T20 world cup: B ಗ್ರೂಪ್ನಲ್ಲಿ ಭಾರತ; ಸವಾಲುಗಳನ್ನು ಮೆಟ್ಟಿ ಗೆಲ್ಲುತ್ತಾ ಟೀಂ ಇಂಡಿಯಾ!
ICC ಟೆಸ್ಟ್ ವರ್ಲ್ಡ್ ಕಪ್ ಈಗಷ್ಟೇ ಮುಗಿದಿದೆ, ಫೈನಲ್ ಪ್ರವೇಶಿಸಿದ್ದ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ದ ಸೆಣೆಸಾಟದಲ್ಲಿ ಗೆಲುವು ಸಾಧಿಸಲು ವಿಫಲವಾಗಿದೆ. ಇದೀಗ ಟಿ20 ವಿಶ್ವಕಪ್ ಆಯೋಜಿಸಲು ಬಿಸಿಸಿಐ ಮುಂದಾಗಿದ್ದು, ಯುಎಇಯಲ್ಲಿ ಟೂರ್ನಿ ನಡೆಯಲಿದೆ.
ಇದಕ್ಕಾಗಿ ಒಟ್ಟು ನಾಲ್ಕು ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿದ್ದು, ಅದರಂತೆ ಯುಎಇ ದೇಶದ ಅಬುಧಾಬಿ, ಶಾರ್ಜಾ ಹಾಗೂ ದುಬೈ ನಗರಗಳ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಚುಟುಕು ಕದನ ನಡೆಯಲಿದೆ. ಇದಲ್ಲದೆ ಯುಎಇ ನೆರೆರಾಷ್ಟ್ರ ಒಮಾನ್ ರಾಜಧಾನಿ ಮಸ್ಕತ್ ನಗರದಲ್ಲಿರುವ ಸ್ಟೇಡಿಯಂನಲ್ಲೂ ಪಂದ್ಯಾವಳಿಯನ್ನು ಆಯೋಜಿಸಲಿದೆ ಎಂದು ತಿಳಿದು ಬಂದಿದೆ.
ಟಿ20 ವಿಶ್ವಕಪ್ನಲ್ಲಿ ಈ ಬಾರಿ 16 ತಂಡಗಳು ಪಾಲ್ಗೊಳ್ಳಲಿವೆ. ಅದರಲ್ಲಿ ಈಗಾಗಲೇ 8 ದೇಶಗಳು ನೇರವಾಗಿ ಸೂಪರ್ ಟುವೆಲ್ (12) ಹಂತಕ್ಕೆ ಪ್ರವೇಶಿಸಿದೆ. ಇನ್ನು 8 ದೇಶಗಳ 4 ತಂಡಗಳನ್ನು ಅರ್ಹತೆ ಪಡೆಯಬೇಕಿದೆ.
ಸದ್ಯ ಭಾರತ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ್ ತಂಡಗಳು ನೇರವಾಗಿ ಸೂಪರ್ ಟುವೆಲ್ (12) ನಲ್ಲಿ ಅರ್ಹತೆ ಪಡೆದುಕೊಂಡಿದೆ.
ಇನ್ನು ಬಾಂಗ್ಲಾದೇಶ, ಶ್ರೀಲಂಕಾ, ಐರ್ಲೆಂಡ್, ನೆದರ್ಲೆಂಡ್ಸ್, ಸ್ಕಾಟ್ ಲೆಂಡ್, ನಮೀಬಿಯಾ, ಓಮನ್ ಮತ್ತು ಪಪುವಾ ನ್ಯೂಗಿನಿಯಾ ತಂಡಗಳ ಮಧ್ಯೆ ಅರ್ಹತಾ ಹಣಾಹಣಿ ನಡೆಯಲಿದೆ. ಇಲ್ಲಿ 8 ತಂಡಗಳನ್ನು 2 ಗುಂಪುಗಳಾಗಿ ವಿಭಜಿಸಲಾಗಿದ್ದು, ಇದರಲ್ಲಿ ಟಾಪ್ 2 ಬಂದ ನಾಲ್ಕು ತಂಡಗಳು ಸೂಪರ್ ಟುವೆಲ್ (12) ಹಂತಕ್ಕೆ ಅರ್ಹತೆ ಪಡೆಯಲಿವೆ.
ಕಳೆದ ಟಿ20 ವಿಶ್ವಕಪ್ ಪ್ರಕಾರ ಸೂಪರ್ ಟುವೆಲ್ (12) ವಿಭಾಗಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದ್ದು, ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳಿವೆ. ಬಿ ಗುಂಪಿನಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ತಂಡಗಳ ಜೊತೆಗೆ ಟೀಮ್ ಇಂಡಿಯಾ ಸೆಣಸಲಿದೆ. ಇದರ ಜೊತೆ ಅರ್ಹತಾ ಸುತ್ತಿನಿಂದ ಎರಡು ತಂಡಗಳು ಕೂಡ ಸೇರ್ಪಡೆಯಾಗಲಿವೆ.
ಅಕ್ಟೋಬರ್ 24ರಿಂದ ಸೂಪರ್ 12ರ ಹಂತ ಆರಂಭಗೊಳ್ಳಲಿದ್ದು, ಒಟ್ಟು 30 ಪಂದ್ಯಗಳು ಲೀಗ್ ಹಂತದಲ್ಲಿ ನಡೆಯಲಿವೆ. ಆ ಬಳಿಕ ಪ್ರತೀ ಗುಂಪುಗಳಿಂದ ಎರಡು ತಂಡಗಳು ಸೆಮಿಫೈನಲ್ ಪ್ರವೇಶಲಿವೆ.
ಸದ್ಯ ಟೀಮ್ ಇಂಡಿಯಾ ಇರುವ ಬಿ ಗ್ರೂಪ್ ಕೂಡ ಬಲಿಷ್ಠ ತಂಡಗಳನ್ನು ಒಳಗೊಂಡಿದ್ದು, ಅದರಲ್ಲೂ ಏಕದಿನ ವಿಶ್ವ ಚಾಂಪಿಯನ್ ತಂಡ ಇಂಗ್ಲೆಂಡ್ ಭಾರತದ ಪಾಲಿಗೆ ಸವಾಲಾಗುವ ಸಾಧ್ಯತೆಯಿದೆ.
ಅಲ್ಲದೆ, ದೇಶದಲ್ಲಿ ಕೊರೊನಾ ಉಲ್ಬಣಗೊಂಡಿದ್ದರಿಂದ ಅರ್ಧಕ್ಕೆ ನಿಂತುಹೋಗಿದ್ದ ಐಪಿಎಲ್ ಕೂಡ ಸೆಪ್ಟೆಂಬರ್ನಲ್ಲಿ ಯುಎಸಿಯಲ್ಲಿಯೇ ಮುಂದುವರೆಯಲಿದೆ. ಅಕ್ಟೋಬರ್ 15 ರಂದು ಫೈನಲ್ ಪಂದ್ಯ ನಡೆಯಲಿದೆ.

