FACT CHECK | 15 ಲಕ್ಷ ರೂಪಾಯಿ ಎಲ್ಲೋಯ್ತು? ಎಂದು ಹೇಳುವ ಅಮೀರ್ ಖಾನ್ ವಿಡಿಯೋದ ಅಸಲೀಯತ್ತೇನು?
ಪ್ರಧಾನಿ ನರೇಂದ್ರ ಮೋದಿಯವರು 2014ರ ಲೋಕಸಭಾ ಚುನಾವಣೆಯ ವೇಳೆ, ಇಲ್ಲಿರುವ ಕಪ್ಪು ಹಣವನ್ನು ಹಂಚಿದರೆ ಪ್ರತಿಯೊಬ್ಬ ಭಾರತೀಯನ ಖಾತೆಗೆ 15ಲಕ್ಷ ರೂ. ಜಮಾ ಮಾಡಬಹುದು ಎಂಬ ಹೇಳಿಕೆ ನೀಡಿದ್ದರು. ಇದು ಬಳಿಕ ಹಲವು ವಿವಾದ ಮತ್ತು ಟ್ರೋಲ್ ಗಳಿಗೆ ಗುರಿಯಾಗಿತ್ತು. ಈಗ ಅದನ್ನೆ ಆಧಾರವಾಗಿಟ್ಟುಕೊಂಡು ಬಾಲಿವುಡ್ ನಟ ಅಮೀರ್ ಖಾನ್ 15ಲಕ್ಷ ಎಲ್ಲಿ ಎಂದು ಪ್ರಶ್ನಿನಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
“ಭಾರತದ ಪ್ರತಿಯೊಬ್ಬ ಪ್ರಜೆಯೂ ಲಕ್ಷಾಧಿಪತಿಯಾಗಿದ್ದಾನೆ. ಏಕೆಂದರೆ ಪ್ರತಿಯೊಬ್ಬನ ಬಳಿಯೂ 15ಲಕ್ಷ ರೂ ಇದೆ . ಇರಬೇಕು. ನೀವೇನು ಹೇಳುತ್ತಿದ್ದೀರಿ? ನಿಮ್ಮ ಖಾತೆಯಲ್ಲಿ 15 ಲಕ್ಷ ರೂ. ಹಣವಿಲ್ಲವೇ? ಹಾಗಾದರೆ ಅದು ಎಲ್ಲಿಗೆ ಹೋಯ್ತು? ಅದಕ್ಕೆ ಹೇಳೋದು ಇಂತಹಾ ಡೋಂಗಿಗಳಿಂದ ಎಚ್ಚರಿಕೆಯಿಂದಿರಿ ಇಲ್ಲದಿದ್ದರೆ ನೀವು ಭಾರೀ ನಷ್ಟವನುಭವಿಸುತ್ತೀರಿ” ಎಂದು ಅಮೀರ್ ಖಾನ್ ಹೇಳುತ್ತಿರುವಂತ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
https://twitter.com/HarishMeenaINC/status/1779748916092617136
ವಿಡಿಯೋದ ಕೊನೆಯಲ್ಲಿ, “ವೋಟ್ ಫಾರ್ ನ್ಯಾಯ್”, “ವೋಟ್ ಫಾರ್ ಕಾಂಗ್ರೆಸ್” ಎಂಬ ಬರಹವನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ಜಾಹಿರಾತಿನೊಂದಿಗೆ ಪ್ರಸಾರವಾಗುತ್ತಿದೆ. ಹಾಗಿದ್ದರೆ ನಿಜವಾಗಿಯೂ ವಿಡಿಯೋದಲ್ಲಿ ಅಮೀರ್ ಖಾನ್ ಹೇಳಿದ್ದಾರೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಅಮೀರ್ ಖಾನ್ ವಿಡಿಯೋದಲ್ಲಿ ಹೇಳಿರುವುದು ನಿಜವೇ ಎಂದು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ಹಿಂದೆ ಅಮೀರ್ ಖಾನ್ ನಡೆಸಿಕೊಡುತ್ತಿದ್ದ ʼಸತ್ಯಮೇವ ಜಯತೇʼ ಎಂಬ ಕಾರ್ಯಕ್ರಮದ ವಿಡಿಯೋ ಲಭ್ಯವಾಗಿದೆ. ಈ ವೀಡಿಯೊವನ್ನು ಆಗಸ್ಟ್ 30, 2016ರಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ವೀಡಿಯೊದ ತಲೆಬರೆಹದಲ್ಲಿ, “Satyamev Jayate Episode 4 Promo – Every Indian Deserves One Crore!’ ಎಂದು ಬರೆಯಲಾಗಿದೆ.
35 ಸೆಕುಂಡುಗಳ ಈ ವೀಡಿಯೋದಲ್ಲಿ ಅಮೀರ್ ಖಾನ್, “ಸ್ನೇಹಿತರೇ, ಭಾರತ ಒಂದು ಬಡದೇಶ ಎಂದು ನೀವು ಭಾವಿಸುವುದಾದದರೆ ಅದು ಸಂಪೂರ್ಣ ತಪ್ಪು. ಯಾಕೆಂದರೆ, ಇಲ್ಲಿ ಪ್ರತಿಯೊಬ್ಬ ಪ್ರಜೆಯೂ ಲಕ್ಷಾಧಿಪತಿ (ಮಿಲಿಯೇನರ್) ಆಗಿದ್ದಾನೆ. ಪ್ರತಿಯೊಬ್ಬನ ಬಳಿಯೂ ಒಂದು ಕೋಟಿ ರೂ. ಇರಬೇಕು. ಏನು ಹೇಳುತ್ತಿದ್ದೀರಿ? ನಿಮ್ಮ ಬಳಿ ಈ ಹಣವಿಲ್ಲವೇ? ಹಾಗಾದರೆ ನಿಮ್ಮ ಒಂದು ಕೋಟಿ ರೂ. ಎಲ್ಲಿಗೆ ಹೋಯ್ತು? ನೋಡಿ, ರವಿವಾರ ಬೆಳಗ್ಗೆ 11 ಗಂಟೆಗೆ” ಎಂದು ಹೇಳಿದ್ದಾರೆ.
ವೈರಲ್ ವಿಡಿಯೋ ಬಗ್ಗೆ ಅಮೀರ್ ಖಾನ್ ರವರ ತಂಡ ಸ್ಪಷ್ಟನೆ ನೀಡಿದ್ದು, “ಅಮೀರ್ ಖಾನ್ ಅವರ ಅಧಿಕೃತ ವಕ್ತಾರರು ಹೇಳಿಕೆಯನ್ನು ನೀಡಿದ್ದು, “ಅಮೀರ್ ಖಾನ್ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚಿಗೆ ವೈರಲ್ ಆಗುತ್ತಿರುವ ವೀಡಿಯೊದಿಂದ ನಾವು ಆಘಾತಗೊಂಡಿದ್ದೇವೆ. ಇದೊಂದು ನಕಲಿ ವೀಡಿಯೋ ಮತ್ತು ಸಂಪೂರ್ಣ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮುಂಬೈ ಪೊಲೀಸರ ಸೈಬರ್ ಕ್ರೈಮ್ ಸೆಲ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಅಲ್ಲದೆ, ಈ ವಿಷಯಕ್ಕೆ ಸಂಬಂಧಿಸಿದ ವಿವಿಧ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರಲಾಗಿದೆ” ಎಂದು ತಿಳಿಸಿದ್ದಾರೆ.
ಅಮೀರ್ ಎಂದಿಗೂ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿಲ್ಲವಾದರೂ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಭಾರತೀಯರೂ ಮತ ಚಲಾಯಿಸುವಂತೆ ಅವರು ಮನವಿ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಅಮೀರ್ ಖಾನ್ ತಮ್ಮ 35 ವರ್ಷಗಳ ವೃತ್ತಿಜೀವನದುದ್ದಕ್ಕೂ ಯಾವುದೇ ರಾಜಕೀಯ ಪಕ್ಷವನ್ನು ಅನುಮೋದಿಸಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಹಿಂದಿನ ಹಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಸಾರ್ವಜನಿಕ ಜಾಗೃತಿ ಅಭಿಯಾನಗಳ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಲು ಅವರು ತಮ್ಮ ಪ್ರಯತ್ನಗಳನ್ನು ಮಾಡಿದ್ದಾರೆ. ಎಲ್ಲಾ ಭಾರತೀಯರು ಬಂದು ಮತ ಚಲಾಯಿಸುವಂತೆ ಮತ್ತು ನಮ್ಮ ಚುನಾವಣಾ ಪ್ರಕ್ರಿಯೆಯ ಸಕ್ರಿಯ ಭಾಗವಾಗುವಂತೆ ಆಮಿರ್ ಖಾನ್ ಅವರು ಕೋರಿದ್ದಾರೆ” ಎಂದು ಹೇಳಿಕೆ ತಿಳಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಲಿವುಡ್ ನಟ ಅಮೀರ್ ಖಾನ್ BJP ಯನ್ನು ಗುರಿಯಾಗಿಸಿಕೊಂಡು ಪ್ರಧಾನಿ ಮೋದಿ ಹೇಳಿದ್ದ ಕಪ್ಪು ಹಣ ಮತ್ತು 15ಲಕ್ಷ ರೂಗಳನ್ನು ಉಲ್ಲೇಖಿಸಿ ಮಾತಾಡಿರುವಂತೆ ಎಡಿಟ್ ಮಾಡಿದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಾರ್ಕ್‌ಗಳಲ್ಲಿ ಯೋಗ ಮಾಡುವುದನ್ನು ತಡೆಯುತ್ತೇವೆ ಎಂದು ಹೇಳಿದ್ರಾ ಪ್ರಿಯಾಂಕಾ ಗಾಂಧಿ?