ದೇಶದಲ್ಲಿ ಫ್ಯಾಸಿಸ್ಟ್‌ ಸರ್ವಾಧಿಕಾರ ಸ್ಥಾಪಿಸಲು ಮೋದಿ ಸರ್ಕಾರ ಯತ್ನಿಸುತ್ತಿದೆ: ಹೆಚ್‌ಎಸ್‌ ದೊರೆಸ್ವಾಮಿ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ಫ್ಯಾಸಿಸ್ಟ್‌ ಸರ್ವಾಧಿಕಾರವನ್ನು ತರಲು ಹವಣಿಸುತ್ತಿವೆ. ಒಂದು ದೇಶ -ಒಂದು ರೇಷನ್‌ ಕಾರ್ಡ್‌ ಎನ್ನುತ್ತಿರುವ ಬಿಜೆಪಿ ಸರ್ಕಾರ, ದೇಶದಲ್ಲಿ ಒಂದು ಭಾಷೆ, ಒಂದು ದೇವರು, ಒಂದೇ ಧರ್ಮ ಎಂಬ ಹೆಸರಿನಲ್ಲಿ ಭಾರತದ ಸಾರ್ವಭೌಮತೆ, ಜಾತ್ಯಾತೀತೆ ಮತ್ತು ಭ್ರಾತೃತ್ವವನ್ನು ನಾಶಮಾಡಿ ಹಿಂದೂ ರಾಷ್ಟ್ರವೆಂದು ಘೋಷಿಸುವ ಸಂಚು ನಡೆಸುತ್ತಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್‌.ಎಸ್‌.ದೊರೆಸ್ವಾಮಿಯವರು ಹೇಳಿದ್ದಾರೆ.

ಸಂಘ ಪರಿವಾರದ ಸಂಘಿಗಳಿಂದು ಹತ್ಯೆಗೀಡಾದ ಖ್ಯಾತ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶರ ನೆನಪಿನ ಭಾಗವಾಗಿ  ಗೌರಿ ಮೀಡಿಯಾ ಟ್ರಸ್ಟ್ ಆಯೋಜಿಸಿದ್ದ ಗೌರಿ ನೆನಪು ವೆಬಿನಾರ್‌ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ದೊರೆಸ್ವಾಮಿಯವರು, ದಿಟ್ಟ ಪರ್ತಕರ್ತೆ, ನಮ್ಮೆಲ್ಲರ ಒಡನಾಡಿ ಗೌರಿ ಲಂಕೇಶ್‌ ಅವರು ಇಂದು ಲಕ್ಷಾಂತರ ಜನರ ಮನೆ-ಮನದಲ್ಲಿ ನೆಲೆಸಿದ್ದಾರೆ. ಹತ್ಯೆಯಾಗಿ ಮೂರು ವ‍ರ್ಷ ಕಳೆದರೂ ನಾನೂ ಗೌರಿ ಎಂಬ ಘೋಷ ಎಲ್ಲೆಡೆ ಕೇಳುತ್ತಿದೆ. ಗೌರಿಯವರ ಹೆಸರಿನಲ್ಲಿ, ಅವರ ಆಶಯಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಗೌರಿ ಮೀಡಿಯಾ ಮುಂದಡಿ ಇಟ್ಟಿದೆ. ಸಂಘ ಪರಿವಾರದ ಸಂಚನ್ನು ಹಿಮ್ಮೆಟ್ಟುವುದು ನಮ್ಮೆಲ್ಲ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

Gauri Lankesh: the journalist who never stopped questioning

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಂತ್ರಿಗಳು ಆಡಳಿತ ನಡೆಸುತ್ತಿಲ್ಲ. ಬದಲಿಗೆ, ಪಟ್ಟಭದ್ರ ಹಿತಾಸಕ್ತಿಗಳಾದ ಬಂಡವಾಳ ಶಾಹಿಗಳು ಹಾಗೂ ಕೋಮುವಾದಿ ಸಂಘಪರಿವಾರದ ಸೂತ್ರದಂತೆ  ನಡೆದುಕೊಳ್ಳುತ್ತಿದ್ದಾರೆ. ಜನರು ಎಚ್ಚೆತ್ತು
ಕೊಳ್ಳಬೇಕು. ಧರ್ಮದ ಹೆಸರಿನಲ್ಲಿ ಕೋಮುವಾದ ಬಿತ್ತುತ್ತ ಜನರ ಮನಸ್ಸನ್ನು ವಿಷಕಾರಿಯಾಗಿಸುತ್ತಿರುವ ಫ್ಯಾಸಿಸ್ಟ್‌ ಹುನ್ನಾರಗಳ ಈಡೇರಿಕೆಗೆ ಅವಕಾಶ ಕೊಡಬಾರದು. ಅವರನ್ನು ಸೋಲಿಸುವ ಕೆಲಸವಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಇಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ, ಸಾರ್ವಭೌಮತ್ವವನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಅಂತ ಪಟ್ಟಭದ್ರ ಶಕ್ತಿಗಳಿಂದ ದೇಶವನ್ನು ರಕ್ಷಿಸಿಕೊಳ್ಳಬೇಕು. ಅದಕ್ಕಾಗಿ ಸಂಘಟನೆಯನ್ನು ವಿಸ್ತಾರವಾಗಿ ಕಟ್ಟಬೇಕಾಗಿದೆ. ದೇಶದ ಭ್ರಾತೃತ್ವಕ್ಕಾಗಿ ದುಡಿಯುತ್ತಿರುವ ಎಲ್ಲರನ್ನೂ ಒಗ್ಗೂಡಿಸಬೇಕು ಎಂದು ಅವರು ಹೇಳಿದರು.

ದೇಶದಲ್ಲಿ ಮನುವಾದಿ, ಕೋಮುವಾದಿ, ಜಾತಿವಾದಿ, ಮಹಿಳಾ-ದಲಿತ ವಿರೋಧಿ ಶಕ್ತಿಗಳು ಅಧಿಕಾರ ಚುಕ್ಕಾಣಿ ಹಿಡಿದು ದಮನಿಸಲು ಯತ್ನಿಸುತ್ತಿವೆ. ಇಂತಹ ಯಥಾಸ್ಥಿತವಾದವನ್ನು ವಿರೋಧಿಸಿದ್ದ, ದೇಶದ ಸಾಕ್ಷರತೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸಾವಿತ್ರಿಬಾಯಿ ಫುಲೆ, ರಮಾಬಾಯಿ ಸೇರಿದಂತೆ ಹಲವು ಆದರ್ಶ ಮಹಿಳೆಯರನ್ನು ದೇಶ ಕಂಡಿದೆ. ಅಂತಹ ಪರಂಪರೆಗೆ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ ಅವರೂ ಸೇರಿದ್ದಾರೆ. ಕೋಮುವಾದಿಗಳು ಗೌರಿ ಲಂಕೇಶ್‌ರನ್ನು ಹತ್ಯೆ ಮಾಡಿರಬಹುದು. ಆದರೆ, ಅವರ ಚಿಂತನೆಗಳನ್ನು ಕೊಲ್ಲಲು ಸಾಧ್ಯವಿಲ್ಲ. ಅವರ ಆದರ್ಶ, ಆಶಯಗಳು ಸದಾ ಜೀವಂತವಾಗಿರುತ್ತವೆ. ಗೌರಿ ಲಂಕೇಶ್‌ ಅವರು ತೋರಿದ ದಾರಿಯಲ್ಲಿ ಅವರ ಮೌಲ್ಯಗಳೊಂದಿಗೆ ನಾವೆಲ್ಲರೂ ಸಾಗಬೇಕಿದೆ. ಗಟ್ಟಿ ದನಿಯಲ್ಲಿ ಕೋಮುವಾದಿಗಳನ್ನು ಹಿಮ್ಮೆಟ್ಟಬೇಕಿದೆ ಎಂದು ಜೈಭೀಮ್ ಆರ್ಮಿಯ ರಾಷ್ಟ್ರಾಧ್ಯಕ್ಷ ಚಂದ್ರಶೇಖರ್ ಆಜಾದ್ ಅವರು ಹೇಳಿದರು.

ವೆಬಿನಾರ್‌ ಕಾರ್ಯಕ್ರಮದಲ್ಲಿ ಗೌರಿ ಲಂಕೇಶ್‌ ಅವರ ಸಹೋದರಿ, ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್, ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಹೋರಾಟಗಾರ ನೂರ್‌ ಶ್ರೀಧರ್, ಗೌರಿ ಮೀಡಿಯಾ ಟ್ರಸ್ಟ್‌ನ ಅಧ್ಯಕ್ಷರಾದ ದೊಡ್ಡಿಪಾಳ್ಯ ನರಸಿಂಹಮೂರ್ತಿ ಮಾತನಾಡಿದರು.


ಇದನ್ನೂ ಓದಿ: ಮೋದಿಯನ್ನು ತಿಸ್ಕರಿಸುತ್ತಿರುವ ಯುವಜನರು: #StudentsDislikePMModi ಟ್ರೆಂಡಿಂಗ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights