ಸಿಬಿಐ ಮುಖ್ಯಸ್ಥರ ಆಯ್ಕೆ: ಹಳೇ ತೀರ್ಪು ಉಲ್ಲೇಖಿಸಿದ ಸಿಜೆಐ ರಮಣ; ಹುದ್ದೆಯ ಅವಕಾಶ ಕಳೆದುಕೊಂಡ ಬಿಜೆಪಿ ಬೆಂಬಲಿಗರು!

ಮುಖ್ಯ ನ್ಯಾಯಮೂರ್ತಿ ರಮಣ ಅವರು ಉಲ್ಲೇಖಿಸಿದ ಸುಪ್ರಿಂಕೋರ್ಟಿನ ಒಂದು ಆದೇಶದ ಕಾರಣಕ್ಕಾಗಿ, CBI ನಿರ್ದೇಶಕರಾಗಲು ಕಾದಿದ್ದ ಇಬ್ಬರು ಅಧಿಕಾರಿಗಳಿಗೆ ಅವಕಾಶ ತಪ್ಪಿ ಹೋಗಿದೆ.

ಕೇಂದ್ರ ಸರ್ಕಾರ ಸಿದ್ಧಪಡಿಸಿದ್ದ ಪಟ್ಟಿಯಲ್ಲಿ ರಾಕೇಶ್ ಅಸ್ತಾನಾ ಮತ್ತು ವೈ.ಸಿ. ಮೋದಿ ಅವರ ಹೆಸರುಗಳು ಮೊದಲ ಎರಡು ಸ್ಥಾನಗಳಲ್ಲಿ ಇದ್ದವು. ಮುಖ್ಯ ವಿಷಯ ಏನೆಂದರೆ, ಈ ಇಬ್ಬರೂ ಬಿಜೆಪಿಗೆ ಆಪ್ತರಾಗಿದ್ದರು ಎಂಬುದು ಗುಟ್ಟೇನೂ ಅಲ್ಲ. ಆ ಕಾರಣಕ್ಕೇ ಪಟ್ಟಿಯಲ್ಲಿ ಅವರಿಬ್ಬರೂ ಮೊದಲ ಎರಡು ಸ್ಥಾನದಲ್ಲಿದ್ದರು.

ಅಂತಿಮವಾಗಿ, ಈಗ ಐಪಿಎಸ್ ಅಧಿಕಾರಿ ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗಳ ಮುಖ್ಯಸ್ಥರಾಗಿದ್ದ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ಎರಡು ವರ್ಷಗಳ ಅವಧಿಗೆ ಕೇಂದ್ರ ತನಿಖಾ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ರಮಣ ಮತ್ತು ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅವರ ನಡುವೆ ಸರಣಿ ಸಭೆಗಳ ನಂತರ ಮಂಗಳವಾರ ಸಂಜೆ ಸರ್ಕಾರದ ಅಧಿಸೂಚನೆ ಬಂದಿದೆ.

ಸಿಜೆಐ ಉಲ್ಲೇಖಿಸಿದ್ದು ಏನು?

ಸಿಬಿಐ ನಿರ್ದೇಶಕ ಅಥವಾ ಮುಖ್ಯಸ್ಥರನ್ನು ಪ್ರಧಾನಮಂತ್ರಿ, ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯಲ್ಲಿನ ವಿಪಕ್ಷ ನಾಯಕ ಇರುವ ತ್ರಿಸದಸ್ಯರ ಸಮಿತಿ ಆಯ್ಕೆ ಮಾಡುತ್ತದೆ. ಕೇಂದ್ರ ಸರ್ಕಾರ ಮೊದಲೇ ಒಂದು ಪಟ್ಟಿ ಸಿದ್ಧಪಡಿಸಿರುತ್ತದೆ. ಈ ಸಮಿತಿಯ ಮೂವರು ಸೇರಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಚರ್ಚೆಗಳ ಬಳಿಕ ಮೂವರೂ ಸರ್ವಸಮ್ಮತದಿಂದ ಒಬ್ಬರನ್ನು ಆಯ್ಕೆ ಮಾಡುತ್ತಾರೆ. ಇದು ರೂಢಿಗತ ಪ್ರಕ್ರಿಯೆ.

ಫೆಬ್ರವರಿಯಿಂದ ಖಾಲಿಯಿದ್ದ ಸಿಬಿಐ ನಿರ್ದೇಶಕರ ಹುದ್ದೆ ಭರ್ತಿ ಮಾಡಲು ಸೋಮವಾರ ಈ ತ್ರಿಸದಸ್ಯರ ಸಮಿತಿ ಸಭೆ ಸೇರಿತ್ತು. ಸಭೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಉಲ್ಲೇಖಿಸಿದ ಸುಪ್ರಿಂಕೋರ್ಟ್‌ನ ಹಳೆ ತೀರ್ಪು ಒಂದು ಬಿಜೆಪಿ ಮತ್ತು ಮೋದಿ ಬಯಸಿದ್ದ ಇಬ್ಬರು ಅಧಿಕಾರಿಗಳಿಗೆ ಕಂಟಕವಾಗಿತು.

ಪ್ರಮುಖ ಹುದ್ದೆಗೆ ಆರು ತಿಂಗಳಿಗಿಂತ ಕಡಿಮೆ ಅವಧಿಯ ಸೇವೆಯನ್ನು ಹೊಂದಿರುವ ಪೊಲೀಸ್ ಅಧಿಕಾರಿಯನ್ನು ಪರಿಗಣಿಸಬಾರದು ಎಂದು ಸಿಜೆಐ ರಮಣ ಹೇಳೀದ್ದಾರೆ. ಹೊಸ ಸಿಬಿಐ ನಿರ್ದೇಶಕರ ಆಯ್ಕೆಯ ಸಮಯದಲ್ಲಿ ಇಂತಹ ನಿಯಮವನ್ನು ಮೊದಲ ಬಾರಿಗೆ ಮುಂದಿಡಲಾಗಿದೆ ಮತ್ತು ರಮಣ ನಿಯಮವನ್ನು ಪಾಲಿಸಬೇಕು ಎಂದು ಒತ್ತಿ ಹೇಳಿದರು ಎನ್ನಲಾಗಿದೆ.

ಇದನ್ನೂ ಓದಿ: ಕೊರೊನಾ ನಿರ್ವಹಣೆ ವೈಫಲ್ಯ: ಮೋದಿ ವರ್ಚಸ್ಸು ಉಳಿಸಲು ಕೇಂದ್ರ ಸಚಿವ ಹರ್ಷವಧನ್‌, ಸಿಎಂ ಬಿಎಸ್‌ವೈ ತಲೆದಂಡ?

ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಕೂಡ ಇದನ್ನು ಬೆಂಬಲಿಸಿದರು. ಮೂವರ ಸಮಿತಿಯಲ್ಲಿ ಇಬ್ಬರ ಬಹುಮತಕ್ಕೆ ಆದ್ಯತೆಯಲ್ಲವೇ? ಇದರ ಪರಿಣಾಮವಾಗಿ, ಸಿಬಿಐ ನರ್ದೇಶಕರ ಹುದ್ದೆಗಾಗಿ ಕಾದು ಕುಳಿತಿದ್ದ ಆಗಸ್ಟ್ 31 ರಂದು ನಿವೃತ್ತಿಯಾಗುತ್ತಿರುವ ಗಡಿ ಭದ್ರತಾ ಪಡೆ ಮುಖ್ಯಸ್ಥ ರಾಕೇಶ್ ಅಸ್ತಾನಾ ಮತ್ತು ಮೇ 31 ರಂದು ನಿವೃತ್ತರಾಗಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಮುಖ್ಯಸ್ಥ ವೈ.ಸಿ. ಮೋದಿಯವರು ನಿರ್ದೇಶಕ ಸ್ಥಾನದಿಂದ ದೂರ ಉಳಿದಿದ್ದಾರೆ. ಸರ್ಕಾರದ ಕಿರುಪಟ್ಟಿಯಲ್ಲಿ ಮೊದಲ ಎರಡು ಹೆಸರು ಇವರದ್ದೇ ಆಗಿತ್ತು.

ನಂತರ ಸಮಿತಿಯು ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್, ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಮಹಾನಿರ್ದೇಶಕ ಕೆ.ಆರ್. ಚಂದ್ರ ಮತ್ತು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ ವಿ.ಎಸ್.ಕೆ. ಕೌಮುದಿ ಅವರ ಹೆಸರನ್ನು ಪರಿಗಣಿಸಿ, ಹಿರಿಯರಾದ ಜೈಸ್ವಾಲ್ ಅವರನ್ನು ಆಯ್ಕೆ ಮಾಡಿದೆ.

ಪ್ರಸ್ತುತ ಸುಬೋಧ್ ಅವರು ಸಿಐಎನ್‌ಎಫ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಈ ವರ್ಷದ ಆರಂಭದಲ್ಲಿ ಕೇಂದ್ರ ಡೆಪ್ಯುಟೇಷನ್‌ಗೆ ಕರೆಸಿಕೊಳ್ಳುವ ಮೊದಲು ಮುಂಬೈ ಪೊಲೀಸ್ ಆಯುಕ್ತ ಮತ್ತು ಮಹಾರಾಷ್ಟ್ರ ಡಿಜಿಪಿ ಹುದ್ದೆಗಳನ್ನು ಅಲಂಕರಿಸಿದ್ದರು. ಸಿಬಿಐನಲ್ಲಿ ಸೇವೆ ಸಲ್ಲಿಸಿದ ಅನುಭವವಿಲ್ಲದಿದ್ದರೂ, ಇಂಟೆಲಿಜೆನ್ಸ್ ಬ್ಯೂರೋ ಮತ್ತು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ)ನಲ್ಲಿ ಅವರು ಸುದೀರ್ಘ ಅವಧಿಯನ್ನು ಹೊಂದಿದ್ದಾರೆ.

– ಮಲ್ಲನ ಗೌಡರ್

ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಬಿಜೆಪಿ ವಿರುದ್ದ ಆಕ್ರೋಶ; 08 ಪದಾಧಿಕಾರಿಗಳು ಪಕ್ಷಕ್ಕೆ ರಾಜೀನಾಮೆ!

Spread the love

Leave a Reply

Your email address will not be published. Required fields are marked *