ಸಿದ್ದರಾಮಯ್ಯ ಮುಂದಿನ ಸಿಎಂ ಎಂದವರ ವಿರುದ್ದ ಕ್ರಮ ಕೈಗೊಳ್ಳುತ್ತಿದೆ ಕಾಂಗ್ರೆಸ್!
ಸಿದ್ದರಾಮಯ್ಯ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಹೇಳಿಕೆ ನೀಡಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ದ ಕ್ರಮ ಕೈಗೊಳ್ಳಬೇಕೇ ಎಂಬುದರ ಬಗ್ಗೆ ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ಪರಿಶೀಲನೆ ನಡೆಸುತ್ತಿದೆ ಎಂದು ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪಕ್ಷವನ್ನು ಬಲಪಡಿಸುವುದಕ್ಕಾಗಿ ಬೇಕಾಗಿರುವ ಅಗತ್ಯ ಕೆಲಸಗಳನ್ನು ಮಾಡುವ ಬದಲು ಮುಂದಿನ ಮುಖ್ಯಮಂತ್ರಿ ಯಾರು ಎಂಬುದರ ಬಗ್ಗೆ ಮಾತನಾಡಿರುವುದು ಜಮೀರ್ ಅವರಿಂದ ತಪ್ಪಾಗಿದೆ. ನಾಯಕತ್ವವನ್ನು ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಪಕ್ಷವು ವ್ಯಕ್ತಿಗಳ ಹೇಳಿಕೆ ಮೇಲೆ ನಿರ್ಧಾರ ತೆರೆದುಕೊಳ್ಳುವುದಿಲ್ಲ. ಬದಲಾಗಿ ಪಕ್ಷವು ಪ್ರಜಾತಂತ್ರ ಪ್ರಕ್ರಿಯೆಯನ್ನು ಅನುಸರಿಸಿ, ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಯಾಗಲು ಹಲವಾರು ನಾಯಕರು ಇದ್ದಾರೆ. ಆದರೆ, ಬಿಜೆಪಿಯಲ್ಲಿ ಯಡಿಯೂರಪ್ಪ ಹೊರತುಪಡಿಸಿ ಪಕ್ಷವನ್ನು ಮುನ್ನಡೆಸಬಲ್ಲವರು ಯಾರೂ ಇಲ್ಲ – ಇರಲಿಲ್ಲ ಎಂದು ಖರ್ಗೆ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘನೆ: ಕಾಂಗ್ರೆಸ್ ಶಾಸಕ ರಂಗನಾಥ್ ವಿರುದ್ದ ಎಫ್ಐಆರ್!
ಕೊರೊನಾ ವಿರುದ್ದದ ಹೋರಾಟದಲ್ಲಿ ಸ್ವಯಂ ಸೇವಕರಾಗಿ ದುಡಿಯುತ್ತಿರುವ ಆರೋಗ್ಯ ಕಾರ್ಯಕರ್ತರು ಮತ್ತು ಕಾರ್ಮಿಕರಿಗೆ ‘ಕೃತಜ್ಞತಾ ಪತ್ರ’ವನ್ನು ನೀಡುವ ಮೂಲಕ ಕಾಂಗ್ರೆಸ್ ಅವರನ್ನು ಸನ್ಮಾನಿಸುತ್ತದೆ ಎಂದು ಕಲಬುರ್ಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಆರೋಗ್ಯ ಸಮಿತಿ ಅಧ್ಯಕ್ಷ ಡಾ.ಕರಣ್ ದೇಶ್ಮುಖ್ ಅವರು ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಕಲಬುರಗಿ ಜಿಲ್ಲೆಯಲ್ಲಿ 500 ವೈದ್ಯರು, ಆರೋಗ್ಯ ಸಿಬ್ಬಂದಿ, ಸ್ವಯಂಸೇವಕರು ಮತ್ತು ಪತ್ರಕರ್ತರು ಸೇರಿದಂತೆ 4000 ಮುಂಚೂಣಿ ಆರೋಗ್ಯ ಕಾರ್ಯಕರ್ತರು ಮತ್ತು ಕಾರ್ಮಿಕರು ಇದ್ದಾರೆ. ಅವರೆಲ್ಲರಿಗೂ ಪಕ್ಷವು ಕೃತಜ್ಞತಾ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಅವರೆಲ್ಲರನ್ನೂ ಸನ್ಮಾನಿಸುತ್ತದೆ ಎಂದು ಡಾ. ದೇಶ್ಮುಖ್ ಹೇಳಿದರು.
ಕೋವಿಡ್ -19 ರ ಎರಡನೇ ಅಲೆಯಲ್ಲಿ ದೇಶದಲ್ಲಿ ಕೇವಲ 798 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಹೇಳಿದೆ. ಕೋವಿಡ್ ಸಾವಿಗೆ ಸಂಬಂಧಿಸಿದಂತೆ ಸರ್ಕಾರ ಸರಿಯಾದ ಲೆಕ್ಕಪರಿಶೋಧನೆ ನಡೆಸಬೇಕು. ಕೋವಿಡ್ -19 ನಿಂದ ಸಾವನ್ನಪ್ಪಿದ ಎಲ್ಲಾ ವೈದ್ಯರಿಗೆ ಸರ್ಕಾರ 50 ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನನ್ನ ತಪ್ಪಿನಿಂದಾಗಿ ರಾಹುಲ್ಗಾಂಧಿ ಕೆಟ್ಟ ಟ್ರೋಲ್ಗೆ ಒಳಗಾದರು; ಕಾಂಗ್ರೆಸ್ ಐಟಿ ಸೆಲ್ ತೊರೆಯಲು ಕಾರಣ ಬಿಚ್ಚಿಟ್ಟ ರಮ್ಯಾ!

