ಮನೆ ನೀಡದ ತೆಲಂಗಾಣ ಸರ್ಕಾರ; ಚಿತೆಗೆ ಹಾರಿ ರೈತ ಆತ್ಮಹತ್ಯೆ!

ಜಲಾಶಯ ನಿರ್ಮಾಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಸರ್ಕಾರ ತನಗೆ ಮನೆ ನೀಡಲು ನಿರಾಕರಿಸಿದೆ ಎಂದು ತೆಲಂಗಾಣದ ರೈತರೊಬ್ಬರು ಆರೋಪಿಸಿದ್ದು, ನೆಲಸಮಗೊಂಡ ತನ್ನ ಮನೆಯ ಮರದ ತುಂಡುಗಳಿಂದ ತಾನೇ ನಿರ್ಮಿಸಿದ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಲ್ಲಣ್ಣ ಸಾಗರ್ ಜಲಾಶಯ ನಿರ್ಮಾಣಕ್ಕಾಗಿ ತೆಲಂಗಾಣ ಸರ್ಕಾರ, ಮೇಡಕ್ ಜಿಲ್ಲೆಯ ವೇಮುಲಾಘಾಟ್ ಗ್ರಾಮದ ಮಲ್ಲಯ್ಯ ಎಂಬುವವರ ಮನೆಯನ್ನು ಸ್ವಾಧೀನಪಡಿಸಿಕೊಂಡು ನೆಲಸಮಗೊಳಿಸಿತ್ತು. ನಂತರ, ಮನೆ ಕಳೆದುಕೊಂಡವರಿಗಾಗಿ ಪುನರ್ವಸತಿ ಕಾಲೋನಿಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ಕಾಲೋನಿಯಲ್ಲಿ ತಮಗೆ 2 ಬಿಹೆಚ್ ಕೆ ಮನೆ ನೀಡಲು ಸರ್ಕಾರ ನಿರಾಕರಿಸಿದೆ ಎಂದು ರೈತ ಆರೋಪಿಸಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ವೇಮುಲಾಘಾಟ್ ಗ್ರಾಮದಲ್ಲಿ ಮತ್ತೆ ಇಂತಹ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಮಲ್ಲಣ್ಣ ಸಾಗರ್ ಯೋಜನೆಗಾಗಿ ಮನೆ ಕಳೆದುಕೊಂಡವರಿಗೆ ಎರಡು ಆಯ್ಕೆಗಳನ್ನು ನೀಡಲಾಗಿದೆ. ಪ್ರತಿ ಕುಟುಂಬಕ್ಕೆ 5.4 ಲಕ್ಷ ಪರಿಹಾರ ಮತ್ತು 250 ಚದರ ಗಜ ಫ್ಲಾಟ್ ಅಥವಾ ಪುನರ್ವಸತಿ ಕಾಲೋನಿಯಲ್ಲಿ 2 ಬಿಹೆಚ್ ಕೆ ಮನೆಯೊಂದಿಗೆ 7.5 ಲಕ್ಷ ಹಣವನ್ನು ನೀಡಲಾಗುತ್ತದೆ. 2019ರಲ್ಲಿ ಮಲ್ಲಯ್ಯ ಎರಡನೇಯದ್ದನ್ನು ಆಯ್ಕೆ ಮಾಡಿಕೊಂಡಿದ್ದರು.

ಕಳೆದ ವರ್ಷದಿಂದ ಅನೇಕ ಸಮಸ್ಯೆಗೆ ಸಿಲುಕಿರುವ ಮಲ್ಲಯ್ಯ, 9 ತಿಂಗಳ ಹಿಂದಷ್ಟೇ ಕ್ಯಾನ್ಸರ್ ನಿಂದಾಗಿ ಪತ್ನಿಯನ್ನು ಕಳೆದುಕೊಂಡಿದ್ದಾರೆ. ಇದನ್ನು ತಿಳಿದ ಕಂದಾಯ ಇಲಾಖೆ ಅಧಿಕಾರಿಗಳು, ಮನೆಯಲ್ಲಿ ಒಬ್ಬರೇ ಇರುವುದಾದರೆ ಮನೆಯನ್ನು ಕೊಡುವುದಿಲ್ಲ ಎಂದು ಮಲ್ಲಯ್ಯ ಅವರಿಗೆ ಹೇಳಿದ್ದಾರೆ.

ಇದರಿಂದ ಮನನೊಂದ ಮಲ್ಲಯ್ಯ, ಗುರುವಾರ ತನ್ನ ನೆಲಸಮಗೊಳಿಸಲಾದ ಮನೆಯಿಂದ ಕಟ್ಟಿಗೆಗಳನ್ನು ಸಂಗ್ರಹಿಸಿ ಚಿತೆಯನ್ನು ತಯಾರಿಸಿದ್ದಾರೆ. ಆ ಚಿತೆಗೆ ತಾವೇ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಜಗಮೆ ತಂಧಿರಮ್’ ಮತ್ತು ‘ಕೋಲ್ಡ್ ಕೇಸ್’: 5 ತಮಿಳು ಮತ್ತು ಮಲಯಾಳಂ ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights