲ್ಕು ತಿಂಗಳ ಕಾಲ ಜೈಲಿನಲ್ಲಿದ್ದರು. ಆದರೆ ಅವರ ಮೇಲೆ ‘ಭಾರತ ಸುರಕ್ಷಾ ಕಾಯ್ದೆ’ (DIR) ಅನ್ವಯ ಹಾಕಿದ್ದ ಪ್ರಕರಣವನ್ನು ನ್ಯಾಯಾಧೀಶರು ಮಾನ್ಯ ಮಾಡದ ಕಾರಣ ಅವರು ಬಿಡುಗಡೆಯಾದರು.

Steel will of the freedom struggle of India - Telegraph India

ಆ ನಂತರವೂ ದೊರೆಸ್ವಾಮಿಯವರು ಮೈಸೂರು ಪತ್ರಕರ್ತರ ಸಂಘ, ಅಖಿಲ ಭಾರತ ಕಾರ್ಯನಿರತ ಪತ್ರಕತ್ರ ಸಂಘ, ಪತ್ರಕರ್ತರ ಸಹಕಾರಿ ಬ್ಯಾಂಕ್, ಭಾರತ ಸೇವಕ ಸಮಾಜ, ಭೂದಾನ ಚಳವಳಿ, ಹನುಮಂತನ ನಗರ ಸಹಕಾರಿ ಬ್ಯಾಂಕ್, ಭಾರತ ಮಾತಾ ವಿದ್ಯಾ ಮಂದಿರ ಶಾಲೆ, ಶಿಕ್ಷಕರ ತರಬೇತಿ ಕಾಲೇಜು, ಮದ್ಯಪಾನ ನಿಷೇಧ, ಕೈಗಾ ಅಣುಸ್ಥಾವರ ವಿರೋಧಿ ಚಳವಳಿ, ಹರಿಹರ ಪಾಲಿಫೈಬರ್ಸ್ ವಿರುದ್ಧದ ಹೋರಾಟ, ನೈಸ್, ಕಾರ್ಗಿಲ್‌ನಂತಹ ಕಂಪನಿಗಳ ವಿರುದ್ಧದ ಹೋರಾಟಗಳು, ಮಂಡೂರು ಹೋರಾಟ, ಭೂಗಳ್ಳರ ಭೂ ಕಬಳಿಕೆ ವಿರೋಧಿ ಹೋರಾಟ, ಭ್ರಷ್ಟಾಚಾರ ವಿರೋಧಿ ಚಳವಳಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರೋಧಿ ಹೋರಾಟಗಳು, ಕಾವೇರಿ ಚಳವಳಿ, ಭೂಮಿ ಮತ್ತು ವಸತಿ ವಂಚಿತರ ಹೋರಾಟ, ……. ಹೀಗೆ ಒಂದಿಲ್ಲೊಂದು ರಚನಾತ್ಮಕ ಚಟುವಟಿಕೆ/ಚಳವಳಿ/ಹೋರಾಟಗಳಲ್ಲಿ ಅವಿಶ್ರಾಂತವಾಗಿ ತಮ್ಮನ್ನು ತೊಡಗಿಸಿಕೊಂಡೇ ಬಂದಿದ್ದಾರೆ.

ಇಂದು ದೇಶವನ್ನು ಆಕ್ರಮಿಸಿರುವ ಬ್ರಾಹ್ಮಣಶಾಹಿ-ಬಂಡವಾಳಶಾಹಿ-ಫ್ಯಾಸಿಸ್ಟ್ ಆಳ್ವಿಕೆಯ ವಿರುದ್ಧ ಸಿಡಿದೆದ್ದಿದ್ದಾರೆ. ‘ಅಚ್ಛೇ ದಿನ್’ ಮುಂತಾದ ಬಣ್ಣಬಣ್ಣದ ಆಶ್ವಾಸನೆಗಳ ಮೂಲಕ ಅಧಿಕಾರ ಹಿಡಿದು ಸುಮಾರು ಏಳು ವರ್ಷಗಳ ನಂತರವೂ ಮೋದಿ-ಶಾ ಬಿಜೆಪಿ ಸರ್ಕಾರವು ಜನಸಾಮಾನ್ಯರ ಒಂದೇಒಂದು ಸಮಸ್ಯೆಯನ್ನೂ ಪರಿಹರಿಸದೆ, ಅದರ ಬದಲು ನೋಟು ರದ್ದತಿ, ಜಿಎಸ್‌ಟಿ, ಮತ್ತಿತರ ಕಾರ್ಪೊರೇಟ್ ಪರ ನೀತಿಗಳಿಂದ ಆರ್ಥಿಕತೆಯನ್ನು ದಿವಾಳಿಯೆಬ್ಬಿಸಿ, ಕಳೆದ ಐದು ದಶಕಗಳಲ್ಲೆಂದೂ ಇರದಿದ್ದ ಪ್ರಮಾಣದಲ್ಲಿ ನಿರುದ್ಯೋಗ ಸೃಷ್ಟಿಗೆ ಕಾರಣವಾಗಿದೆ.

“ದೇಶವನ್ನು ಮಾರಾಟ ಮಾಡಲು ಬಿಡುವುದಿಲ್ಲ” ಎಂದು ನಂಬಿಸಿ, ಇಂದು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮುಂತಾದ ಕ್ರಮಗಳಿಂದ ದೇಶವನ್ನೇ ಹರಾಜು ಹಾಕುತ್ತಿದೆ. ತನ್ನೆಲ್ಲಾ ವಿಫಲತೆಗಳನ್ನೂ ಲೋಪಗಳನ್ನೂ ಮರೆಮಾಚಲು ಪೌರತ್ವ ಕಾಯ್ದೆ ತಂದು ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ, ಅದನ್ನು ಪ್ರಶ್ನಿಸುವವರನ್ನು ದೇಶದ್ರೋಹದ ಆರೋಪದಲ್ಲಿ ಸೆರೆಗೆ ತಳ್ಳುವುದು, ಬಡಿದು ಕೊಲ್ಲುವುದು, ದೇಶದ ಪ್ರತಿಷ್ಠಿತ ವಿದ್ಯಾ ಕೇಂದ್ರಗಳ ನಾಶ … ಇವೇ ಮುಂತಾದ ರೀತಿಗಳಲ್ಲಿ ಹಿಂದೆಂದೂ ಇಲ್ಲದಿದ್ದ ರೀತಿಯಲ್ಲಿ ಸರ್ವಾಧಿಕಾರ ಮತ್ತು ದುರಾಡಳಿತ ನಡೆಸುತ್ತಿದೆ. ಇದನ್ನು ವಿರೋಧಿಸಿ, ‘ನಾಲ್ಕು ವರ್ಷಗಳ ದೀರ್ಘಾವಧಿಯ ಚಳವಳಿ’ಗೆ ಚಾಲನೆ ನೀಡಿರುವ ದೊರೆಸ್ವಾಮಿಯವರು ಈ 104ನೇ ವಯಸ್ಸಿನಲ್ಲೂ ಬಿಜೆಪಿ-ಆರೆಸ್ಸೆಸ್ ಕೂಟದ ಫ್ಯಾಸಿಸ್ಟ್ ಹಾದಿಗೆ ಅಡ್ಡಗಾಲಾಗಿದ್ದಾರೆ. ಆದರೆ ದೇಶಪ್ರೇಮಿಗಳಾದ ಎಲ್ಲ ಪ್ರಜಾಪ್ರಭುತ್ವ ಪ್ರಿಯರಿಗೂ ಹೋರಾಟದ ಬತ್ತಲಾರದ ಚಿಲುಮೆಯಾಗಿದ್ದಾರೆ.

ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಬಿಜೆಪಿ ವಿರುದ್ದ ಆಕ್ರೋಶ; 08 ಪದಾಧಿಕಾರಿಗಳು ಪಕ್ಷಕ್ಕೆ ರಾಜೀನಾಮೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights