ಬೀದಿಬದಿ ವ್ಯಾಪಾರಿಗಳ ಮೇಲೆ ದರ್ಪ; ರಾಯಚೂರು ಪಿಎಸ್‌ಐ ಅಮಾನತು!
ಬೀದಿ ಬದಿಯಲ್ಲಿ ಕುಳಿತು ತರಕಾರಿ ಮಾರುತ್ತಿದ್ದಾರೆ ಎಂಬ ಕಾರಣಕ್ಕೆ ತರಕಾರಿಗಳನ್ನು ಕಾಲಿನಿಂದ ಒದ್ದು, ಬೀದಿ ಬದಿ ವ್ಯಾಪಾರಿಗಳ ಮೇಲೆ ದರ್ಪ ತೋರಿಸಿದ್ದ ರಾಯಚೂರು ನಗರದ ಸದರ ಬಜಾರ್ ಠಾಣೆಯ ಪಿಎಸ್‌ಐ ಅಜಂ ಅವರನ್ನು ಅಮಾನತು ಮಾಡಲಾಗಿದೆ.
ಕೊರೊನಾ ಕಾರಣಕ್ಕಾಗಿ ರಾಜ್ಯದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಈ ವೇಳೆ ಜನರು ರಸ್ತೆಗೆ ಬರಬಾರದು ಎಂದು ಆದೇಶಿಸಲಾಗಿದೆ. ಆದರೂ, ರಾಯಚೂರಿನ ಚಂದ್ರಮೌಳೇಶ್ವರ ವೃತ್ತದಿಂದ ಪಟೇಲ್ ರಸ್ತೆ ಮಾರ್ಗದಲ್ಲಿ ರೈತರು, ವರ್ತಕರು ತರಕಾರಿ ವ್ಯಾಪಾರ ಮಾಡುತ್ತಿದ್ದರು. ಇದನ್ನು ಕಂಡು ಆಕ್ರೋಶಗೊಂಡ ಪಿಎಸ್‌ಐ ತರಕಾರಿಯನ್ನು ಕಾಲಿನಿಂದ ಒದ್ದು ಚಲ್ಲಾಪಿಲ್ಲಿ ಮಾಡಿದ್ದರು.
ಪಿಎಸ್‌ಐ ಅಜಂ ಅವರು ವ್ಯಾಪಾರಿಗಳ ಮೇಲೆ ದರ್ಪ ಎಸಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪಿಎಸ್‌ಐ ಅವರ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ್ ನಿಕಮ್ ಅವರು ಪಿಎಸ್‌ಐ ಅಜಂ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ದಲಿತ ಬಾಲಿಕಿಯನ್ನು ವಿವಸ್ತ್ರಗೊಳಿಸಿ, ವಿಡಿಯೋ ಹರಿಬಿಟ್ಟ ದಂಪತಿಗಳು; ಎಫ್‌ಐಆರ್ ದಾಖಲು!