ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ 1 ಲಕ್ಷ ಬಹುಮಾನ: ಮಿಜೋರಾಂ ಸಚಿವ ಘೋಷಣೆ!

ದಿನ ಕಳೆದಂತೆ ದೇಶದ ಜನಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಸರ್ಕಾರಗಳು ಹಲವು ರೀತಿಯ ಯೋಜನೆಗಳ ಮೂಲಕ ಜನಸಂಖ್ಯೆ ನಿಯಂತ್ರಣಕ್ಕೆ ಯತ್ನಿಸುತ್ತಿವೆ. ಈ ನಡುವೆ, ತನ್ನ ಕ್ಷೇತ್ರದಲ್ಲಿ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಮಿಜೋರಾಂನ ಸಚಿವ ಘೋಷಿಸಿದ್ದಾರೆ. ಇದು ಭಾರೀ ದೇಶದ ಜನರ ಕುತೂಹಲವನ್ನು ಕೆರಳಿಸಿದೆ.

ಮಿಜೋರಾಂನಲ್ಲಿ ಮಿಜೋ ಸಮುದಾಯದ ಜನಸಂಖ್ಯೆ ಬೆಳವಣಿಗೆಯಲ್ಲಿ ಭಾರೀ ಇಳಿಕೆಯಾಗಿದೆ. ಹೀಗಾಗಿ ಜನಸಂಖ್ಯೆಯ ಬೆಳವಣಿಗೆಯನ್ನು ಉತ್ತೇಜಿಸುವ ಅಗತ್ಯವಿದೆ. ಹೀಗಾಗಿ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಒಂದು ಲಕ್ಷ ರೂ ಬಹುಮಾನ, ಟ್ರೋಫಿ ಮತ್ತು ಪ್ರಮಾಣಪತ್ರವನ್ನು ವಿತರಿಸುವುದಾಗಿ ಐಜ್ವಾಲ್‌ ಪೂರ್ವ-2 ಕ್ಷೇತ್ರದ ಶಾಸಕ ಮತ್ತು ಮಿಜೋರಾಂನ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಈ ಘೋಷಣೆ ಮಾಡಿದ್ದಾರೆ.

“ಮಿಜೋ ಜನಸಂಖ್ಯೆಯ ಬೆಳವಣಿಗೆಯ ದರ ಕಡಿಮೆಯಾಗುತ್ತಿರುವುದು ಮತ್ತು ಬಂಜೆತನ ದರ ಹೆಚ್ಚುತ್ತಿರುವುದು ಗಂಭೀರ ಕಳವಳಕಾರಿ ವಿಷಯವಾಗಿದೆ. ಮಿಜೋರಾಂನ ಜನಸಂಖ್ಯೆಯಲ್ಲಿನ ಕುಸಿತದಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಇದು ಸಣ್ಣ ಸಮುದಾಯಗಳು ಅಥವಾ ಮಿಜೋಸ್‌ನಂತಹ ಬುಡಕಟ್ಟು ಜನಾಂಗದವರು ಬದುಕುಳಿಯಲು ಮತ್ತು ಪ್ರಗತಿಗೆ ಅಡ್ಡಿಯಾಗಿದೆ” ಎಂದು ಅವರು ತಿಳಿಸಿದ್ದಾರೆ.

ಮಿಜೋರಾಂ ಮಿಜೋ ಸಮುದಾಯದ ತವರು ಮನೆಯಾಗಿದೆ. 21,087 ಚದರ ಕಿಲೋಮೀಟರ್ ವಿಸ್ತೀರ್ಣವುಳ್ಳ ಅಲ್ಲಿ 2011ರ ಜನಗಣತಿಯ ಪ್ರಕಾರ 10,91,014 ಜನರು ವಾಸಿಸುತ್ತಿದ್ದಾರೆ. ಅಲ್ಲಿನ ಜನಸಾಂದ್ರತೆ (ಒಂದು ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಸರಾಸರಿ ಜನರ ಸಂಖ್ಯೆ) ಕೇವಲ 52 ಆಗಿದೆ. ಇದು ದೇಶದಲ್ಲಿಯೇ ಅತಿ ಕಡಿಮೆ ಜನಸಾಂದ್ರೆತೆ ಹೊಂದಿರುವ ಎರಡನೇ ರಾಜ್ಯವಾಗಿದೆ. ಅರುಣಾಚಲ ಪ್ರದೇಶದ ಜನಸಾಂದ್ರತೆ 17 ಇದ್ದು, ಇದು ಕಡಿಮೆ ಜನಸಾಂದ್ರತೆಯಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತದ ಸರಾಸರಿ ಜನಸಾಂದ್ರತೆ 382 ಆಗಿದೆ.

ಆದರೆ ಮಿಜೋರಾಂನ ನೆರೆ ರಾಜ್ಯ ಅಸ್ಸಾಂನಲ್ಲಿ ಬೇರೆಯದೆ ಪರಿಸ್ಥಿತಿ ಇದೆ. ಅಲ್ಲಿನ ನೂತನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಇತ್ತೀಚೆಗೆ ರಾಜ್ಯವು ನೀಡುವ ಕೆಲವು ಯೋಜನೆಗಳ ಅಡಿಯಲ್ಲಿ ಧನಸಹಾಯ ಪ್ರಯೋಜನಗಳನ್ನು ಪಡೆಯಲು ಎರಡು ಮಕ್ಕಳ ನೀತಿಯನ್ನು ಕ್ರಮೇಣ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. 2019 ರಲ್ಲಿ ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವವರು 2021 ರ ಜನವರಿಯಿಂದ ಸರ್ಕಾರಿ ಉದ್ಯೋಗಗಳಿಗೆ ಅರ್ಹರಲ್ಲ ಎಂದು ರಾಜ್ಯ ಆಡಳಿತ ನಿರ್ಧರಿಸಿತ್ತು.

ದೇಶದ ಉತ್ತರದ ರಾಜ್ಯಗಳಲ್ಲಿ ಭೌಗೋಳಿಕತೆಗಿಂತ ಹೆಚ್ಚಿನ ಜನಸಂಖ್ಯೆ ಕಂಡುಬಂದರೆ ದಕ್ಷಿಣದ ರಾಜ್ಯಗಳಲ್ಲಿ ಭೌಗೋಳಿಕತೆಗಿಂತ ಕಡಿಮೆ ಜನಸಂಖ್ಯೆ ಇರುವುದು ಕಂಡುಬಂದಿದೆ. ಇದು ಹಲವು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.

ಇದನ್ನೂ ಓದಿ: ಬೀದಿಬದಿ ವ್ಯಾಪಾರಿಗಳ ಮೇಲೆ ದರ್ಪ; ರಾಯಚೂರು ಪಿಎಸ್‌ಐ ಅಮಾನತು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights