ಫ್ರೀಡಂ ಪಾರ್ಕಿನಲ್ಲಿ ದೊರೆಸ್ವಾಮಿಯವರ ಪ್ರತಿಮೆ ಹಾಗೂ ಜಯನಗರ ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರನ್ನಿಡಲು ಪೃಥ್ವಿ ರೆಡ್ಡಿ ಆಗ್ರಹ!

ರಾಜ್ಯ ಎಚ್ ಎಸ್ ದೊರೆಸ್ವಾಮಿಯವರ ನಿಧನದಿಂದ ಶೋಕತಪ್ತವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ಸೇವೆ ಮಾಡಿದ ಶ್ರೀಯುತರು ತಮ್ಮ ಜೀವಮಾನವಿಡೀ ಆಳುವ ಸರಕಾರಗಳನ್ನು ಎಚ್ಚರಿಸುತ್ತಾ, ನೊಂದವರ, ಬಡವರ ನೋವಿನ ದನಿಯಾಗುತ್ತಾ ಜೀವಿಸಿದ ಮಹಾನ್ ಚೇತನ. ಸರಕಾರ ಇವರ ಪ್ರತಿಮೆಯನ್ನು ಫ್ರೀಡಂ ಪಾರ್ಕಿನಲ್ಲಿ ಸ್ಥಾಪಿಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆಗ್ರಹಿಸಿದರು.

ಎಚ್ ಎಸ್ ದೊರೆಸ್ವಾಮಿಯವರು ಸ್ವಾತಂತ್ರ್ಯ ಸಂಗ್ರಾಮಕ್ಕೇ ತಮ್ಮ ಹೋರಾಟವನ್ನು ನಿಲ್ಲಿಸದೆ ತಮ್ಮ ಕೊನೆಯ ಉಸಿರಿನ ತನಕ ಹೋರಾಟವನ್ನೇ ಬದುಕಾಗಿ ಮಾಡಿಕೊಂಡವರು. ರಾಜ್ಯದ ಆಡಳಿತ ಹಳಿತಪ್ಪಿದಾಗ ಅಧಿಕಾರದಲ್ಲಿ ಇದ್ದ ಎಲ್ಲಾ ಪಕ್ಷಗಳನ್ನೂ ಪ್ರಶ್ನಿಸಿದವರು. ಇವರ ಶತಮಾನದ ಬದುಕು ನಮಗೆಲ್ಲರಿಗೂ ಆದರ್ಶಪ್ರಾಯವಾಗಿದೆ.

ಇವರ ಜೀವನ ಮತ್ತು ಹೋರಾಟವನ್ನು ಜೀವಂತವಾಗಿಡಲು ಮತ್ತು ಮುಂದಿನ ಪೀಳಿಗೆಗೆ ಪ್ರೇರಣೆಯಾಗಿಸಲು ಸರಕಾರ ತಮ್ಮ ಹೋರಾಟದ ಬದುಕಿನ ಬಹುಕಾಲವನ್ನು ಕಳೆದ ಫ್ರೀಡಂ ಪಾರ್ಕಿನಲ್ಲಿ ಅವರ ಪ್ರತಿಮೆ ಸ್ಥಾಪಿಸಬೇಕು. ಜಯನಗರ ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರಿಡಬೇಕು. ಅಲ್ಲದೇ ರಾಜ್ಯದ ಸರ್ವೋನ್ನತ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ಈ ಮೂಲಕ ಶುಶಾಸನ, ಅಭಿವೃದ್ದಿಯ ಕನಸು ಹೊತ್ತು ಬದುಕಿದ, ಸ್ವಾತಂತ್ರ ಹೋರಾಟದ ಕೊಂಡಿಯಾಗಿದ್ದ ದೊರೆಸ್ವಾಮಿಯವರ ಹೆಸರನ್ನು ಅಜರಾಮರವಾಗಿಸಬೇಕು ಎಂದು ಪೃಥ್ವಿ ರೆಡ್ಡಿ ತಿಳಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights