ಶತಾಯುಷಿ, ಸ್ವಾತಂತ್ರ್ಯ ಸೇನಾನಿ ಹೆಚ್‌ಎಸ್‌ ದೊರೆಸ್ವಾಮಿ ಇನ್ನಿಲ್ಲ!

ಬ್ರಿಟಿಷರ ವಿರುದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಶತಾಯುಷಿ, ಹಿರಿಯಜ್ಜ, ಗಾಂಧೀವಾದಿ ಹೆಚ್‌ಎಸ್‌ ದೊರೆಸ್ವಾಮಿ ಅವರು ಇಹಲೋಹ ತ್ಯಜಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರು, ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ಸೋಂಕಿಗೆ ಒಳಗಾಗಿ ಕೋವಿಡ್‌ ಗೆದ್ದು ಬಂದಿದ್ದ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

1918ರ ಏಪ್ರಿಲ್ 10ರಂದು (10-4-1918) ಇಂದಿನ ಕನಕಪುರ ತಾಲೂಕಿನ ಹಾರೋಹಳ್ಳಿಯ ಜನಿಸಿದ್ದ ಎಚ್.ಎಸ್.ದೊರೆಸ್ವಾಮಿಯವರು, ತಮ್ಮ ಬಾಲ್ಯದಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಬೆಳೆಸಿಕೊಂಡು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು.

ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಿದ್ದ ಅವರು ಹಲವು ಬಾರಿ ಜೈಲು ವಾಸ ಅನುಭವಿಸಿದ್ದರು.

ಸ್ವಾತಂತ್ರ್ಯಾ ನಂತರವೂ, ಕರ್ನಾಟಕ ಏಕೀಕರಣ ಚಳುವಳಿ, ಕಾಗೋಡು ಸತ್ಯಾಗ್ರಹ, ಗೋಕಾಕ್‌ ಚಳುವಳಿಗಳಲ್ಲಿ ಜನರ ಜೊತೆಗಿದ್ದರು. ಸರ್ಕಾರಗಳ ಜನ ವಿರೋಧಿ ನೀತಿಗಳನ್ನು ಕಠುವಾಗಿ ಟೀಕಿಸುತ್ತಿದ್ದ ಅವರು, ಜನಪರ ಹೋರಾಟಗಳಲ್ಲಿ ಭಾಗಿಯಾಗಿದ್ದರು.

ಭೂದಾನ ಚಳವಳಿ, ಮದ್ಯಪಾನ ನಿಷೇಧ, ಕೈಗಾ ಅಣುಸ್ಥಾವರ ವಿರೋಧಿ ಚಳವಳಿ, ಹರಿಹರ ಪಾಲಿಫೈಬರ್ಸ್ ವಿರುದ್ಧದ ಹೋರಾಟ, ನೈಸ್, ಕಾರ್ಗಿಲ್‌ನಂತಹ ಕಂಪನಿಗಳ ವಿರುದ್ಧದ ಹೋರಾಟಗಳು, ಮಂಡೂರು ಹೋರಾಟ, ಭೂಗಳ್ಳರ ಭೂ ಕಬಳಿಕೆ ವಿರೋಧಿ ಹೋರಾಟ, ಭ್ರಷ್ಟಾಚಾರ ವಿರೋಧಿ ಚಳವಳಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರೋಧಿ ಹೋರಾಟಗಳು, ಕಾವೇರಿ ಚಳವಳಿ, ಭೂಮಿ ಮತ್ತು ವಸತಿ ವಂಚಿತರ ಹೋರಾಟ, ……. ಹೀಗೆ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ದೊರೆಸ್ವಾಮಿಯವರು ತಮ್ಮ 104ನೇ ವಯಸ್ಸಿನಲ್ಲಿಯೂ ಆತ್ಮ ಸ್ಥೈರ್ಯದ ಜೊತೆಗೆ ಹೋರಾಟಗಳಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ದೇಶದಲ್ಲಿ ಫ್ಯಾಸಿಸ್ಟ್‌ ಸರ್ವಾಧಿಕಾರ ಸ್ಥಾಪಿಸಲು ಮೋದಿ ಸರ್ಕಾರ ಯತ್ನಿಸುತ್ತಿದೆ: ಹೆಚ್‌ಎಸ್‌ ದೊರೆಸ್ವಾಮಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights