ಏನಿದು ಗ್ರೀನ್‌ ಫಂಗಸ್; ಇದರ ಲಕ್ಷಣಗಳೇನು? ಇದರಿಂದಾಗುವ ಸಮಸ್ಯೆಗಳೇನು? ಡೀಟೇಲ್ಸ್‌

ಕೊರೊನಾ ಎರಡನೇ ಅಲೆಯ ಆಕ್ರಮಣದ ಜೊತೆಗೆ ಕಪ್ಪು, ಬಿಳಿ, ಹಳದಿ ಶಿಲೀಂಧ್ರ (ಫಂಗಸ್‌)ಗಳು ಕಾಣಿಸಿಕೊಂಡಿವೆ. ಇದರಿಂದಾಗಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಇವುಗಳ ಜೊತೆಗೆ ಹೊಸದಾಗಿ ಗ್ರೀನ್‌ ಫಂಗಸ್‌ ಕೂಡ ಕಾಣಿಸಿಕೊಂಡಿದೆ. ಕೊರೊನಾದಿಂದ ಗುಣಮುಖರಾದ ಜನರಲ್ಲಿ ಈ ಫಂಗಸ್‌ಗಳು ಹೆಚ್ಚು ಕಾಣಿಸಿಕೊಂಡಿವೆ.

ಈ ಗ್ರೀನ್‌ ಫಂಗಸ್‌ಗಳ ಬಗ್ಗೆ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಅವರು ಮಾಹಿತಿ ನೀಡಿದ್ದು, ಆಸ್ಪರ್ಜಿಲೊಸಿಸ್ ಎಂದು ಕರೆಯಲ್ಪಡುವ ಗ್ರೀನ್ ಫಂಗಸ್ ಮನೆಯಲ್ಲಿ ಮತ್ತು ಹೊರಗಡೆ ಪರಿಸರದಲ್ಲಿ ಇರುತ್ತದೆ. ಇದು ಅನೇಕ ಬಾರಿ ಉಸಿರಾಟದ ಮೂಲಕ ಜನರ ದೇಹವನ್ನು ತಲುಪುತ್ತದೆ ಎಂದು ಹೇಳಿದ್ದಾರೆ.

ಯುಎಸ್ ಸಿಡಿಸಿ ಪ್ರಕಾರ, ರೋಗನಿರೋಧಕ ಶಕ್ತಿ ಹೆಚ್ಚಿರುವ ಜನರಿಗೆ ಗ್ರೀನ್‌ ಫಂಗಸ್‌ನಿಂದ ಹೆಚ್ಚು ಅಪಾಯವಿಲ್ಲ. ಆದರೆ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಸೋಂಕಿಗೆ ಒಳಗಾಗುತ್ತಾರೆ. ಗ್ರೀನ್ ಫಂಗಸ್, ಸಾಮಾನ್ಯವಾಗಿ ಟಿಬಿ ಮತ್ತು ಇತರ ಶ್ವಾಸಕೋಶದ ಕಾಯಿಲೆ ಇರುವ ಜನರಲ್ಲಿ ಹೆಚ್ಚು ಕಂಡುಬರುತ್ತದೆ. ಅಸ್ತಮಾ, ಸಿಒಪಿಡಿಯಿಂದ ಬಳಲುತ್ತಿರುವ ಜನರಲ್ಲಿ ಇದರ ಅಪಾಯ ಹೆಚ್ಚು. ಅಂಗಾಂಗ ಕಸಿ ಮಾಡಿದವರು, ಹೆಚ್ಚಿನ ಪ್ರಮಾಣದಲ್ಲಿ ಸ್ಟೀರಾಯ್ಡ್ ಗಳನ್ನು ತೆಗೆದುಕೊಳ್ಳುವವರು ಅಥವಾ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವವರು ಗ್ರೀನ್‌ ಫಂಗಸ್‌ಗೆ ತುತ್ತಾಗುತ್ತಾರೆ ಎಂದು ಅವರು ವಿವರಿಸಿದ್ದಾರೆ.

ಗ್ರೀನ್ ಫಂಗಸ್, ಶ್ವಾಸಕೋಶ ಅಥವಾ ಸೈನಸ್‌ಗಳ ಮೇಲೆ ಪರಿಣಾಮ ಬೀರಲಿದೆ. ಶೀಘ್ರದಲ್ಲೇ ಚಿಕಿತ್ಸೆ ನೀಡದಿದ್ದರೆ ನ್ಯುಮೋನಿಯಾಕ್ಕೂ ಕಾರಣವಾಗಬಹುದು. ಗ್ರೀನ್ ಫಂಗಸ್ ಇಂದ ಬಳಲುತ್ತಿರುವ ಅನೇಕ ರೋಗಿಗಳಲ್ಲಿ ಕೆಮ್ಮು, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಕಂಡುಬಂದಿವೆ. ಜ್ವರ ಮತ್ತು ಮೂಗಿನಿಂದ ರಕ್ತಸ್ರಾವವಾಗುತ್ತದೆ. ಅನೇಕ ರೋಗಿಗಳಲ್ಲಿ ತೂಕ ಇಳಿಕೆ, ಸುಸ್ತು ಕಾಣಿಸಿಕೊಂಡಿದೆ. ವಾಸನೆ ಸಾಮರ್ಥ್ಯದ ಮೇಲೂ ಪರಿಣಾಮ ಬೀರಿದೆ. ಆಯಾಸ, ತಲೆನೋವು, ಎದೆ ನೋವು, ಮೂತ್ರದಲ್ಲಿ ರಕ್ತ ಇದು ಕೂಡ ಗ್ರೀನ್ ಫಂಗಸ್ ಲಕ್ಷಣವಾಗಿದೆ. ಗ್ರೀನ್ ಫಂಗಸ್ ಸೋಂಕಾಗಿದ್ದರೂ ಅದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ನೈಸ್‌ ವಿರುದ್ಧ ಆರೋಪಿಸಿದ್ದಕ್ಕೆ ದೇವೇಗೌಡರಿಗೆ 2 ಕೋಟಿ ದಂಡ!; ಮತ್ತೆ ಆರೋಪ ಮಾಡದಂತೆ ಎಚ್ಚರಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights