ಮೋದಿಯೇ ಫೇಲ್‌ ಆಗಿದ್ದಾರೆ; ಇನ್ನು ಸಚಿವರೇನು ಮಾಡುತ್ತಾರೆ: ಸತೀಶ್‌ ಜಾರಕಿಹೊಳಿ

ಜನಪರ ಆಡಳಿತ ನೀಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ವಿಫಲವಾಗಿದ್ದಾರೆ. ಇನ್ನು ಸಚಿವರು ಏನು ಮಾಡುತ್ತಾರೆ? ಎಂದು ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಶಾಸಕ ಸತೀಶ್‌ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.

ಹೊಸ ಸಂಪುಟಕ್ಕೆ ಔಟ್‌ಡೇಟೆಡ್ ಗಿರಾಕಿಗಳನ್ನೇ ಸೇರಿಸಿಕೊಳ್ಳಲಾಗಿದೆ. ರಾಜ್ಯದ ನಾಲ್ವರು ಹೊಸದಾಗಿ ಸಚಿವ ಸಂಪುಟಕ್ಕೆ ಸೇರಿದ್ದಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ಇವರು ಮಾತ್ರವಲ್ಲ ಕರ್ನಾಟಕದ ಬಿಜೆಪಿ ಸಂಸದರ ಪೈಕಿ ಇನ್ನೂ 10 ಮಂದಿಯನ್ನು ಸಚಿವರನ್ನಾಗಿ ಮಾಡಿದರೂ ಉಪಯೋಗ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ಗಂಟೆಗೆ 50 ಕಿ.ಮೀ. ವೇಗದಲ್ಲಿ ಓಡುತ್ತಿತ್ತು. ಈಗ ಹೊಸಬರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಇನ್ಮುಂದೆ ಗಂಟೆಗೆ 30 ಕಿ.ಮೀ. ವೇಗದಲ್ಲಿ ಹೋಗಲಿದೆ. ಮೀರಜ್‌ನಿಂದ ಪಂಢರಪುರಕ್ಕೆ ಮೆರವಣಿಗೆ ಹೋದಂತೆ ನಿಧಾನವಾಗಿ ಸಾಗಲಿದೆ ಎಂದು ಅವರು ಟೀಕಿಸಿದ್ದಾರೆ.

ಜನರಿಗಾಗಿ ಕೆಲಸ ಮಾಡುವ ಇಚ್ಛಾಶಕ್ತಿ ಪ್ರಧಾನಿ ಮೋದಿಯವರಲ್ಲೇ ಇಲ್ಲ. ಸೇನಾಧಿಪತಿಯಲ್ಲೇ ಇಚ್ಛಾಶಕ್ತಿ ಇಲ್ಲದಿರುವಾಗ ಜೊತೆಗಿರುವ ಸೈನಿಕರೇನು ಮಾಡುತ್ತಾರೆ? ಪ್ರಧಾನಿ ಭೇಟಿಯಾಗಲು ಮಂತ್ರಿಗಳಿಗೇ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಕೋರ್ಟ್‌ ಆದೇಶ ಮಾಡಿದ್ದರಿಂದಾಗಿ ಕೇಂದ್ರದಿಂದ ರಾಜ್ಯಕ್ಕೆ ಆಮ್ಲಜನಕ ಲಭ್ಯವಾಯಿತು. ಕೋವಿಡ್ ಲಸಿಕೆಗಾಗಿ ಜನರು ಪರದಾಡುವುದು ತಪ್ಪಿಲ್ಲ. ಈಗಿನಂತೆಯೇ ನಡೆದರೆ ಲಸಿಕಾ ಅಭಿಯಾನ ಪೂರ್ಣವಾಗಲು ಇನ್ನೂ ಎರಡು ವರ್ಷಗಳು ಬೇಕಾಗುತ್ತವೆ ಎಂದು ಹೇಳಿದರು.

ಇದನ್ನೂ ಓದಿ: ಕೊರೊನಾ 2ನೇ ಅಲೆ ಕಾರಣ; ಮೋದಿ ಜಾಗತಿಕ ಜನಪ್ರಿಯತೆ ಭಾರೀ ಕುಸಿತ!

Spread the love

Leave a Reply

Your email address will not be published. Required fields are marked *