ತುರ್ತು ಪರಿಸ್ಥಿತಿ: ಲಾಭ ಪಡೆದವರು ಯಾರು? ಜೆಪಿ ಚಳುವಳಿ ಮತ್ತು RSS ರಾಜಕೀಯ..!

ಪ್ರತಿ ವರ್ಷ ಜೂನ್ 25 ರಂದು ಬಿಜೆಪಿ ನಾಯಕರು ಪ್ರಜಾಪ್ರಭುತ್ವ ಮತ್ತು ಮಾನವೀಯತೆಯ ವಿರುದ್ಧದ ಕರಾಳ ದಿನವೆಂದು ನೆನಪಿಸಿಕೊಳ್ಳುತ್ತಾರೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ತುರ್ತು ಪರಿಸ್ಥಿತಿ ಯನ್ನು ಹೇರುವ ಮೂಲಕ ಹಲವಾರು ಜನರನ್ನು, ಪ್ರಮುಖವಾಗಿ ಅಂದಿನ ಭಾರತೀಯ ಜನ ಸಂಘದ (ಈಗಿನ ಬಿಜೆಪಿ) ನೂರಾರು (ಬಿಜೆಪಿಗರು ಸಾವಿರಾರು ಎನ್ನುತ್ತಾರೆ) ನಾಯಕರನ್ನು ಜೈಲಿಗೆ ಕಳುಹಿಸಿದ್ದರು.

ಕಾಂಗ್ರೆಸ್ ಅನ್ನು ಖಂಡಿಸುವುದು ಬಿಜೆಪಿ ನಾಯಕರ ಆಚರಣೆಯಾಗಿದೆ. ತುರ್ತು ಪರಿಸ್ಥಿತಿಯ ಪ್ರತಿ ವಾರ್ಷಿಕೋತ್ಸವದಂದು ಅವರು ಅದನ್ನು ವಿಶೇಷವಾಗಿ ಆತ್ಮಸಾಕ್ಷಿಯೊಂದಿಗೆ ಮಾಡುತ್ತಾರೆ. ಬಿಜೆಪಿಯ ಇಂದಿನ ಮುಂಚೂಣಿಯ ಅನೇಕ ನಾಯಕರು ತಾವು ಫ್ಯಾಸಿಸ್ಟ್ ತುರ್ತು ಪರಿಸ್ಥಿತಿಯ ಚಾವಟಿಗೆ ಬಲಿಯಾಗಿದ್ದೇವೆ ಎಂದು ವಾದಿಸುತ್ತಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಜೊತೆಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭೂಗತವಾಗಿದ್ದರು ಮತ್ತು ಇತರ ಅನೇಕ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಕರೆದೊಯ್ದಿದ್ದರಿಂದ ಅವರೆಲ್ಲರೂ ಬಂಧನದಿಂದ ಪಾರಾಗಿದ್ದಾರೆ ಎಂದು ನಮಗೆ ಹೇಳಲಾಗುತ್ತಿದೆ.

ಇದನ್ನೂ ಓದಿ: ಯೋಗ ದಿನ 88 ಲಕ್ಷ ಡೋಸ್‌, ಮಂಗಳವಾರ 54 ಲಕ್ಷ -ಭಾನುವಾರ 69 ಸಾವಿರ; ಇದು ಮೋದಿ ಸರ್ಕಾರ ಬೂಟಾಟಿಕೆ?

ಬಂಧಿತ ಕಿರಿಯ ವಿದ್ಯಾರ್ಥಿ ಕಾರ್ಯಕರ್ತರಲ್ಲಿ ಪ್ರಮುಖರು ಆಗಿನ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (ಡಿಯುಎಸ್‌ಯು) ಅಧ್ಯಕ್ಷ ಮತ್ತು ಆರ್‌ಎಸ್‌ಎಸ್ ಪ್ರಾಯೋಜಿತ ವಿದ್ಯಾರ್ಥಿ ಸಂಘಟನೆಯಾದ ಅಖಿಲ್ ಭಾರತೀಯ ವಿದ್ಯಾ ಪರಿಷತ್ (ಎಬಿವಿಪಿ)ಯ ಸದಸ್ಯ ಅರುಣ್‌ ಜೇಟ್ಲಿ.

ದಿವಂಗತ ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡೆ ಸುಷ್ಮಾ ಸ್ವರಾಜ್ ಅವರು ತುರ್ತು ಪರಿಸ್ಥಿತಿಯ ವಿರುದ್ಧ ಧನಿ ಎತ್ತಿದ್ದರು. ಆದರೆ, ಅವರು ಬಲಪಂಥೀಯ ಆರ್‌ಎಸ್‌ಎಸ್‌ನ ಭಾಗವಾಗಿರಲಿಲ್ಲ. ಆ ಸಮಯದಲ್ಲಿ ಅವರು ಸಮಾಜವಾದಿಯಾಗಿದ್ದರು, ಅವರು ನಂತರದಲ್ಲಿ ಬಿಜೆಪಿಗೆ ಸೇರಿದರು ಮತ್ತು ಹಿಂದೂ ಬಲಪಂಥೀಯ ರಾಜಕಾರಣಿಯಾಗಿ ಮಾರ್ಪಟ್ಟರು.

ಬಿಜೆಪಿ ನಾಯಕರು ತುರ್ತು ಪರಿಸ್ಥಿತಿಯನ್ನು ಖಂಡಿಸುವುದನ್ನು ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೀಮಿತಗೊಳಿಸಿದ್ದಾರೆ. ಅವರು, ಮತ್ತೆ ಇಂತಹ ತುರ್ತು ಪರಿಸ್ಥಿತಿ ಸಂಭವಿಸಲು ಬಿಡುವುದಿಲ್ಲ ಅಥವಾ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲಾಗಿತ್ತು ಎಂದು ಅವರು ಎಂದಿಗೂ ಪ್ರತಿಪಾದಿಸುವುದಿಲ್ಲ.

ತುರ್ತು ಪರಿಸ್ಥಿತಿಯ ಸಮಯದಲ್ಲಿ ನಾಗರಿಕ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಸರ್ಕಾರದ ವಕೀಲರು ನ್ಯಾಯಾಲಯಗಳಲ್ಲಿ ವಾದಿಸಿದ್ದರು. ಆದರೆ, ಬಿಜೆಪಿ ನಾಯಕರು ಮೂಲಭೂತ ಹಕ್ಕುಗಳ ಬಗ್ಗೆ ತಮ್ಮ ಬದ್ದತೆಯನ್ನು ಘೋಷಿಸುವಲ್ಲಿ ಬಹಳ ಎಚ್ಚರಿಕೆಯಿಂದ ತಪ್ಪಿಸಿಕೊಳ್ಳುತ್ತಾರೆ. 

ಭಾರತವು ಪ್ರಜಾಪ್ರಭುತ್ವ ಮತ್ತು ಮುಕ್ತ ಸಮಾಜಕ್ಕಾಗಿ ನಿಂತಿದೆ ಎಂದು ಜಿ -7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರ ಘೋಷಣೆಯು ಅರೆಮನಸ್ಸಿನಿಂದ ಕೂಡಿತ್ತು. ಏಕೆಂದರೆ ಅವರ ಸರ್ಕಾರವು ಮಾನವ ಹಕ್ಕುಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸಿದೆ. ಮೋದಿ ಸರ್ಕಾರ ಕವಿ ವರವರ ರಾವ್, ಫ್ರಾನ್ ಸ್ಟಾನ್ಲಿ ಸ್ವಾಮಿ, ಸುಧಾ ಭಾರದ್ವಾಜ್, ವೆರ್ನಾನ್ ಗೊನ್ಸಾಲ್ವೆಸ್, ಗೌತಮ್ ನವಲಖಾ, ಅನಿಲ್ ಟೆಲ್ಟುಂಬ್ಡೆ, ಸದಾಫ್ ಜಾಫರ್, ಎಸ್.ಆರ್. ದಾರಪುರಿ, ವಿದ್ಯಾರ್ಥಿಗಳಾದ ಉಮರ್ ಖಾಲಿದ್, ನತಾಶಾ ನರ್ವಾಲ್, ದೇವಂಗನ ಕಾಳಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದೆ (ಇವರಲ್ಲಿ ಕೆಲವರಿಗೆ ಮಾತ್ರ ಜಾಮೀನು ನೀಡಲಾಗಿದೆ).

ಇದನ್ನೂ ಓದಿ: 2022ರ ಯುಪಿ ಚುನಾವಣೆ: ‘ಹಿಂದೂತ್ವ ಐಕಾನ್’ ಯಾರು – ಮೋದಿ ಅಥವಾ ಯೋಗಿ?

ಕಾನೂನು ಮತ್ತು ನ್ಯಾಯ ಸಚಿವ ರವಿಶಂಕರ್ ಪ್ರಸಾದ್ ಅವರು ಮತ್ತು ಅವರ ಪಕ್ಷ ಬಿಜೆಪಿಯ ಮುಖಂಡರು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದರು. ಅವರ ಪಕ್ಷದಿಂದ ತುರ್ತು ಪರಿಸ್ಥಿತಿ ಎಂದಿಗೂ ಸಂಭವಿಸುವುದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇದು ಅವರ ಒಂದು ಆಶ್ವಾಸನೆಯಷ್ಟೇ, ಏಕೆಂದರೆ, ಅವರು ಭಾಗವಾಗಿರುವ ಮೋದಿ ಸರ್ಕಾರವು ದೇಶದ್ರೋಹದ ಕಾನೂನುಗಳನ್ನು ಬಳಸಿಕೊಂಡು ವೃದ್ದರು ಮತ್ತು ಯುವ ವಿದ್ಯಾರ್ಥಿಗಳನ್ನು ಹಿಂಸಿಸುತ್ತಿದೆ.

ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಭೀಮಾ-ಕೊರೆಗಾಂವ್ ಪ್ರಕರಣ, ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ 2019 ರ ಪ್ರತಿಭಟನೆಯ ಸಮಯದಲ್ಲಿ ಹಲವಾರು ಕಾರ್ಯಕರ್ತರನ್ನು ಜೈಲಿನಲ್ಲಿರಿಸಿದೆ. ಅಲ್ಲದೆ, ಅವರ ಅಧೀನದಲ್ಲಿರುವ ದೆಹಲಿ ಪೊಲೀಸರು ಸಿಎಎ ಪ್ರತಿಭಟನೆಯ ಸಂದರ್ಭದಲ್ಲಿ 2020 ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಗಲಭೆಗಳನ್ನು ಹುಟ್ಟುಹಾಕಲು ಈ ಹೋರಾಟಗಾರರು ಸಂಚು ರೂಪಿಸಿದ್ದರು ಎಂದು ಆರೋಪಿಸಿದ್ದಾರೆ.

ಪಕ್ಷಪಾತವಿಲ್ಲದೆ ಗಮನಿಸುವ ಜನರಿಗೆ, ಇವು ಸುಳ್ಳು ಪ್ರಕರಣಗಳು ಮತ್ತು ಪ್ರತಿಭಟನಾಕಾರರನ್ನು ಭಯೋತ್ಪಾದಕರು ಎಂದು ಬಿಂಬಿಸುವುದು ಸರ್ಕಾರದ ಏಕೈಕ ಉದ್ದೇಶವಾಗಿದೆ. ಸರ್ಕಾರದ ಧೋರಣೆಗಳ ವಿರುದ್ದ ಮಾತನಾಡುವ ಜನರನ್ನು ಮೋದಿ ಸರ್ಕಾರವು ಹಿಂಸಿಸುತ್ತಿದೆ. ಅದು ಅಘೋಷಿತ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಅರ್ಥವಾಗುತ್ತದೆ.

ವಿಷಯವೆಂದರೆ ತುರ್ತು ಪರಿಸ್ಥಿತಿ ಬಗ್ಗೆ ಕೇಳಲು ಪ್ರಮುಖ ಪ್ರಶ್ನೆಗಳಿವೆ. ನಾನು ತುರ್ತು ಪರಿಸ್ಥಿತಿಯನ್ನು ಖಂಡಿಸುವುದರ ಜೊತೆಗೆ ಈ ಪ್ರಶ್ನೆಗಳನ್ನೂ ಕೂಡ ಕೇಳುವುದು ಅಗತ್ಯವಾಗಿದೆ. ಚುನಾವಣಾ ಪ್ರಕರಣದಲ್ಲಿ ಇಂದಿರಾ ಗಾಂಧಿ ಅವರನ್ನು ಅನರ್ಹಗೊಳಿಸಿ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಜಯಪ್ರಕಾಶ ನಾರಾಯಣ್‌ (ಜೆಪಿ) ಅವರು ಬಿಹಾರದಲ್ಲಿ ಪ್ರತಿಭಟನೆಯ ಬಿರುಗಾಳಿಯನ್ನು ಸೃಷ್ಟಿಸಿದರು. ಇದು ಇದು 25 ಜೂನ್ 1975 ರಂದು ತುರ್ತು ಪರಿಸ್ಥಿತಿಯ ಘೋಷಣೆಗೆ ಕಾರಣವಾಯಿತು.

ಜೆಪಿ ಅವರು ತಮ್ಮ 2002 ರ ಆತ್ಮಚರಿತ್ರೆ (ಮೆಮೋಯಿರ್ಸ್: ಅನಾಸಿ ಈಸ್ ದಿ ಲೈಫ್ ಆಫ್ ದಿ ಮೈಂಡ್)ಯಲ್ಲಿ ಪ್ರಸಿದ್ಧ ರಾಜಕೀಯ ತಜ್ಙ ರಜನಿ ಕೊಠಾರಿ ಅವರು ಬಿಹಾರದಲ್ಲಿ ಜೆಪಿ ನೇತೃತ್ವದ ಪ್ರತಿಭಟನಾ ಆಂದೋಲನವು ಆರ್‌ಎಸ್‌ಎಸ್ ಅನ್ನು ಮುಖ್ಯವಾಹಿನಿಗೆ ತಂದಿತು ಮತ್ತು ಅದಕ್ಕೆ ರಾಜಕೀಯ ನ್ಯಾಯಸಮ್ಮತತೆಯನ್ನು ನೀಡಿತು ಎಂದು ಹೇಳಿದ್ದರ ಎಂದು ಬರೆದಿದ್ದಾರೆ.

ಜೆಪಿ ಚಳವಳಿಯಲ್ಲಿ ಭಾಗವಹಿಸಿದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ಇದ್ದರು. ಕೋಮುವಾದಿ ಆರ್‌ಎಸ್‌ಎಸ್‌ನ ಭಾಗವಹಿಸುವಿಕೆಯು ಅವರ ಚಳವಳಿಯ ನ್ಯಾಯಸಮ್ಮತತೆಗೆ ಧಕ್ಕೆ ತರುತ್ತದೆ ಎಂದು ವಿಮರ್ಶಕರು ಹೇಳಿದಾಗ, ಜೆಪಿ ಅವರು ಆರ್‌ಎಸ್‌ಎಸ್‌ ದೇಶಭಕ್ತಿ ಸಂಘಟನೆ ಎಂದು ಉತ್ತರಿಸಿದ್ದರು.

ಇದನ್ನೂ ಓದಿ: ಮೋದಿ ಸರ್ಕಾರದ ವರ್ಚಸ್ಸು ಕುಸಿತ; ಪ್ರಾಬಲ್ಯವನ್ನು ಹೆಚ್ಚಿಸಲು BJPಯ 5 ತಂತ್ರಗಳು ಹೀಗಿವೆ!

ತೀವ್ರ ರಾಜಕೀಯ ತಜ್ಙ ಕೊಥಾರಿ ಅವರು ಹೇಳುವಂತೆ, ಬಿಜೆಪಿಯನ್ನು ಆರ್‌ಎಸ್‌ಎಸ್‌ ಹೇಗೆ ಪರಿಣಾಮಕಾರಿಯಾಗಿ ಮುನ್ನಲೆಗೆ ತಂದಿತು ಎಂಬುದ್ನು ನೋಡಬಹುದು. ಸಮಾಜವಾದಿಯಾಗಿದ್ದ ಮಧು ಲಿಮಾಯೆ ಅವರು (ಆರ್‌ಎಸ್‌ಎಸ್‌ ಬಗೆಗೆ ಅವರಿಗಿದ್ದ ನಿಷ್ಠೆಯಿಂದಾಗಿ) ಮಾಜಿ ಜನ ಸಂಘದ ಸದಸ್ಯರಿಗೆ ಉಭಯ ಸದಸ್ಯತ್ವವನ್ನು ಹೆಚ್ಚಿಸಿದಾಗ ನೂರು ಜನತಾ ಪಕ್ಷದ ಸದಸ್ಯರು ತಮ್ಮ ಆರ್‌ಎಸ್‌ಎಸ್‌ ಸದಸ್ಯತ್ವವನ್ನು ಬಿಟ್ಟುಕೊಡುವ ಬದಲು ಸರ್ಕಾರದಿಂದ ಹೊರನಡೆದರು. ಈ ವೇಳೆ ಭಾರತೀಯ ಜನ ಸಂಘವು ಜನತಾ ಪಾರ್ಟಿ, ಸ್ವತಂತ್ರ ಪಾರ್ಟ್ಇ ಮತ್ತು ಹಲವಾರು ಸಮಾಜವಾದಿ ಪಕ್ಷಗಳೊಂದಿಗೆ ವಿಲೀನಗೊಂಡಿತು.

1980 ರಲ್ಲಿ ಬಿಜೆಪಿ ರಚನೆಯಾಯಿತು ಮತ್ತು 1980 ರ ದಶಕದಲ್ಲಿ ಆರ್‌ಎಸ್‌ಎಸ್ ರಾಮ ಜನ್ಮಭೂಮಿ ಆಂದೋಲನವನ್ನು ಮುನ್ನೆಲೆಗೆ ತಂದಿತು. ಆರ್‌ಎಸ್‌ಎಸ್ ಬಿಜೆಪಿಯ ಮೂಲ ಸಂಸ್ಥೆಯಾಗಿದೆ. ಆರ್‌ಎಸ್‌ಎಸ್‌ ಬಿಜೆಪಿಯನ್ನು ಮುಂದೆಬಿಟ್ಟು ರಾಜಕೀಯವಾಗಿ ಸೂತ್ರವನ್ನು ಎಣೆಯುತ್ತಿದೆ. 

ಬಿಹಾರ ಪ್ರತಿಭಟನಾ ಆಂದೋಲನದಲ್ಲಿ ಜೆಪಿ ಅವರು ಆರ್‌ಎಸ್‌ಎಸ್‌ಗೆ ಬಲವಾದ ಒತ್ತು ನೀಡಿದ್ದರಿಂದ ಈ ಎಲ್ಲವು ಸಂಭವಿಸಿದವು. ಅಂದಿನಿಂದ ಪರಿಸ್ಥಿತಿ ಬದಲಾಗಿದೆ ಮತ್ತು ಈಗ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅದಕ್ಕಾಗಿಯೇ ನಾವು ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಕೇಳಬೇಕು: ಜೆಪಿ ನೇತೃತ್ವದಲ್ಲಿ ನಡೆದ ರೀತಿಯ ಪ್ರತಿಭಟನಾ ಆಂದೋಲನವನ್ನು ಅದು ಎಂದಾದರೂ ಸಹಿಸುತ್ತದೆಯೇ? ಎಂದು.

ಲೇಖಕರು: ಪಾರ್ಸಾ ವೆಂಕಟೇಶ್ವರ ರಾವ್

ಮೂಲ: ನ್ಯೂಸ್‌ ಕ್ಲಿಕ್‌

ಕನ್ನಡಕ್ಕೆ: ಸೋಮಶೇಖರ್ ಚಲ್ಯ

(ಪಾರ್ಸಾ ವೆಂಕಟೇಶ್ವರ ರಾವ್ ಅವರು ದೆಹಲಿ ಮೂಲದ ಹಿರಿಯ ಪತ್ರಕರ್ತ, ರಾಜಕೀಯ ನಿರೂಪಕ ಮತ್ತು ಹಲವಾರು ಪುಸ್ತಕಗಳ ಲೇಖಕರು. ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ಅಭಿಪ್ರಾಯಗಳಾಗಿವೆ.)

ಇದನ್ನೂ ಓದಿ: ಮೋದಿ ಉದ್ರೀ ವಾಗ್ದಾನಗಳು: ಪ್ರಶ್ನೆಗಳು-ಅನುಮಾನಗಳ ಜೊತೆಗೆ ಪ್ರಧಾನಿಗೆ ಬಹಿರಂಗ ಪತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights