ಬತ್ತಿಹೋದ ಸರಸ್ವತಿ ನದಿಯ ಹುಡುಕಾಟಕ್ಕೆ ಹರಿಯುತ್ತಿದೆ ಹಣದ ಹೊಳೆ!

ದೆಹಲಿಯ ಹತ್ತಿರದ ಕುರುಕ್ಷೇತ್ರಕ್ಕೆ ಹೋಗಿ, ಅಲ್ಲಿ ಜನಪ್ರಿಯವಾಗಿರುವ ಸರಸ್ವತಿ ನದಿಯ ಕತೆಗಳ ಬೆನ್ನು ಹತ್ತಿ ಅತ್ತ ಚಂಡೀಗಢದ ವರೆಗೂ, ಇತ್ತ ಅದು ಮರೆಯಾಗುವ ಸೂರತ್‍ಗಢವರೆಗೂ ಓಡಾಡಬಹುದು. ಶಿವಾಲಿಕ್ ಪರ್ವತದಲ್ಲಿ ಹುಟ್ಟಿ, ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ತೆಳ್ಳಗೆ ಹರಿದು ಮಾಯವಾಗುತ್ತಿರುವ ಗಗ್ಗರ್-ಹಕ್ಕರ್ ಎಂಬ ನದಿಯನ್ನು ತೋರಿಸಿ, ಕೆಲವರು ‘ಇದು ಕಳೆದು ಹೋದ ಸರಸ್ವತಿಯ ಪೂರ್ವಾರ್ಧ’ ಎನ್ನುತ್ತಾರೆ. ದಕ್ಷಿಣ ಅಫಘಾನಿಸ್ಥಾನದಲ್ಲಿ ಹರಿಯುತ್ತಿರುವ ಹೆಲ್ಮಂಡ್ ನದಿಯೇ ಹಿಂದಿನ ಸರಸ್ವತಿ ಎಂದೂ ಕೆಲವರು ಹೇಳುತ್ತಾರೆ. ಒಂದು ಕಾಲಕ್ಕೆ ಅದು ತುಂಬಿ ಹರಿಯುತ್ತಿದ್ದ ನದಿ. ಹಿಂದೂ ಧರ್ಮದ ಆಧಾರ ಗ್ರಂಥಗಳಿಗೆ ಕಾರಣರಾದ ದಾರ್ಶನಿಕರು ಮತ್ತು ಮಂತ್ರದೃಷ್ಟಾರರು ಅದರ ನೀರನ್ನು ಕುಡಿದೇ ಬದುಕಿದ್ದರು. ಅದರ ದಡದಲ್ಲಿ ತ್ರಿಮೂರ್ತಿಗಳು ಓಡಾಡಿದ್ದರು. ಋಗ್ವೇದವು ಈ ನದಿಯನ್ನು ‘ಅತ್ಯುತ್ತಮ ತಾಯಿ, ಅತ್ಯುತ್ತಮ ದೈವ ಮತ್ತು ಅತ್ಯುತ್ತಮ ನದಿ’ ಎಂದು ಕೊಂಡಾಡುತ್ತದೆ. ಅದು ಹಾಲು ತುಪ್ಪ ಕೊಡುವ ನದಿ ಎಂದೂ ಹೇಳುತ್ತದೆ.

ಮನುವಿನ ಪ್ರಕಾರ ಸರಸ್ವತಿ ಮತ್ತು ದೃಶದ್ವತಿ ನದಿಗಳ ನಡುವಣ ಜಾಗವೇ ‘ಬ್ರಹ್ಮಾವರ್ತ, ವೈದಿಕ ಸಂಸ್ಕೃತಿಯ ಉಗಮ ಸ್ಥಾನ, ಅದು ದೇವರ ವಿಶೇಷ ಸೃಷ್ಟಿ. ಆರ್ಯಾವರ್ತವೆಂದು ಪ್ರಸಿದ್ಧವಾದ ಸ್ಥಳ. ಇವೆಲ್ಲವನ್ನೂ ಗಮನಿಸಿರುವ ವಿದ್ವಾಂಸರು ಸರಸ್ವತಿ ನದಿಯು ಕ್ರಿಪೂ ೬೦೦೦ ವರ್ಷಗಳಿಂದ ಕ್ರಿಪೂ ೩೦೦೦ ವರ್ಷಗಳವರೆಗೆ ತುಂಬಿ ಹರಿಯುತ್ತಿತ್ತೆಂದು ಹೇಳಿದ್ದಾರೆ. ಹಿಮಾಲಯದ ಗಡವಾಲ ಪ್ರದೇಶದಲ್ಲಿ ಹುಟ್ಟಿ ದಕ್ಷಿಣಕ್ಕೆ ಅದು ಹರಿಯುತ್ತಿದ್ದಾಗ ಅಲ್ಲಿ ಆ ಕಾಲಕ್ಕೆ ಥಾರ್ ಮರುಭೂಮಿಯೇ ಇರಲಿಲ್ಲ, ಬದಲು ಸರಸ್ವತಿಯ ಕೃಪೆಯಿಂದ ಹಸಿರು ಕಾಡಿತ್ತು ( ಹರಿಯಾಣ- ಹಸಿರು ಸ್ಥಳ). ಜೊತೆಗೆ ಯಮುನಾ ಮತ್ತು ಶುತಾದ್ರಿ ( ಈಗಣ ಸಟ್ಲೆಜ್ ) ನದಿಗಳು ಸರಸ್ವತಿಯ ಎಡ-ಬಲಗಳಲ್ಲಿ ಉಪನದಿಗಳಾಗಿ ಹರಿಯುತ್ತಾ ಕೊನೆಗೆ ಸರಸ್ವತಿಯನ್ನೇ ಸೇರುತ್ತಿದ್ದುವು. ಕಾಲಾಂತರದಲ್ಲಿ ಅರಾವಳಿ ಪರ್ವತಶ್ರೇಣಿಗಳು ತಲೆ ಎತ್ತಿದಾಗ ಶುತಾದ್ರಿಯು ಸಿಂಧು ನದಿಯನ್ನೂ, ಯಮುನೆಯು ಗಂಗಾ ನದಿಯನ್ನೂ ಕೂಡಿಕೊಂಡಾಗ ಕೃಶಳಾದ ಸರಸ್ವತಿಯು ಕೊನೆಗೆ ಬತ್ತಿಹೋಗುವುದು ಅನಿವಾರ್ಯವಾಯಿತು. ಈ ಮಹಾ ಪರಿವರ್ತನೆಯು ಕ್ರಿಸ್ತ ಪೂರ್ವ ೧೯೦೦ ರಷ್ಟು ಹಿಂದೆ ನಡೆದಿರಬೇಕೆಂದು ಊಹಿಸಲಾಗಿದೆ.

ಜೈಮಿನೀಯ ಬ್ರಾಹ್ಮಣ ಮತ್ತು ಮಹಾಭಾರತಗಳು ಸರಸ್ವತಿ ನದಿಯು ಮರುಭೂಮಿಯಲ್ಲಿ ಬತ್ತಿಹೋದದ್ದರ ಬಗೆಗೆ ಮಾಹಿತಿ ನೀಡುತ್ತವೆ. ಉಪಮಜ್ಜನ ( ನೆಲದಲ್ಲಿ ಹುದುಗಿದ) ವಿನಾಶನ ( ಮರೆಯಾದ), ಕುಬ್ಜಮತಿ( ಗಿಡ್ಡಗಾದ) ಮೊದಲಾದ ಪದಗಳು ಸರಸ್ವತಿ ನದಿಯು ಮರೆಯಾದ್ದನ್ನು ಸಂಕೇತಿಸುತ್ತವೆ. ಕ್ರಿಶ ಎರಡನೆಯ ಶತಮಾನದ ಹೊತ್ತಿಗೆ ಗುಪ್ತರ ಕಾಲದಲ್ಲಿ ಗಂಗಾ ಯಮುನೆಯರನ್ನು ದೈವತ್ವಕ್ಕೇರಿಸುವಾಗ ಆ ನದಿಗಳು ತುಂಬಿ ಹರಿಯುತ್ತಿದ್ದುವು, ಆದರೆ ಸರಸ್ವತಿ ಹರಿಯುತ್ತಿರಲಿಲ್ಲ, ಆಕೆ ಒಂದು ಸುಂದರ ನೆನಪಾಗಿ ಮಾತ್ರ ಉಳಿದಿದ್ದಳು. ಆಕೆಯ ದಡದಲ್ಲಿ ಹುಟ್ಟಿಕೊಂಡ ಜ್ಞಾನ ಸಂಪತ್ತನ್ನು ಗೌರವಿಸಿ, ವಿದ್ಯೆಯ ಅಧಿ ದೈವವಾಗಿ ಸರಸ್ವತಿಯನ್ನು ಗುರುತಿಸಲಾಯಿತು. ಹಂಸವಾಹನೆಯಾದ ಆಕೆ ವೀಣಾಪಾಣಿಯೂ ಆದಳು. ಈ ಶಿಲ್ಪ ಮೂಡುವ ಹೊತ್ತಿಗೆ ಸರಸ್ವತಿಯು ಗಂಗಾ ಯಮುನೆಯರ ಹಾಗೆ ಜೀವದಾಯಿನಿಯಾಗಿರಲಿಲ್ಲ, ಬದಲು ಒಂದು ಕಾಲಕ್ಕೆ ಸೃಷ್ಟಿಯಾದ ವಿವೇಕದ ಸಂಕೇತವಾಗಿದ್ದಳು. ಅದು ಈಗಲೂ ಬಹುಮಟ್ಟಿಗೆ ಹಾಗೆಯೇ ಉಳಿದು ಬಂದಿದೆ.

ಚಾರಿತ್ರಿಕವಾಗಿ ನೋಡಿದರೆ, ಹರಪ್ಪಾ ಸಂಸ್ಕೃತಿ ಪತನಗೊಂಡ ಆನಂತರ ಜನರು ಪೂರ್ವದ ಕಡೆ ವಲಸೆ ಬಂದಾಗ ಅವರಿಗೆ ಕಂಡದ್ದು ಫಲವತ್ತಾದ ಸರಸ್ವತಿ ನದಿ ಬಯಲು ಪ್ರದೇಶ. ಯಮುನಾ ಮತ್ತು ಸರಸ್ವತಿ ನದಿಗಳ ನಡುವಣ ಆ ಸ್ಥಳವು ವಲಸೆಗಾರರ ಬೇಟೆಯ ಪ್ರದೇಶವೂ ಆಗಿತ್ತು, ಜನರು ನೇಗಿಲು ಬಳಸಿ ( ಮಹಾಭಾರತದಲ್ಲಿ ಹಲ ಹೊತ್ತ ಬಲರಾಮನು ಸರಸ್ವತಿ ನದಿ ದಂಡೆಯಲ್ಲಿ ನಡೆಯುತ್ತಾ ವೈಶಂಪಾಯನ ಸರೋವರ ತಲುಪುತ್ತಾನೆ) ಕೃಷಿಕರಾಗಿ ಪರಿವರ್ತನೆ ಹೊಂದಿದ ಜಾಗವೂ ಆಗಿತ್ತು. ಈ ಅರ್ಥದಲ್ಲಿ ಸರಸ್ವತಿ ನದಿ ದಂಡೆಯು ಒಂದು ಕಾಲಕ್ಕೆ ಅನೇಕ ಸಂಸ್ಕೃತಿಗಳನ್ನು ಪೋಷಿಸಿದ ಮಹತ್ವದ ಸ್ಥಳ. ಉತ್ಪಾದನೆ ಹೆಚ್ಚಿದಾಗ ಕಾಣಿಸಿಕೊಂಡ ‘ರಾಜತ್ವ’ ಮತ್ತು ವಿದ್ವತ್ತಿನ ಪ್ರತೀಕವಾಗಿದ್ದ ‘ಬ್ರಹ್ಮತ್ವ’ ಗಳ ನಡುವಣ ಸಂಘರ್ಷವೂ ಇದೇ ನದಿಯ ದಂಡೆಯಲ್ಲಿ ನಡೆದಿದ್ದಕ್ಕೆ ವಶಿಷ್ಟ – ವಿಶ್ವಾಮಿತ್ರರ ಜಗಳವೇ ಸಾಕ್ಷಿ. ಅದರೆ ಸರಸ್ವತಿ ನದಿ ಬತ್ತಿದಾಗ ಜನರು ಗಂಗಾ ಯಮುನೆಯರನ್ನು ಆಶ್ರಯಿಸುವುದು ಅನಿವಾರ್ಯವಾಗಿತ್ತು.

ನದಿಗಳು ಬತ್ತುವುದು, ತಮ್ಮ ಹಾದಿಗಳನ್ನು ಬದಲಿಸಿಕೊಳ್ಳುವುದು ಚರಿತ್ರೆಯುದ್ದಕ್ಕೂ ಕಂಡು ಬರುವ ಸಹಜ ಪ್ರಕ್ರಿಯೆಗಳು. ಆದರೆ ಇತಿಹಾಸ ಪುರಾಣಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗದ ಬಿಜೆಪಿಯ ಪಟ್ಟುಗಳೇ ಬೇರೆ. ಅದು ೨೦೧೭ರಲ್ಲಿ ಸರಸ್ವತಿ ನದಿಯ ಹುಡುಕಾಟಕ್ಕೆ Center of Excellence for Research on Saraswati River (CERSR) ಸ್ಥಾಪಿಸಿ ಅದಕ್ಕೆ ಹಲವು ಕೋಟಿ ರೂಗಳ ( $800,000) ಅನುದಾನವನ್ನು ಘೋಷಿಸಿತು. ಹರಿಯಾಣದ ಮುಖ್ಯ ಮಂತ್ರಿ ಖಟ್ಟರ್‌ ತಕ್ಷಣ ೧೧ ಯೋಜನೆಗಳನ್ನು ಸುರು ಮಾಡಿದರು ( $80 million). ಇತರ ರಾಜ್ಯಗಳೂ ಧನ ಸಹಾಯ ಮಾಡಲು ಮುಂದೆ ಬಂದವು ( $100 million ). ಮಕ್ಕಳ ವಿದ್ಯೆಗೆ, ಜನರ ಆರೋಗ್ಯಕ್ಕೆ , ಮಹಿಳೆಯರ ಪೌಷ್ಟಿಕತೆಗೆ ವಿನಿಯೋಗವಾಗಬೇಕಾದ ಹಣವು ಬತ್ತಿದ ನದಿಯ ಹುಡುಕಾಟಕ್ಕೆ ವಿನಿಯೋಗವಾಗುತ್ತಿದೆ. ಜನರ ತೆರಿಗೆ ಹಣ ಯಾರಿಗೂ ನೆನಪಾಗುತ್ತಿಲ್ಲ. ವರ್ತಮಾನದಲ್ಲಿ ಹರಿಯುತ್ತಿರುವ ನದಿಗಳ ರಕ್ಷಣೆಗಿಂತ ಭೂತದ ಕಡೆಗೇ ಬಿಜೆಪಿಗೆ ( ಆರ್‌ ಎಸ್‌ ಎಸ್) ಹೆಚ್ಚು ಒಲವು.

ಬಹುಶ: ಇಂಥದ್ದನ್ನು ಊಹಿಸಿಯೇ ಸರಸ್ವತಿ ಮಾಯವಾಗಿರಬೇಕು. ನನ್ನ ಮಟ್ಟಿಗೆ ಅದೊಂದು ಸಾಂಕೇತಿಕ ಪ್ರಕ್ರಿಯೆ. ಇಲ್ಲದ್ದನ್ನು ಹುಡುಕುತ್ತಾ , ಇರುವುದನ್ನು ಕಳಕೊಳ್ಳುತ್ತಾ ಸಾಗುವ ಭಾರತದ ಪರಿಯೇ ವಿಚಿತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights